ಸೆ. 8ರಂದು ತುಂಗಭದ್ರಾ ಮಂಡಳಿ ಕಚೇರಿ ಎದುರು ಪ್ರತಿಭಟನೆ

KannadaprabhaNewsNetwork |  
Published : Aug 30, 2025, 01:01 AM IST
29ಎಚ್‌ಪಿಟಿ2- ಹೊಸಪೇಟೆಯ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲೀಪಾಟೀಲ್ ಮಾತನಾಡಿದರು. | Kannada Prabha

ಸಾರಾಂಶ

ತುಂಗಭದ್ರಾ ಜಲಾಶಯ ನೀರು ಬಳಕೆಗೆ ಪರ್ಯಾಯ ಕ್ರಮದ ಬಗ್ಗೆ ಆ. 31ರೊಳಗೆ ಮಾಹಿತಿ ನೀಡದಿದ್ದರೆ ಸೆ. 8ರಂದು ತುಂಗಭದ್ರಾ ಮಂಡಳಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲೀಪಾಟೀಲ್ ಹೇಳಿದ್ದಾರೆ.

ಹೊಸಪೇಟೆ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕೊಚ್ಚಿ ಹೋಗಿದ್ದು, ಎಲ್ಲ ಕ್ರಸ್ಟ್‌ಗೇಟ್‌ಗಳ ಬದಲಾವಣೆ ಕಾರ್ಯ ಕೈಗೆತ್ತಿಕೊಂಡಿದ್ದರಿಂದ ಈ ಬಾರಿ ಬೇಸಿಗೆ ಬೆಳೆಗೆ ನೀರಿಲ್ಲವೆಂದು ಘೋಷಿಸಿದ್ದಾರೆ. ಹಾಗಾದರೆ ಅದಕ್ಕೆ ಪರ್ಯಾಯವಾಗಿ ಕೈಗೊಂಡ ಕ್ರಮವೇನು? ಎನ್ನುವುದರ ಬಗ್ಗೆ ಆ. 31ರ ಒಳಗಾಗಿ ಉತ್ತರಿಸಬೇಕು. ಇಲ್ಲವೇ, ಸೆ. 8ರಂದು ತುಂಗಭದ್ರಾ ಮಂಡಳಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲೀಪಾಟೀಲ್ ಎಚ್ಚರಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ಗೇಟ್ ಕಳಚಿಬಿದ್ದು ಒಂದು ವರ್ಷ ಕಳೆದಿದೆ. ಆನಂತರ ಸ್ಥಳಕ್ಕೆ ಭೇಟಿ ನೀಡಿದ್ದ ರಾಷ್ಟ್ರೀಯ ಜಲಾಶಯ ಸುರಕ್ಷತಾ ಪ್ರಾಧಿಕಾರದ ಅಧಿಕಾರಿಗಳು ಎಲ್ಲ ಕ್ರಸ್ಟ್‌ಗೇಟ್‌ಗಳನ್ನು ಬದಲಾಯಿಸುವಂತೆ ಸಲಹೆ ನೀಡಿದ್ದರು. ಆದರೆ, ತಕ್ಷಣಕ್ಕೆ ಯಾವುದೇ ಕ್ರಮ ಕೈಗೊಳ್ಳದ ಕಾರಣ ಈಗ ತುಂಗಭದ್ರಾ ಜಲಾಶಯದ ಕೆಳಭಾಗದ ಲಕ್ಷಾಂತರ ಎಕರೆ ಪ್ರದೇಶ ಎರಡನೇ ಬೆಳೆಯಿಂದ ವಂಚಿತವಾಗುತ್ತಿದೆ ಎಂದು ದೂರಿದರು. ತುಂಗಭದ್ರಾ ಅಧಿಕಾರಿಗಳ ಬೇಜವಾಬ್ದಾರಿತನ, ನಿರ್ಲಕ್ಷ್ಯ ಹಾಗೂ ಭ್ರಷ್ಟಾಚಾರದ ಧೋರಣೆಯಿಂದಾಗಿ ಜಲಾಶಯ ಆಪತ್ತಿನಲ್ಲಿ ಸಿಲುಕಿದೆ. ಈ ಭಾಗದ ಜನಪ್ರತಿನಿಧಿಗಳ ಹಿತಾಸಕ್ತಿ ಕೊರತೆಯಿಂದಾಗಿ ಸಮನಾಂತರ ಜಲಾಶಯದ ಪ್ರಸ್ತಾವನೆ ನನೆಗುದಿಗೆ ಬಿದ್ದಿದೆ. 33 ಟಿಎಂಸಿ ಅಡಿ ಅಷ್ಟು ಹೂಳು ತುಂಬಿದ್ದರೂ, ಸಮನಾಂತರ ಜಲಾಶಯ ನಿರ್ಮಾಣಕ್ಕೆ ಸರ್ಕಾರ ಮೀನಮೇಷ ಎಣಿಸುತ್ತಿದೆ. ನಮಗೆ ದೊರೆಯಬೇಕಿದ್ದ ನೀರು, ಆಂಧ್ರಪ್ರದೇಶದ ಪಾಲಾಗುತ್ತಿದೆ. ಇದೊಂದು ಅಂತಾರಾಜ್ಯ ವಿಷಯ ಎಂಬ ಸಬೂಬು ನೀಡುವುದನ್ನು ಬಿಟ್ಟು, ತನ್ನ ನಿಲುವು ಸ್ಪಷ್ಟಪಡಿಸಬೇಕು ಎಂದರು.

ರೈತ ಮುಖಂಡ ಶ್ಯಾಮ್ ಸುಂದರ್ ಕೀರ್ತಿ ಮಾತನಾಡಿ, ಜಲಾಶಯ ನಿರ್ಮಾಣಗೊಂಡು ಸುಮಾರು 7 ದಶಕಗಳನ್ನು ಪೂರೈಸಿದ್ದು, 50 ವರ್ಷಗಳ ಗ್ಯಾರಂಟಿ ನೀಡಿದ್ದ ಕ್ರಸ್ಟ್‌ಗೇಟ್‌ಗಳು ಇನ್ನೂ ಬಾಳಿಕೆ ಬಂದಿವೆ. ಆದರೆ, ಈಗ ನಿರ್ಮಿಸುತ್ತಿರುವ ಗೇಟ್‌ಗಳು ಎಷ್ಟು ವರ್ಷಗಳು ಬರಲಿವೆ ಎಂದು ಅಧಿಕಾರಿಗಳು ಗ್ಯಾರಂಟಿ ನೀಡಬೇಕು ಎಂದರು.

ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಜೆ.ಎಂ. ವೀರಸಂಗಯ್ಯ, ಹೊಸಪೇಟೆ ತಾಲೂಕು ಅಧ್ಯಕ್ಷ ಗಂಟೆ ಸೋಮಶೇಖರ, ಮುಖಂಡರಾದ ಗೋಣಿಬಸಪ್ಪ, ಎಂ.ಎಲ್.ಕೆ. ನಾಯ್ಡು, ರವಿ, ವೆಂಕಟೇಶ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು