ಬಸವಣ್ಣನವರಿಗೆ ಅವಮಾನ ಖಂಡಿಸಿ ಪ್ರತಿಭಟನೆ

KannadaprabhaNewsNetwork | Published : Oct 22, 2023 1:01 AM

ಸಾರಾಂಶ

ಚಿತ್ತಾಪೂರ ತಾಲೂಕಿನ ಹಲಕರ್ಟಿ ಗ್ರಾಮದಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರ ವಿರೂಪಗೊಳಿಸಿರುವ ಘಟನೆ ಖಂಡಿಸಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ತಾಳಿಕೋಟೆ ಈಚೆಗೆ ಕಲಬುರ್ಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಹಲಕರ್ಟಿ ಗ್ರಾಮದಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರವನ್ನು ಕಿಡಿಗೇಡಿಗಳು ವಿರೂಪಗೊಳಿಸಿರುವ ಘಟನೆ ಖಂಡಿಸಿ ಶನಿವಾರ ಸ್ಥಳೀಯ ವೀರಶೈವ ಲಿಂಗಾಯತ ಯುವ ಘಟಕ, ಶ್ರೀ ಬಸವೇಶ್ವರ ಉತ್ಸವ ಸಮಿತಿ ಹಾಗೂ ಬಸವ ಅಭಿಮಾನಿ ಬಳಗ ಅಲ್ಲದೇ ವಿವಿಧ ಸಮಾಜದವರು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಶ್ರೀಗಳ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಯಿತು. ಶ್ರೀ ಅಂಬಾಭವಾನಿ ಮಂದಿರದಿಂದ ಪ್ರಾರಂಭಗೊಂಡ ಈ ಬೃಹತ್ ಪ್ರತಿಭಟನಾ ಮೆರವಣಿಗೆ ಕತ್ರಿ ಬಜಾರ್‌ ಮಾರ್ಗವಾಗಿ ವಿಠ್ಠಲ ಮಂದಿರ ರಸ್ತೆ, ಶಿವಾಜಿ ಮಹಾರಾಜ ಚೌಕ್, ಬಸ್ ನಿಲ್ದಾಣ ಪ್ರಮುಖ ರಸ್ತೆ ಗುಂಟಾ ಹಾಯ್ದು ಬಸವೇಶ್ವರ ವೃತ್ತದಲ್ಲಿ ಸಭೆಯಾಗಿ ಮಾರ್ಪಟ್ಟಿತು. ನಂತರ ಮಾನವ ಸರಪಳಿ ನಿರ್ಮಿಸಿ ಖಂಡಿಸಲಾಯಿತು. ಈ ವೇಳೆ ಮಾತನಾಡಿದ ಗುಂಡಕನಾಳ ಬೃಹನ್ಮಠದ ಶ್ರೀಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಬಸವಣ್ಣನವರ ಭಾವಚಿತ್ರಕ್ಕೆ ಮಾಡಿದ ಅವಮಾನ ಇಡೀ ಮಾನವ ಕುಲಕ್ಕೆ ಅವಮಾನ ಮಾಡಿದಂತಾಗಿದೆ. ಇದನ್ನು ಎಲ್ಲರೂ ಅರ್ಥೈಸಿಕೊಂಡು ನಡೆಯಬೇಕೆಂದರು. ಏನಾದರೂ ಆಗು ಮೊದಲು ಮಾನವನಾಗು ಎಂಬ ಸಂದೇಶ ನೀಡಿದ ಅಂತಹ ಮಹಾತ್ಮರಿಗೆ ಅವಮಾನವೆಸಗುತ್ತಾ ಸಾಗಿ ಬಂದಿರುವುದನ್ನು ನೋಡಿದರೆ ಇದು ಇಡೀ ಭಾರತೀಯರ ಸಂಸ್ಕೃತಿಗೆ ಒಂದಿಲ್ಲಾ ಒಂದು ದಿನ ಧಕ್ಕೆ ತರುವುದರಲ್ಲಿ ಸಂಶಯವಿಲ್ಲ. ಚಿತ್ತಾಪೂರ ತಾಲೂಕಿನ ಘಟನೆಯನ್ನು ನಾವೆಲ್ಲ ಶ್ರೀಗಳು ಒಗ್ಗೂಡಿ ಖಂಡಿಸುತ್ತೇವೆ. ಕೂಡಲೇ ತಪ್ಪಿಸ್ಥರಿಗೆ ತಕ್ಕ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು. ದೇವರಹಿಪ್ಪರಗಿ ಜಡಿಮಠದ ಶ್ರೀ ಜಡಿಸಿದ್ದೇಶ್ವರ ಮಹಾಸ್ವಾಮಿಗಳು ಮಾತನಾಡಿ ನಮ್ಮ ಭಾರತ ದೇಶ ಒಳ್ಳೆಯ ಸಂಸ್ಕೃತಿಯ ನಾಡಾಗಿದೆ. ಬಸವಣ್ಣನವರು ಕಾಯಕ ದಾಸೋಹ ಮಾಡುತ್ತಾ ಸಾಗಿಬಂದಂತವರು. ಜಾತಿ ಬೇಧ ಮಾಡದೇ ಏಕತೆಯ ಸಂದೇಶ ಸಾರುತ್ತಾ ಸಾಗಿಬಂದ ಅಂತಹ ಮಹಾತ್ಮರ ಭಾವಚಿತ್ರಕ್ಕೆ ದುಷ್ಕೃತ್ಯವೆಸಗಿದ ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆಯಾಗಬೇಕು. ಇಂತಹ ಕಾರ್ಯಕ್ಕೆ ಶೀಘ್ರವೇ ಸರ್ಕಾರ ಗಮನ ಹರಿಸಬೇಕೆಂದು ಹೇಳಿದ ಶ್ರೀಗಳು ಇಂತಹ ಕಿಡಿಗೇಡಿಗಳಿಂದ ಭಾರತೀಯ ಸಂಸ್ಕೃತಿ ಹಾಳಾಗುತ್ತಿದೆ. ಇಂತವರನ್ನು ಗಡಿಪಾರು ಮಾಡಲು ಅಥವಾ ಗಲ್ಲಿಗೇರಿಸುವ ಕಾರ್ಯಕ್ಕೆ ಒತ್ತಾಯಿಸಬೇಕು ಎಂದು ಆಗ್ರಹಿಸಿದರು. ಪಡೇಕನೂರ ದಾಸೋಹ ಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮಾತನಾಡಿ, ಬಸವಣ್ಣನವರು ಹುಟ್ಟಿ ಬರದಿದ್ದರೆ ಧರ್ಮವೆಂಬುದೇ ಉಳಿಯುತ್ತಿದ್ದಿಲ್ಲ. ಮಹಾತ್ಮರ ಭಾವಚಿತ್ರಕ್ಕೆ ಮೂರ್ತಿಗಳಿಗೆ ಈಚೆಗೆ ಅವಮಾನವೆಸಗುತ್ತಾ ಸಾಗಿರುವುದು ಖಂಡನೀಯ ಎಂದರು. ಮುಸ್ಲಿಂ ಧಾರ್ಮಿಕ ಮುಖಂಡ ಸೈಯದಶಕೀಲಅಹ್ಮದ ಖಾಜಿ, ಚಬನೂರಿನ ಜ್ಯೋತಿಷ್ಯ ರತ್ನ ಶ್ರೀ ರಾಮಲಿಂಗಯ್ಯ ಮಹಾಸ್ವಾಮಿಗಳು, ಬಿಜೆಪಿ ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ), ಪುರಸಭಾ ಮಾಜಿ ಸದಸ್ಯ ವಿಜಯಸಿಂಗ್ ಹಜೇರಿ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಆರ್.ಎಲ್.ಕೊಪ್ಪದ ಮೊದಲಾದವರು ಮಾತನಾಡಿದರು. ಈ ಪ್ರತಿಭಟನಾ ಮೆರವಣಿಗೆಯಲ್ಲಿ ಶ್ರೀ ಖಾಸ್ಗತೇಶ್ವರ ಮಠದ ಉಸ್ತುವಾರಿ ವೇ.ಮುರುಘೇಶ ವಿರಕ್ತಮಠ, ದೇವರ ಹಿಪ್ಪರಗಿ ಪರದೇಶಿ ಮಠದ ಶ್ರೀ ಶಿವಯೋಗಿ ಮಹಾ ಸ್ವಾಮಿಗಳು, ಕುಂಟೋಜಿ ಹಿರೇಮಠದ ಶ್ರೀ ಚನ್ನವೀರದೇವರು, ನಾವದಗಿ ಹಿರೇಮಠದ ಶ್ರೀ ರಾಜೇಂದ್ರ ಒಡೆಯರ ಸ್ವಾಮಿಗಳು, ಕೈಲಾಸಪೇಠೆಯ ಶ್ರೀ ಬಸವಪ್ರಭು ದೇವರು, ತುಂಬಗಿ-ಸಾಸನೂರ ಹಿರೇಮಠದ ಶ್ರೀ ಮಹಾಂತಲಿಂಗ ಶಿವಾಚಾರ್ಯರು, ಇಂಗಳಗೇರಿಯ ಶರಣೆ ಅಕ್ಕಮಹಾದೇವಿ ಮಾತಾಜಿ, ಮುಖಂಡರಾದ ವ್ಹಿ.ಸಿ.ಹಿರೇಮಠ(ಹಂಪಿ), ಶಿವಶಂಕರ ಹಿರೇಮಠ, ನಾಗಪ್ಪ ಚಿನಗುಡಿ, ಇಬ್ರಾಹಿಂ ಮನ್ಸೂರ, ಬಸನಗೌಡ ಮಾಲಿಪಾಟೀಲ, ಮುದಕಪ್ಪ ಬಡಿಗೇರ, ಸಂಗನಗೌಡ ಬಿರಾದಾರ, ಮಹಾಂತೇಶ ಮುರಾಳ, ಜಗದೀಶ ಬಿಳೇಭಾವಿ, ನಾಗರಾಜ ಬಳಿಗಾರ, ಅಶೋಕ ಚಿನಗುಡಿ, ನಿಂಗು ಕುಂಟೋಜಿ, ಸಂಗನಗೌಡ ಅಸ್ಕಿ, ಪ್ರಭುಗೌಡ ಮದರಕಲ್ಲ, ಕಾಶಿನಾಥ ಮುರಾಳ, ಭೀಮಣ್ಣ ಇಂಗಳಗಿ, ಲಂಕೇಶ ಪಾಟೀಲ, ಮುತ್ತು ಕಶೆಟ್ಟಿ, ಪರಶುರಾಮ ತಂಗಡಗಿ, ಡಿ.ಕೆ.ಪಾಟೀಲ, ಅಶೋಕ ಜಾಲವಾದಿ, ರಾಜು ಸಜ್ಜನ, ಬಸವರಾಜ ಕುಂಬಾರ, ವಿಶ್ವನಾಥ ಬಿದರಕುಂದಿ, ನದೀಂ ಕಡು, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ನಾರಾಯಣ ಸುಭೇದಾರ, ಸಂತೋಷ ಘಾವಡೆ, ಮೊದಲಾದವರು ಪಾಲ್ಗೊಂಡಿದ್ದರು. ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಅಲ್ಲದೇ ಮೂರ್ತಿಗೆ ಆಗುತ್ತಿರುವ ಅವಮಾನ ಇಡೀ ಮಾನವ ಕುಲವೇ ತಲೆ ತಗ್ಗಿಸುವಂತೆ ಮಾಡಿದೆ. ಇದು ಹೀಗೆ ಮುಂದುವರೆದರೆ ಅಪಾಯ ಕಟ್ಟಿಟ್ಟ ಬುತ್ತಿ. ಬಸವಣ್ಣವರಿಗೆ ಅವಮಾನ ಮಾಡಿರುವ ಆರೋಪಿಗಳಿಗೆ ಶಿಕ್ಷೆಯಾಗಲಿ. -ಶರಣೆ ಕಾಶಿಬಾಯಿ ಅಮ್ಮನವರು ತಾಳಿಕೋಟೆ

Share this article