ರಾಣಿಬೆನ್ನೂರು: ವಿಶ್ವಮಾನ್ಯ ಬಸವ ಧರ್ಮಕ್ಕೆ ಪ್ರಪಂಚದ ಬದುಕನ್ನೇ ಅರಳಿಸುವ ವಿಶಾಲ ಚಿಂತನೆಯ ಶಕ್ತಿ ಹಾಗೂ ಕುಬ್ಜ ಮನಸ್ಸು ಮೌಢ್ಯಗಳಿಂದ ಮನುಷ್ಯನನ್ನು ಮುಕ್ತ ಮಾಡುವ ಶಕ್ತಿಯೂ ಇದೆ ಎಂದು ದೊಡ್ಡಪೇಟೆ ವಿರಕ್ತಮಠದ ಗುರುಬಸವ ಸ್ವಾಮಿಗಳು ನುಡಿದರು. ನಗರದ ನಾಗಶಾಂತಿ ಉನ್ನತಿ ಪದವಿಪೂರ್ವ ಕಾಲೇಜಿನಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ತಾಲೂಕು ಘಟಕ ಆಯೋಜಿಸಿದ್ದ ಶರಣ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ವಚನ ಸಾಹಿತ್ಯ ಸುಲಲಿತವಾಗಿ ಜೀವನ ಸಂದೇಶಗಳನ್ನು ಬಿತ್ತರಿಸುವ ಶಕ್ತ ಸಾಹಿತ್ಯವಾಗಿದೆ. ಇದು ಎಲ್ಲರ ಹೃದಯ ತಟ್ಟಿ ಬದುಕಿನ ಸತ್ಯ ಸಿದ್ಧಾಂತಗಳನ್ನು ಅರಿವಿಗೆ ತರುತ್ತದೆ. ನಾವು ಚೆನ್ನಾಗಿ ಬದುಕುವ ಜತೆಗೆ ಇತರರನ್ನು ಬದುಕಲು ಬಿಡಿ ಎಂಬ ಸಂದೇಶ ಇದರಲ್ಲಿದೆ. ವಚನಗಳ ಪ್ರಚಾರ ಪ್ರಸಾರ ಒಂದು ಸಾತ್ವಿಕ ಸಮಾಜದ ಶ್ರೇಷ್ಠ ಚಿಂತನೆಯ ಸತ್ಕಾರ್ಯ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರೊ. ಮಾರುತಿ ಶಿಡ್ಲಾಪೂರ ಮಾತನಾಡಿ, ಸುತ್ತೂರಿನ ಶಿವರಾತ್ರಿ ರಾಜೇಂದ್ರ ಸ್ವಾಮಿಗಳು, ವಚನ ಸಂದೇಶಗಳನ್ನು ಜಗದಾದ್ಯಂತ ಪಸರಿಸಬೇಕು ಎಂಬ ಹಂಬಲಕ್ಕಾಗಿ ಶರಣ ಸಾಹಿತ್ಯ ಪರಿಷತ್ತನ್ನು ಆರಂಭಿಸಿದರು. ಮನೆ ಮನೆಯಿಂದ ದೇಶ- ವಿದೇಶಗಳಲ್ಲೂ ಈಗ ಶರಣರ ವಚನ ಸಾಹಿತ್ಯದ ಶಕ್ತಿ ಸಾಮರ್ಥ್ಯವನ್ನು ಅರಿಯುವಂತಾಗಿದೆ. ಯುವಪೀಳಿಗೆಯ ಉತ್ತಮ ಭವಿಷ್ಯಕ್ಕಾಗಿ ಶರಣ ಸಾಹಿತ್ಯದ ಸಂಸ್ಕಾರ ಬೇಕಾಗಿದೆ ಎಂದರು.ತಾಲೂಕು ಘಟಕದ ಅಧ್ಯಕ್ಷ ರಾಜೇಶ್ವರಿ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ನಾಗಶಾಂತಿ ಉನ್ನತಿ ಪದವಿಪೂರ್ವ ಕಾಲೇಜಿನ ಮಹಾಪೋಷಕ ಬಸವರಾಜ ಪಾಟೀಲ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಗಾಯತ್ರಿ ಕುರವತ್ತಿ, ದಾನೇಶ್ವರಿ ಜಾಗೃತಿ ಅಕ್ಕನ ಬಳಗದ ಅಧ್ಯಕ್ಷೆ ಸುನಂದಮ್ಮ ತಿಳವಳ್ಳಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರಭಾಕರ ಸಿಗ್ಲಿ ಅತಿಥಿಗಳಾಗಿ ಆಗಮಿಸಿದ್ದರು. ಡಾ. ಕಾಂತೇಶರೆಡ್ಡಿ ಗೋಡಿಹಾಳ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಶಕುಂತಲಮ್ಮ ಜಂಬಗಿ, ವಾಸಪ್ಪ ಕುಸಗೂರ ಅವರನ್ನು ಸನ್ಮಾನಿಸಲಾಯಿತು.ಮಂಜುಳಾ ಮಾಜಿಗೌಡರ. ಜಗದೀಶ ಮಳಿಮಠ, ಎಸ್.ಕೆ. ನೇಶ್ವಿ, ಎಸ್.ಎಚ್. ಪಾಟೀಲ, ನಾಗರತ್ನ ಗುಡಿಹಳ್ಳಿ ಮತ್ತಿತರರಿದ್ದರು.