ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶನಿವಾರ ಆಯೋಜಿಸಲಾದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ ದೇಶದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ಆಸ್ತಿ ರಕ್ಷಣೆ ಸಂದರ್ಭದಲ್ಲಿ ಹುತಾತ್ಮರಾದ ಪೊಲೀಸರಿಗೆ ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶನಿವಾರ ಆಯೋಜಿಸಲಾದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜಿ.ಪಂ. ಸಿಇಒ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಉಪ ಪೊಲೀಸ್ ವರಿಷ್ಠಾಧಿಕಾರಿ ಕೆ.ಸುಂದರರಾಜ್, ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ, ಡಿವೈಎಸ್‌ಪಿ ಜಗದೀಶ್, ಪ್ರಮುಖರಾದ ಪಿ.ಎ.ನಂಜಪ್ಪ, ಐ.ಪಿ.ಮೇದಪ್ಪ, ಅನೂಪ್ ಮಾದಪ್ಪ, ಅನಂತ ಎಚ್.ಎಸ್., ಚೆನ್ನನಾಯಕ, ಮಂಜು ಎಚ್.ಡಿ., ವಾಣಿಶ್ರೀ, ಸವಿತಾ, ಲಿಂಗಪ್ಪ, ಶ್ರೀಧರನ್ ನಾಯರ್, ಮುತ್ತಪ್ಪ, ಅಂಬೆಕಲ್ಲು ನವೀನ್, ಸೂರ್ತಲೆ ಸೋಮಣ್ಣ, ಗೀತಾ ಗಿರೀಶ್, ನಿರಂಜನ, ಮಧುಕರ, ಆಂಥೋಣಿ ಡಿಸೋಜ, ಪೂಣಚ್ಚ, ಬಿ.ಬಿ.ಜಗದೀಶ್, ವೆಂಕಪ್ಪ, ಸಿದ್ದೇಶ್, ಸೇರಿದಂತೆ ಹಲವರು ಹುತಾತ್ಮ ಪೊಲೀಸ್ ಸ್ಮಾರಕಕ್ಕೆ ಹೂಗುಚ್ಛ ಅರ್ಪಿಸಿ, ಗೌರವ ನಮನ ಸಲ್ಲಿಸಿದರು. ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಕಳೆದ ವರ್ಷ ಕರ್ತವ್ಯ ನಿರ್ವಹಿಸುವಾಗ ದೇಶದಲ್ಲಿ ಪ್ರಾಣ ಕಳೆದುಕೊಂಡ ಪೊಲೀಸ್ ಅಧಿಕಾರಿಗಳು ಮತ್ತು ಪೇದೆಗಳ ಹೆಸರು ಓದಿದರು. ಈ ಸಂದರ್ಭ ಮಾತನಾಡಿದ ಕೆ.ರಾಮರಾಜನ್, ನಾಗರಿಕರ ಸಮಗ್ರ ಸುರಕ್ಷತೆ ಹಾಗೂ ಭದ್ರತೆಗಾಗಿ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುವ ಪೊಲೀಸರ ಕರ್ತವ್ಯ ನಿಷ್ಠೆ ಹಾಗೂ ನಿಸ್ವಾರ್ಥ ಸೇವೆಯನ್ನು ಸದಾ ಸ್ಮರಿಸುವಂತಾಗಬೇಕು ಎಂದು ಹೇಳಿದರು. 1959ರ ಅ.21ರಂದು ಭಾರತದ ಗಡಿ ಪ್ರದೇಶದಲ್ಲಿರುವ ಅಕ್ಷಯ್ ಚಿನ್ ಎಂಬ ಸ್ಥಳದಲ್ಲಿ ಸಿಆರ್‌ಪಿಎಫ್ ಪಡೆಯ ಕರಣ್ ಸಿಂಗ್, ಎಸ್.ಐ ಮತ್ತು ಸಿಬ್ಬಂದಿ ಗಡಿ ಭದ್ರತಾ ಕರ್ತವ್ಯದಲ್ಲಿರುವಾಗ ಚೀನಾ ಪಡೆ ದಾಳಿ ನಡೆಸಿತು. ನಮ್ಮ ಭಾರತೀಯ ವೀರ ಪೊಲೀಸರು ಎದೆಗುಂದದೆ ಜೀವದ ಹಂಗು ತೊರೆದು ಧೈರ್ಯ ಮತ್ತು ಸಾಹಸದಿಂದ ಹೋರಾಟ ನಡೆಸಿದ್ದು, ಈ ಸಂದರ್ಭದಲ್ಲಿ 10 ಜನ ಪೊಲೀಸರು ವೀರ ಮರಣ ಹೊಂದಿದರು. 9 ಜನ ಪೊಲೀಸರು ಗಾಯಗೊಂಡು ಸೆರೆಯಾಗಿದರು. ಧೈರ್ಯ ಮತ್ತು ಸಾಹಸದಿಂದ ಹೋರಾಟ ನಡೆಸಿ ವೀರ ಮರಣ ಹೊಂದಿದ ಪೊಲೀಸರ ಸಾವಿಗೆ ಇಡೀ ಭಾರತ ದೇಶದ ಜನತೆಯೇ ಶೋಕಿಸಿತು ಮತ್ತು ಹುತಾತ್ಮರಾದ ಪೊಲೀಸರ ನೆನಪಿಗಾಗಿ ಘಟನೆ ನಡೆದ ಸ್ಥಳದಲ್ಲಿ ಸಮುದ್ರ ಮಟ್ಟದಿಂದ ಸುಮಾರು 16 ಸಾವಿರ ಅಡಿ ಎತ್ತರದಲ್ಲಿ ಒಂದು ಸ್ಮಾರಕವನ್ನು ಭಾರತ ಸರ್ಕಾರ ನಿರ್ಮಿಸಿದೆ ಎಂದರು. ಕಳೆದ ವರ್ಷ ಭಾರತ ದೇಶದಾದ್ಯಂತ ಒಟ್ಟು 189 ಪೊಲೀಸರು ಸೇವೆಯಲ್ಲಿದ್ದಾಗ ಹುತಾತ್ಮರಾಗಿದ್ದಾರೆ. ಅವರಲ್ಲಿ ಕರ್ನಾಟಕದಿಂದ ರವಿ ಸಿ. ಉಕ್ಕುಂದ್, ಶಬೀರ್ ಹುಸೈನ್, ಸುಭಾಸ್ ಮಡಿವಾಳ್, ಕೆ.ಜೈ ಶ್ರೀನಿವಾಸ್, ನಾಗರಾಜು ಎಂ., ವೆಂಕಟೇಶ್, ಮಯೂರ್ ಚವಾಣ್, ಕಾರೆಪ್ಪ, ಸಿದ್ದೇಶ್ವರ ಎನ್., ಶಿಕಂದರ್ ನಾಟಿಕಾರ್, ಸುರೇಶ್ ಎನ್., ರಮೇಶ್ ಮಲ್ಲಪ್ಪ, ಶರಣಬಸಪ್ಪ, ಮಹೇಶ್, ನಿಂಗಪ್ಪ, ಬಿ.ಎನ್. ಗುದ್ದದ್ ಹುತಾತ್ಮರಾಗಿದ್ದಾರೆ ಎಂದು ಓದಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಜಿ.ಪಂ. ಸಿಇಒ ವರ್ಣಿತ್ ನೇಗಿ ಮಾತನಾಡಿ, ರಾಷ್ಟ್ರದ ಗಡಿ ಪ್ರದೇಶದಲ್ಲಿ ಹೇಗೆ ಸೈನಿಕರು ಕರ್ತವ್ಯ ನಿರ್ವಹಿಸುತ್ತಾರೋ ಅದೇ ರೀತಿ ರಾಷ್ಟ್ರದ ಆಂತರಿಕ ವ್ಯವಸ್ಥೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಮಹತ್ತರವಾಗಿದೆ. ಸದಾ ಎಚ್ಚರವಹಿಸಿ ಸಾರ್ವಜನಿಕರ ರಕ್ಷಣೆ ಮತ್ತು ಸುರಕ್ಷತೆಗೆ ಗಮನಹರಿಸುತ್ತಾರೆ ಎಂದರು. ಜಿಲ್ಲಾ ಸಶಸ್ತ್ರ ಪಡೆಯ ಚೆನ್ನನಾಯಕ ನೇತೃತ್ವದಲ್ಲಿ ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆಯಿಂದ ಮೂರು ಸುತ್ತು ಕುಶಾಲತೋಪು ಹಾರಿಸಿ, ಗೌರವ ಅರ್ಪಿಸಲಾಯಿತು. ಸಿದ್ದೇಶ್ ನೇತೃತ್ವದ ಪೊಲೀಸ್ ವಾದ್ಯ ತಂಡದವರು ರಾಷ್ಟ್ರಗೀತೆ ಹಾಡಿದರು. ಅಂತೋಣಿ ಡಿಸೋಜ ನಿರೂಪಿಸಿ, ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.