ಶೂಟೌಟ್ ಖಂಡಿಸಿ ಹನೂರಿನಲ್ಲಿ ಪ್ರತಿಭಟನೆ

KannadaprabhaNewsNetwork |  
Published : Aug 28, 2026, 01:45 AM IST
 ಶೂಟೌಟ್ ಖಂಡಿಸಿ ಹನೂರಿನಲ್ಲಿ ಪ್ರತಿಭಟನೆ | Kannada Prabha

ಸಾರಾಂಶ

ಆ.15ರಂದು ಕಾವೇರಿ ವನ್ಯಜೀವಿಧಾಮದ ಶಾಗ್ಯ ವಾಪ್ತಿಯ ರೈತರನ್ನು ಬೇಟೆಗಾರರೆಂದು ಬಿಂಬಿಸಿ ಅರಣ್ಯ ಇಲಾಖೆ ಅಧಿಕಾರಿಗಳು ಗುಂಡು ಹಾರಿಸಿ ಕೊಂದಿದ್ದಾರೆ ಎಂದು ಆರೋಪಿಸಿ ಗುರುವಾರ ಹನೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಹನೂರು

ಆ.15ರಂದು ಕಾವೇರಿ ವನ್ಯಜೀವಿಧಾಮದ ಶಾಗ್ಯ ವಾಪ್ತಿಯ ರೈತರನ್ನು ಬೇಟೆಗಾರರೆಂದು ಬಿಂಬಿಸಿ ಅರಣ್ಯ ಇಲಾಖೆ ಅಧಿಕಾರಿಗಳು ಗುಂಡು ಹಾರಿಸಿ ಕೊಂದಿದ್ದಾರೆ ಎಂದು ಆರೋಪಿಸಿ ಗುರುವಾರ ಹನೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಗೊ ಮುನ್ನ ಪಟ್ಟಣದ ಕೆಂಪೇಗೌಡ ಸರ್ಕಲ್‌ನಿಂದ ಮುಖ್ಯ ರಸ್ತೆಯಲ್ಲಿ ಸಾಗಿದ ಪ್ರತಿಭಟನಾಕಾರರು ಸರ್ಕಾರ ಅರಣ್ಯ ಇಲಾಖೆ ಅಧಿಕಾರಿಗಳನ್ನು ಕೂಡಲೇ ಬಂಧಿಸಬೇಕು. ನ್ಯಾಯಾಂಗ ಒಪ್ಪಿಸಬೇಕು. ಜತೆಗೆ ತಪ್ಪಿತಸ್ಥರಿಗೆ ಸೂಕ್ತ ದಂಡನೆ ಆಗಬೇಕು ಎಂದು ಒತ್ತಾಯಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಪ್ರಗತಿಪರ ರೈತ ಸಂಘಟನೆಗಳ ಪ್ರತಿಭಟನೆ ನೇತೃತ್ವ ವಹಿಸಿದ್ದ ಕರ್ನಾಟಕ ರಾಜ್ಯ ರೈತ ಸಂಘದ ಮೂಲ ಸಿದ್ಧಾಂತಗಳ ಸಂಘದ ಜಿಲ್ಲಾಧ್ಯಕ್ಷ ಗೌಡೇಗೌಡ ಮಾತನಾಡಿ, ಆ.16 ರಂದು ಮುಖ್ಯಮಂತ್ರಿಗಳು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ್ದರು. ಹೋರಾಟಗಳು ಶುರುವಾದ ನಂತರ ಅದನ್ನು ಸಿಐಡಿಗೆ ವರ್ಗಾಯಿಸಿದ್ದಾರೆ. ಆದರೆ ನಮ್ಮ ಬೇಡಿಕೆ ಇದನ್ನು ಸಿಬಿಐಗೆ ಕೊಡಬೇಕು ಅಥವಾ ನಿವೃತ್ತ ನ್ಯಾಯಾಧೀಶರಿಂದ ಉನ್ನತ ಮಟ್ಟದ ತನಿಖೆ ನಡೆಸಬೇಕು. ಜತೆಗೆ ಆರೋಪಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಂಪರು ಪರೀಕ್ಷೆ ಮಾಡಿಸಿದರೆ ಸತ್ಯಾಂಶ ಹೊರಬರುತ್ತದೆ ಎಂದು ಒತ್ತಾಯಿಸಿದರು.

ಅರಣ್ಯ ಅಧಿಕಾರಿಗಳು ಉದ್ದೇಶಪೂರ್ವಕವಾಗಿಯೇ ಈ ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ಅಧಿಕಾರಿಗಳನ್ನು ಅರಣ್ಯ ಭವನದ ಎಸಿ ಕಚೇರಿಯಲ್ಲಿ ಕೂರಿಸಿ ಎಲ್ಲಾ ಸೌಲಭ್ಯ ಕೊಡುತ್ತಿದ್ದಾರೆ. ಆದರೆ ನೊಂದ ಕುಟುಂಬಗಳು ಇಂದು ಬೀದಿಯಲ್ಲಿ ನಿಂತಿವೆ. ಸರ್ಕಾರ ಸಂತ್ರಸ್ತ ಕುಟುಂಬಗಳಿಗೆ ಘೋಷಿಸಿರುವ 5 ಲಕ್ಷ ರು. ಪರಿಹಾರ ಸಾಲದು. ಹೆಚ್ಚಿನ ಪರಿಹಾರ ನೀಡಬೇಕು, ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿ ಹೊರಬೇಕು ಎಂದು ಆಗ್ರಹಿಸಿದರು.

ಇಂದು ಸಾಂಕೇತಿಕ ಪ್ರತಿಭಟನೆ ನಡೆಸಿದ್ದು, ಸರ್ಕಾರ ನಿರ್ಲಕ್ಷ್ಯ ಮಾಡಿದರೆ ಕಾನೂನಾತ್ಮಕವಾಗಿ ಇನ್ನೂ ದೊಡ್ಡ ಮಟ್ಟದ ಚಳವಳಿ ರೂಪಿಸಲಾಗುವುದು ಎಂದು ಎಚ್ಚರಿಸಿದರು.

‘ಸುಳ್ಳು ಕತೆ ಕಟ್ಟೋದು ನಿಲ್ಲಿಸಿ, ಸಂತ್ರಸ್ತರಿಗೆ ನ್ಯಾಯ ಕೊಡಿ’

ಕಾವೇರಿ ವನ್ಯಧಾಮದ ಶೂಟೌಟ್ ಪ್ರಕರಣದ ನಂತರ ಅರಣ್ಯ ದಂಚಿನ ಜನರ ಮೇಲೆ ಹಲ್ಲೆ, ಕಾಡಿಗೆ ಬೆಂಕಿ, ಕಳ್ಳಬೇಟೆ ತಡೆ ಶಿಬಿರಗಳನ್ನು ಸುಟ್ಟು ಹಾಕಲಾಗುತ್ತಿದೆ. ಇದಕ್ಕೆಲ್ಲಾ ವೀರಪ್ಪನ್ ಸಹಚರರು, ಎಲ್‌ಟಿಟಿಇ ಬೆಂಬಲಿಗರು ಕಾರಣ ಎಂಬ ಕತೆ ಕಟ್ಟಲಾಗುತ್ತಿದೆ. ಸುಳ್ಳು ಹೇಳೋದಕ್ಕೂ ಒಂದು ಮಿತಿ ಇರಬೇಕು ಎಂದು ಬಿಎಸ್ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.

ನಿಮ್ಮ ಕೈಯಲ್ಲಿ ಇಂಟೆಲಿಜೆನ್ಸ್ ಇದೆ. ಒಂದು ವೇಳೆ ನಿಜವಾಗಿಯೂ ವೀರಪ್ಪನ್ ಅಥವಾ ಎಲ್‌ಟಿಟಿಇ ಸಹಚರರು ಬಂದು ಕುಮ್ಮಕ್ಕು ಕೊಡುತ್ತಿದ್ದರೆ ಅವರನ್ನು ಅರೆಸ್ಟ್ ಮಾಡಿ. ಅದನ್ನು ಬಿಟ್ಟು ಕಾಡಂಚಿನಲ್ಲಿ ವಾಸ ಮಾಡುವ ಮುಗ್ಧ ಜನರಿಗೆ ಯಾಕೆ ಹಿಂಸೆ ಕೊಡ್ತೀರಿ? ಇದು ನಿಮ್ಮ ಇಂಟೆಲಿಜೆನ್ಸ್ ವೈಫಲ್ಯವನ್ನು ಜನರ ಮೇಲೆ ಹಾಕುವ ಕೆಲಸ ಮಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಡೀ ಪ್ರಕರಣದಲ್ಲಿ ಸತ್ತಿರುವವರು ಕರ್ನಾಟಕದವರು. ಆದರೆ ಭಾಷೆಯ ಆಧಾರದ ಮೇಲೆ ಇವರು ತಮಿಳುನಾಡಿನವರು, ತಮಿಳರು ಎಂದು ವಿಭಜಿಸಿ ಚಳವಳಿಯ ದಿಕ್ಕು ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಕರ್ನಾಟಕದ ಟೆರಿಟರಿಯಲ್ಲಿ ವಾಸ ಮಾಡುವವರೆಲ್ಲರೂ ಕನ್ನಡಿಗರೇ. ಮೂರು ಜೀವ ಹೋಗಿದೆ, ಮೂರು ಕುಟುಂಬಗಳು ಅನಾಥವಾಗಿವೆ. ಆ ಕುಟುಂಬಗಳ ಪರವಾಗಿ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುಂದಾಗಬೇಕು ಎಂದರು

ಇದೇ ಸಂದರ್ಭದಲ್ಲಿ ಅರಣ್ಯ ಇಲಾಖೆ ಶೂಟೌಟ್ ಪ್ರಕರಣದ ಮೂವರು ಮೃತಪಟ್ಟ ಸದಸ್ಯರು ಸಹ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು ಪ್ರಗತಿಪರ ಸಂಘಟನೆಯ ಮುಖಂಡರು ವಿವಿಧ ಭಾಗಗಳಿಂದ ಆಗಮಿಸಿದ ಮಹಿಳಾ ರೈತ ಮುಖಂಡರು ಹಾಜರಿದ್ದರು.

ಇದೇ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರತಿಭಟನೆಗೆ ಸೀಮಿತವಾದ ಹನೂರು ಬಂದ್‌
ಗ್ರಾಮೀಣ ಕೃಷಿ ಕಾರ್ಯಾನುಭವದಲ್ಲಿ ಪಶು ಆರೋಗ್ಯ ತಪಾಸಣಾ ಶಿಬಿರ