ಗದಗ: ನಗರದ ಕಳಸಾಪುರ ರಸ್ತೆಯಲ್ಲಿರುವ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್)ನಲ್ಲಿ ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆಯು ನಡೆಸಿದ ಪದವೀಧರ ಪ್ರಾಥಮಿಕ ಶಿಕ್ಷಕರ ಪರೀಕ್ಷೆಯಲ್ಲಿ ಆಯ್ಕೆಯಾಗಿ ಕೌನ್ಸೆಲಿಂಗ್ ಮೂಲಕ ಸ್ಥಳ ಆಯ್ಕೆ ಮಾಡಿಕೊಂಡ ನೂತನ ಶಿಕ್ಷಕರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಶನಿವಾರ ನೇಮಕಾತಿ ಆದೇಶ ಪ್ರತಿ ವಿತರಿಸಿದರು.
ಗದಗ ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ನೀಗಿಸುವ ನಿಟ್ಟಿನಲ್ಲಿ ನೂತನವಾಗಿ ಆಯ್ಕೆಯಾದ ಶಿಕ್ಷಕರು ಕಾರ್ಯನಿರ್ವಹಿಸಬೇಕು. ನಿಮ್ಮಿಂದ ಸಮಾಜದ ಸುಧಾರಣೆಯೊಂದಿಗೆ ಸುರಕ್ಷತೆಯಡೆಗೆ ಸಾಗುವ ಜವಾಬ್ದಾರಿ ವಹಿಸಲಾಗಿದೆ. ಯುವ ಶಿಕ್ಷಕರಾದ ತಾವುಗಳು ತಮ್ಮ ವೃತ್ತಿಯಲ್ಲಿ ದಕ್ಷತೆ, ಪ್ರಾಮಾಣಿಕತೆ, ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿಪ ಸದಸ್ಯಎಸ್.ವಿ. ಸಂಕನೂರ ಮಾತನಾಡಿ, ಸಮಾಜ ಉತ್ತಮ ದಿಕ್ಕಿನಡೆಗೆ ಚಲಿಸುವ ಗುರುತರ ಜವಾಬ್ದಾರಿ ಶಿಕ್ಷಕ ವರ್ಗ ನಿಭಾಯಿಸಬೇಕಿದೆ. ನಿಮ್ಮಿಂದ ವಿದ್ಯಾರ್ಥಿಗಳ ಭದ್ರ ಭವಿಷ್ಯ ಅನಾವರಣಗೊಳ್ಳಬೇಕು. ಆಯ್ಕೆಯಾದ ಶಿಕ್ಷಕರೆಲ್ಲರೂ ತಮ್ಮದೇ ಆದ ಕೊಡುಗೆಯನ್ನು ಸಮಾಜಕ್ಕೆ ಸಲ್ಲಿಸಬೇಕೆಂದು ತಿಳಿಸಿದರು.ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಎಂ.ಎ. ರಡ್ಡೇರ, ಡಯಟ್‌ದ ಪ್ರಾ. ಜಿ.ಎಲ್. ಬಾರಾಟಕ್ಕೆ, ಗಣ್ಯರಾದ ಬಿ.ಬಿ. ಅಸೂಟಿ, ಸಿದ್ದು ಪಾಟೀಲ, ಶಿಕ್ಷಣ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು ಹಾಜರಿದ್ದರು.