ಕುಡಿವ ನೀರಿಗಾಗಿ ಖಾಲಿ ಕೊಡ ಹಿಡಿದು ಪ್ರತಿಭಟನೆ

KannadaprabhaNewsNetwork | Published : May 17, 2024 12:34 AM

ಸಾರಾಂಶ

ಸುಡು ಬಿಸಿಲಿನ ತಾಪದಿಂದ ನೀರಿನ ಹಾಹಾಕಾರ ದಿನೇ ದಿನೇ ಹೆಚ್ಚಾಗಿದ್ದು, ಬರಗಾಲ ಆವರಿಸಿ ಗ್ರಾಮದ ಕೆರೆಗಳು ಬತ್ತಿ ಹೋಗಿವೆ

ಮುಳಗುಂದ: ಸಮೀಪದ ನೀಲಗುಂದ ಗ್ರಾಮದ ಚಳ್ಳಮ್ಮನ ನಗರದಲ್ಲಿ ಕಳೆದ ಮೂರು ತಿಂಗಳಿಂದ ಕುಡಿವ ನೀರು ಪೂರೈಕೆ ಸ್ಥಗಿತಗೊಂಡಿದ್ದು, ಸಮರ್ಪಕ ನೀರು ಪೂರೈಸುವಂತೆ ಮಹಿಳೆಯರು ಗ್ರಾಪಂ ಅಧಿಕಾರಿ ವಿರುದ್ಧ ಪ್ರತಿಭಟನೆ ನಡೆಸಿ, ಖಾಲಿ ಕೊಡ ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.

ಚಿಂಚಲಿ ಗ್ರಾಪಂ ವ್ಯಾಪ್ತಿಯ ನೀಲಗುಂದದ ಚಳ್ಳಮ್ಮನ ನಗರಕ್ಕೆ ನೀರು ಪೂರೈಸುತ್ತಿದ್ದ ಕೊಳವೆ ಬಾವಿಯ ಮೋಟರ್ ಕೆಟ್ಟು 3ತಿಂಗಳಾಗಿದ್ದು, ದುರಸ್ತಿ ಮಾಡದೇ ಗ್ರಾಪಂ ಅಧಿಕಾರಿ ನಿರ್ಲಕ್ಷ್ಯ ವಹಿಸಿರುವುದು ನೀರು ಸ್ಥಗಿತಕ್ಕೆ ಕಾರಣವಾಗಿದೆ. ಈ ನಗರದಲ್ಲಿ 350 ಕ್ಕೂ ಹೆಚ್ಚು ಮನೆಗಳಿವೆ, ಕುಡಿವ ನೀರಿಗಾಗಿ ತಳ್ಳುವ ಗಾಡಿ ಹಿಡಿದು ದಿನವಿಡಿ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

ಸುಡು ಬಿಸಿಲಿನ ತಾಪದಿಂದ ನೀರಿನ ಹಾಹಾಕಾರ ದಿನೇ ದಿನೇ ಹೆಚ್ಚಾಗಿದ್ದು, ಬರಗಾಲ ಆವರಿಸಿ ಗ್ರಾಮದ ಕೆರೆಗಳು ಬತ್ತಿ ಹೋಗಿವೆ, ದನಕರುಗಳಿಗೂ ನೀರಿನ ಬರ ಬಂದಿದೆ. ಬಡವರಿಗೆ ದಿನವಿಡಿ ಕೂಲಿ ಕೆಲಸ ಬಿಟ್ಟು ನೀರು ತರುವ ಕೆಲಸವಾಗಿದೆ, ದಿನ ಬಳಕೆಗಷ್ಟೇ ಅಲ್ಲದೆ ಕುಡಿಯಲು ಒಂದು ಕೊಡ ನೀರು ಸಿಗುತ್ತಿಲ್ಲ, ಜನಪ್ರತಿನಿಧಿಗಳು, ಅಧಿಕಾರಿಗಳು ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಹೀಗೆ ಮುಂದುವರೆದರೆ ಗ್ರಾಪಂ ಎದುರು ಕೊಡ ಹಿಡಿದು ನೀರು ಕೊಡದ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಫಿರಾನಬಿ ನದಾಫ್, ಸಾವಿತ್ರಿ ಕುರ್ತಕೋಟಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಗ್ರಾಪಂ ಸದಸ್ಯ ವಿನಯ್ ಬಂಗಾರಿ ಮಾತನಾಡಿ, ಸರ್ಕಾರ ಕುಡಿಯುವ ನೀರಿಗಾಗಿ ಲಕ್ಷಾಂತರ ಖರ್ಚು ಮಾಡುತ್ತಿದೆ, ಆದರೆ ಚಿಂಚಲಿ ಗ್ರಾಪಂ ಪಿಡಿಒ ನಿರ್ಲಕ್ಷ್ಯದಿಂದ ಚಳ್ಳಮ್ಮನ ನಗರಕ್ಕೆ ಒಂದು ಟ್ಯಾಂಕರ್ ನೀರು ಕೂಡಾ ಪೂರೈಕೆ ಆಗುತ್ತಿಲ್ಲ. ನೀರು ಲಭ್ಯವಿದ್ದರೂ ಬೋರವೆಲ್‌ ದುರಸ್ಥಿ ಮಾಡದೇ ನಿರ್ಲಕ್ಷ ವಹಿಸಿದ್ದಾರೆ. ಈ ಬಗ್ಗೆ ಸಾಕಷ್ಟು ಬಾರಿ ಮನವಿ ಕೊಟ್ಟರು ಪ್ರಯೋಜನವಾಗಿಲ್ಲ. ಈ ಬಗ್ಗೆ ಗದಗ ಜಿಪಂ ಸಿಇಒ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ, ಗದಗ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ವೇಳೆ ಚಳ್ಳಮ್ಮನ ನಗರದ ಮಹಿಳೆಯರು ಇದ್ದರು.

Share this article