ದಾಬಸ್‌ಪೇಟೆ ಕಾವೇರಿ ಪೈಪ್‌ಲೈನ್ ವಿರೋಧಿಸಿ ಮಾಗಡಿಯಲ್ಲಿ ಪ್ರತಿಭಟನೆ

KannadaprabhaNewsNetwork |  
Published : May 26, 2026, 01:30 AM IST
ಪಟ್ಟಣದ ಎನ್ಇಎಸ್ ವೃತ್ತದ ಬಳಿ ಪೈಪ್ ಲೈನ್ ಕಾಮಗಾರಿ ನಡೆಸದಂತೆ ಮಾಜಿ ಶಾಸಕ ಎ.ಮಂಜುನಾಥ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಹಿನ್ನಲೆಯಲ್ಲಿ ಮಾಗಡಿ ಪೊಲೀಸರು ವಶಕ್ಕೆ ಪಡೆಯುತ್ತಿರುವುದು.  | Kannada Prabha

ಸಾರಾಂಶ

ಮಾಗಡಿ: ತಾಲೂಕಿನಲ್ಲಿ ಹಾದು ಹೋಗುತ್ತಿರುವ ದಾಬಸ್‌ಪೇಟೆ ಕೈಗಾರಿಕಾ ಪ್ರದೇಶದ ಕಾವೇರಿ ನೀರು ಸರಬರಾಜು ಪೈಪ್‌ಲೈನ್ ಕಾಮಗಾರಿಯನ್ನು ವಿರೋಧಿಸಿ ಮಾಗಡಿ ಪಟ್ಟಣ ಮತ್ತು ಗ್ರಾಮೀಣ ಭಾಗಕ್ಕೂ ಕಾವೇರಿ ನೀರು ಹಂಚಿಕೆಯಾಗಬೇಕೆಂದು ಆಗ್ರಹಿಸಿ ಮಾಡಿದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಾಜಿ ಶಾಸಕ ಎ.ಮಂಜುನಾಥ್ ಹಾಗೂ ಜೆಡಿಎಸ್‌ ಮುಖಂಡರನ್ನು ಬಂಧಿಸಿ ಬಿಡುಗಡೆ ಮಾಡಲಾಯಿತು

ಮಾಗಡಿ: ತಾಲೂಕಿನಲ್ಲಿ ಹಾದು ಹೋಗುತ್ತಿರುವ ದಾಬಸ್‌ಪೇಟೆ ಕೈಗಾರಿಕಾ ಪ್ರದೇಶದ ಕಾವೇರಿ ನೀರು ಸರಬರಾಜು ಪೈಪ್‌ಲೈನ್ ಕಾಮಗಾರಿಯನ್ನು ವಿರೋಧಿಸಿ ಮಾಗಡಿ ಪಟ್ಟಣ ಮತ್ತು ಗ್ರಾಮೀಣ ಭಾಗಕ್ಕೂ ಕಾವೇರಿ ನೀರು ಹಂಚಿಕೆಯಾಗಬೇಕೆಂದು ಆಗ್ರಹಿಸಿ ಮಾಡಿದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಾಜಿ ಶಾಸಕ ಎ.ಮಂಜುನಾಥ್ ಹಾಗೂ ಜೆಡಿಎಸ್‌ ಮುಖಂಡರನ್ನು ಬಂಧಿಸಿ ಬಿಡುಗಡೆ ಮಾಡಲಾಯಿತು.

ಶುಕ್ರವಾರ ಬೃಹತ್ ಪ್ರತಿಭಟನೆಗೆ ಕರೆ: ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರನ್ನು ಬಳಸಿಕೊಂಡು ನಮ್ಮನ್ನು ಬಂಧಿಸಿದರೂ ನಾವು ಹೆದರುವುದಿಲ್ಲ. ನಮ್ಮ ಹಕ್ಕಿಗಾಗಿ ಹೋರಾಟ ಮುಂದುವರಿಯಲಿದೆ. ಮೇ 29ರಂದು ಶುಕ್ರವಾರ ಬೆಳಗ್ಗೆ 10 ಗಂಟೆಗೆ ಹೊಸಪೇಟೆ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತೇವೆ. ಅನ್ಯಾಯದ ವಿರುದ್ಧ ತಾಲೂಕಿನ ಜನತೆ, ರೈತ ಸಂಘಟನೆಗಳು, ಕನ್ನಡಪರ ಹಾಗೂ ದಲಿತ ಸಂಘಟನೆಗಳು ಒಗ್ಗಟ್ಟಾಗಿ ಹೋರಾಡಬೇಕಾಗಿದೆ ಎಂದು ಮಾಜಿ ಶಾಸಕ ಎ.ಮಂಜುನಾಥ್ ಕರೆ ನೀಡಿದರು.

ಸೋಮವಾರ ಬೆಳಗ್ಗೆ ಪಟ್ಟಣದ ಎನ್ಇಎಸ್ ವೃತ್ತದ ಬಳಿ ಪೈಪ್‌ಲೈನ್ ಕಾಮಗಾರಿ ನಡೆಸಲು ಜೆಸಿಬಿ ಹಾಗೂ ಲಾರಿಗಳು ಬರುತ್ತಿದ್ದಂತೆ ಜೆಡಿಎಸ್ ಕಾರ್ಯಕರ್ತರು ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಸ್ಥಳಕ್ಕೆ ಮಾಜಿ ಶಾಸಕ ಎ.ಮಂಜುನಾಥ್ ಆಗಮಿಸಿ ಕೆಐಆರ್‌ಇಡಿ ಅಧಿಕಾರಿಗಳಿಗೆ ನಮಗೂ ಕೂಡ ನೀರು ಹಂಚಿಕೆ ಮಾಡಿ ಇಲ್ಲದಿದ್ದರೆ ಕಾಮಗಾರಿ ಮಾಡಬಾರದು ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

2 ಗಂಟೆ ಆದರೂ ಬಾರದ ಅಧಿಕಾರಿಗಳು: ಮಾಜಿ ಶಾಸಕ ಎ.ಮಂಜುನಾಥ್ ಕಾಮಗಾರಿ ಸ್ಥಳದಲ್ಲೇ 2 ಗಂಟೆಗೂ ಹೆಚ್ಚು ಕಾಲ ಅಧಿಕಾರಿಗಳು ಬರುತ್ತಾರೆಂದು ಕಾದರೂ ಬರಲಿಲ್ಲ. ಪೊಲೀಸರಿಗೆ ಎರಡು ದಿನ ಕಾಮಗಾರಿ ನಿಲ್ಲಿಸಲಿ ಅಧಿಕಾರಿಗಳ ಸಭೆ ನಡೆಸಿ ನಂತರ ಕಾಮಗಾರಿ ಆರಂಭಿಸಿ ಎಂದು ಮಾಜಿ ಶಾಸಕರು ಸ್ಥಳದಿಂದ ತೆರಳಿದರು.

ಮಾಜಿ ಶಾಸಕರು ಸ್ಥಳದಿಂದ ತೆರಳುತ್ತಿದ್ದಂತೆ ಮತ್ತೆ ಕಾಮಗಾರಿ ಆರಂಭಿಸಲಾಯಿತು. ಈ ವಿಷಯ ಮತ್ತೆ ಮಾಜಿ ಶಾಸಕರಿಗೆ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು. ತಕ್ಷಣವೇ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.

ಮಾಜಿ ಶಾಸಕ ಎ.ಮಂಜುನಾಥ್ ಸುದ್ದಿಗಾರರೊಂದಿಗೆ ಮಾತನಾಡಿ, ದಾಬಸ್‌ಪೇಟೆ ಕೈಗಾರಿಕಾ ಪ್ರದೇಶಕ್ಕೆ ಸುಮಾರು ₹1,700 ಕೋಟಿ ರುಪಾಯಿ ವೆಚ್ಚದಲ್ಲಿ ಕಾವೇರಿ ನೀರು ಕೊಂಡೊಯ್ಯುವ ಬೃಹತ್ ಪೈಪ್‌ಲೈನ್ ಯೋಜನೆ ಮಾಗಡಿ ತಾಲೂಕಿನ ರಸ್ತೆಗಳ ಉದ್ದಕ್ಕೂ ಸಾಗುತ್ತಿದೆ. ಆದರೆ ಈ ಭಾಗದ ಜನರಿಗೆ ಕುಡಿಯುವ ನೀರಿನ ಸೂಕ್ತ ವ್ಯವಸ್ಥೆ ಇಲ್ಲದಿದ್ದರೂ, ಸ್ಥಳೀಯರನ್ನು ಕಡೆಗಣಿಸಿ, ನಮ್ಮ ಕಣ್ಣೆದುರೇ ನಮ್ಮ ತಾಲೂಕಿನ ಮೂಲಕ ಕಾವೇರಿ ನೀರು ಕೊಂಡೊಯ್ಯಲಾಗುತ್ತಿದೆ. ತಾಲೂಕಿನಲ್ಲಿ 10 ತಿಂಗಳಿನಿಂದ ಕಾಮಗಾರಿ ನಡೆಯುತ್ತಿದ್ದರೂ ಶಾಸಕ ಬಾಲಕೃಷ್ಣ ಈ ಬಗ್ಗೆ ತುಟಿ ಬಿಚ್ಚಿಲ್ಲ. ಅಧಿಕಾರಿಗಳು ಮತ್ತು ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಮಾಗಡಿ ಜನತೆಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಬಳಿಕ ಪೊಲೀಸರು ವಶಕ್ಕೆ ಪಡೆದಿದ್ದ ಮಾಜಿ ಶಾಸಕರು ಹಾಗೂ ಜೆಡಿಎಸ್ ಮುಖಂಡರನ್ನು ಬಿಡುಗಡೆ ಮಾಡಲಾಯಿತು.

ಇದೇ ವೇಳೆ ಜೆಡಿಎಸ್ ಮುಖಂಡರಾದ ಎಂ.ಎನ್.ಮಂಜು, ಕೆ.ವಿ.ಬಾಲು, ಕರಡಿ ನಾಗರಾಜು, ಸಾಗರ್, ವಕೀಲ ವಸಂತ್, ಮಂಜುನಾಥ್, ಶಭಾಷ್ ಖಾನ್, ಕುದೂರು ಕಿಟ್ಟಿ, ಶಿವಕುಮಾರ್, ಕುಮಾರ್, ಮಹೇಶ್, ಕಾರ್ತಿಕ್, ಪುರುಷೋತ್ತಮ್, ಅನಿಲ್, ವೆಂಕಟೇಶ್ ಇತರರು ಭಾಗವಹಿಸಿದ್ದರು.

(ಫೋಟೋ ಕ್ಯಾಫ್ಞನ್‌)

ಮಾಗಡಿ ಪಟ್ಟಣದ ಎನ್ಇಎಸ್ ವೃತ್ತದ ದಾಬಸ್‌ಪೇಟೆ ಕೈಗಾರಿಕಾ ಪ್ರದೇಶದ ಕಾವೇರಿ ನೀರು ಸರಬರಾಜು ಪೈಪ್‌ಲೈನ್ ಕಾಮಗಾರಿಯನ್ನು ವಿರೋಧಿಸಿ ಪ್ರತಿಭಟಿಸಿದ ಮಾಜಿ ಶಾಸಕ ಎ.ಮಂಜುನಾಥ್ ಹಾಗೂ ಜೆಡಿಎಸ್‌ ಮುಖಂಡರನ್ನು ಮಾಗಡಿ ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಯಾಣಿಕರ ತಂಗುದಾಣಕ್ಕೆ ಶಾಸಕ ಬಾಲಕೃಷ್ಣ ಭೂಮಿಪೂಜೆ
ಕೇವಲ ಓದುಗರ ಪ್ರೀತಿ ಬೆಂಬಲವೇ ಟೀಚರ್ ಪತ್ರಿಕೆಯ ಬಂಡವಾಳ