ಚಾಮರಾಜನಗರ: ಶಾಲೆಗೆ ಶಿಕ್ಷಕರನ್ನು ನೇಮಿಸುವಂತೆ ಒತ್ತಾಯಿಸಿ ನಗರದ ಪಿಡಬ್ಲ್ಯೂಡಿ ಕಾಲೋನಿಯ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಬಸವರಾಜೇಂದ್ರ ಮೆಡಿಕಲ್ ಟ್ರಸ್ಟ್ ದತ್ತು ಶಾಲೆ) ವಿದ್ಯಾರ್ಥಿಗಳು ಹಾಗೂ ಪೋಷಕರು ಶಾಲೆಯ ಎದುರು ಪ್ರತಿಭಟನೆ ನಡೆಸಿದರು.ಶಾಲೆಯಲ್ಲಿ ಕಾಯಂ ಶಿಕ್ಷಕರು ಇಲ್ಲದೇ ವಿದ್ಯಾರ್ಥಿಗಳಿಗ ಪಾಠ ಪ್ರವಚನಕ್ಕೆ ತೊಂದರೆಯಾಗಿದೆ. ಶಿಕ್ಷಣ ಇಲಾಖೆಗೆ ಶಿಕ್ಷಕರನ್ನು ನೇಮಕ ಮಾಡುವಂತೆ ಹಲವು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ನೇಮಕ ಮಾಡುತ್ತಿಲ್ಲ. ಇದರಿಂದ ಶಾಲೆಯಲ್ಲಿ ಕಾಯಂ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಒಬ್ಬರು, ಇಬ್ಬರು ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಅದರಲ್ಲಿ ಒಬ್ಬರು ಗೈರಾಗಿದ್ದಾರೆ. ಎಲ್‌ಕೆಜಿಯಿಂದ 7ನೇ ತರಗತಿವರೆಗೆ ಒಟ್ಟು 320 ಮಕ್ಕಳು ಇದ್ದಾರೆ. ಮಕ್ಕಳ ಪಾಠಪ್ರವಚನಕ್ಕೆ ತೊಂದರೆಯಾಗಿದೆ. ಕಾಯಂ ಶಿಕ್ಷಕರನ್ನು ನೇಮಕ ಮಾಡಬೇಕು ಎಂದು ಪೋಷಕರು ಆಗ್ರಹಿಸಿದರು. ಇಲಾಖೆಯ ಅಧಿಕಾರಿಗಳು ಕೂಡಲೇ ಶಿಕ್ಷಕರನ್ನು ನೇಮಕ ಮಾಡಬೇಕು ಎಂದು ಪ್ರತಿಭಟನಾನಿರತರು ಪಟ್ಟು ಹಿಡಿದರು.
ವಿಷಯ ತಿಳಿದು ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ರಾಜೀವ್ ಭೇಟಿ ನೀಡಿದರು. ಪ್ರತಿಭಟನೆಯಲ್ಲಿ ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಮೋಹನ್ ನಗು, ಉಪಾಧ್ಯಕ್ಷ ಮುತ್ತುರಾಮು, ಯುವ ಕಾಂಗ್ರೆಸ್ ಸೋಮೇಶ್ ನಾಯಕ,ಎಸ್ ಡಿ ಎಂಸಿ ಸದಸ್ಯ ಬಿಬಿಖುತೇಜ,ಪೋಷಕರಾದ ಪ್ರವೀಣ್,ಮನು,ತ್ಯಾಗರಾಜ, ಖಲೀಂವುಲ್ಲಾ, ಮಹೇಶ್, ಮಾದೇಶ್, ಜ್ಯೋತಿ ಹಾಗೂ ಮಕ್ಕಳ ಭಾಗವಹಿಸಿದ್ದರು.