ಗುಂಡ್ಲುಪೇಟೇಲಿ ರೈತ ಸಂಘ ಹೆದ್ದಾರಿ ತಡೆದು ಆಕ್ರೋಶ । ದಿಢೀರ್ ರಸ್ತೆ ತಡೆ ನಡೆಸಿದ್ದರಿಂದ ಸಾರ್ವಜನಿಕರು, ಪ್ರವಾಸಿಗರ ಆಕ್ಷೇಪ
ಮುಖ್ಯಮಂತ್ರಿಗಳಿಗೆ ರೈತರು ಸಲ್ಲಿಸಿದ್ದ ದೂರುಗಳನ್ನು ಕಸದ ಬುಟ್ಟಿಗೆ ಎಸೆದ ಪ್ರಕರಣ ಖಂಡಿಸಿ ಪಟ್ಟಣದಲ್ಲಿ ಸಾಮೂಹಿಕ ರೈತ ಸಂಘದ ಕಾರ್ಯಕರ್ತರು ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ರೈತ ಸಂಘದ ಮುಖಂಡ ಹೊನ್ನೂರು ಪ್ರಕಾಶ್ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರು ಮೈಸೂರು-ಊಟಿ ಹೆದ್ದಾರಿ ತಡೆದ ಸಮಯದಲ್ಲಿ ಹಲವು ರೈತ ಸಂಘದ ಮುಖಂಡರು ಮಾತನಾಡಿ ಮುಖ್ಯಮಂತ್ರಿ, ಸಚಿವರ ವಿರುದ್ಧ ಆಕ್ರೋಶ ಹೊರ ಹಾಕಿದರು.
‘ಮುಖ್ಯಮಂತ್ರಿಗಳೇ ನೀವು ರೈತ ಸಂಘದಿಂದ ಬಂದವರು, ಅಲ್ಲದೆ ಸಮಾಜವಾದಿ ಆಗಿದ್ದೀರಾ, ಮನವಿ ಪತ್ರಗಳನ್ನು ಬಿಸಾಡಿದ ಪ್ರಕರಣದಲ್ಲಿ ಸಿಎಂಗೆ ಮಾನ, ಮಾರ್ಯಾದೆ ಇದ್ರೆ ಕೂಡಲೇ ರೈತರ ಕ್ಷಮೆ ಕೇಳಬೇಕು, ಕ್ಷಮೆ ಕೇಳದಿದ್ದರೆ ರಾಜೀನಾಮೆ ನೀಡಿ ಮನೆಗೆ ತೆರಳಿ ಎಂದು ಕಿಡಿಕಾರಿದರು.
ದಿಢೀರ್ ಪ್ರತಿಘಟನೆ ಕಂಡ ಸಾರ್ವಜನಿಕರು ಸಬ್‌ಇನ್ಸ್‌ಪೆಕ್ಟರ್ ಸಾಹೇಬ ಗೌಡರಿಗೆ ಕರೆ ಮಾಡಿ ಆಕ್ರೋಶ ವ್ಯಕ್ತಪಡಿಸಿದಾಗ ಎಸ್‌ಐ ರಸ್ತೆ ತಡೆ ನಿಲ್ಲಿಸಿ, ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಸಂಚಾರ ಅಸ್ತವ್ಯಸ್ತ:
ಸಾರ್ವಜನಿಕರ ಆಕ್ಷೇಪ:
ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಸಾಂವಿಧಾನಿಕ ಹಕ್ಕು ಆಗಂತ ದಿಢೀರ್ ಹೆದ್ದಾರಿ ತಡೆ ನಡೆಸಿ, ಸಾರ್ವಜನಿಕರಿಗೆ ತೊಂದರೆ ಕೊಡುವುದು ಸರೀನಾ? ಪ್ರತಿಭಟನಾ ಮೆರವಣಿಗೆ ನಡೆಸಿ, ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಲಿ ಅದು ಬಿಟ್ಟು ಹೆದ್ದಾರೀಲಿ ರಸ್ತೆ ತಡೆ ನಡೆಸಲು ಅವಕಾಶವಿಲ್ಲ. ಆದರೂ ಸ್ಥಳೀಯ ಪೊಲೀಸರು ರಸ್ತೆ ತಡೆ ನಡೆಸಲು ಅವಕಾಶ ನೀಡಿದ್ದು ಸರಿಯಲ್ಲ ಎಂದು ಬೆಂಗಳೂರಿನ ವಕೀಲ ಪ್ರಶಾಂತ್ ಎಂಬುವರು ಕನ್ನಡಪ್ರಭದೊಂದಿಗೆ ಮಾತನಾಡಿ ಆಕ್ರೋಶ ಹೊರಹಾಕಿದರು.
ಕರೆ ಸ್ವೀಕರಿಸದ ಎಸ್ಪಿ!:
ಪಟ್ಟಣದಲ್ಲಿ ಪೊಲೀಸರ ಅನುಮತಿ ಪಡೆಯದೇ ರಸ್ತೆತಡೆ ನಡೆಸೋ ಬಗ್ಗೆ ಪ್ರತಿಕ್ರಿಯೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಸಂಪರ್ಕಿಸಿದಾಗ ಮೊಬೈಲ್ ಕರೆ ಸ್ವೀಕರಿಸಿಲ್ಲ!ಸಾರ್ವಜನಿಕರ ಆಕ್ರೋಶದ ಬಗ್ಗೆ ಕನ್ನಡಪ್ರಭ ಪತ್ರಿಕೆಯು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಎರಡು ಬಾರಿ ಕರೆ ಮಾಡಿದರೂ, ಕರೆ ಸ್ವೀಕರಿಸಿಲ್ಲ.