ರಸಗೊಬ್ಬರ, ತೈಲ ಬೆಲೆ ಏರಿಕೆಗೆ ಖಂಡನೆ

KannadaprabhaNewsNetwork |  
Published : May 28, 2026, 01:15 AM IST
57 | Kannada Prabha

ಸಾರಾಂಶ

ಇಂಧನ ಬೆಲೆ ಏರಿಕೆಯಿಂದಾಗಿ ಅಗತ್ಯವಸ್ತುಗಳ ಬೆಲೆ ದುಬಾರಿಯಾಗಿದ್ದು, ಜನ ಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕನ್ನಡಪ್ರಭ ವಾರ್ತೆ ನಂಜನಗೂಡು ರಸಗೊಬ್ಬರ, ತೈಲ ಬೆಲೆ ಏರಿಕೆ ಮಾಡಿರುವ ಕ್ರಮವನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಬುಧವಾರ ನಂಜನಗೂಡಿನಲ್ಲಿ ಪ್ರತಿಭಟಿಸಿದರು.ಪಟ್ಟಣದ ವಿಶ್ವೇಶ್ವರಯ್ಯ ವೃತ್ತದಿಂದ ಪಾದಯಾತ್ರೆ ಮೂಲಕ ತಾಲೂಕು ಕಚೇರಿಗೆ ತೆರಳಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರೈತ ಸಂಘದ ಹಲವರು ಮಾತನಾಡಿ, ಇಂಧನ ಬೆಲೆ ಏರಿಕೆಯಿಂದಾಗಿ ಅಗತ್ಯವಸ್ತುಗಳ ಬೆಲೆ ದುಬಾರಿಯಾಗಿದ್ದು, ಜನ ಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನು ರಸಗೊಬ್ಬರಗಳ ಬೆಲೆ ಏರಿಸಿರುವುದರಿಂದ ರೈತ ಸಮುದಾಯಕ್ಕೆ ದೊಡ್ಡ ನಷ್ಟವುಂಟಾಗಿದೆ.ಕೇಂದ್ರ ಬಿಜೆಪಿ ಸರ್ಕಾರ ಡಾ.ಎಂ.ಎಸ್. ಸ್ವಾಮಿನಾಥನ್ ವರದಿಯನ್ನು ಜಾರಿಗೆ ತರದೆ ಕೋಟ್ಯಂತರ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಸಂಕಷ್ಟದಲ್ಲಿರುವ ರೈತರಿಗೆ ನೆರವು ನೀಡುವ ಸಲುವಾಗಿ ರಸಗೊಬ್ಬರಗಳ ಬೆಲೆ ಏರಿಕೆಯನ್ನು ವಾಪಸ್ ಪಡೆದುಕೊಂಡು ರಸಗೊಬ್ಬರಗಳ ಮೇಲಿನ ಸಬ್ಸಿಡಿ ಹೆಚ್ಚಿಸಿ ರಿಯಾಯಿತಿ ದರದಲ್ಲಿ ರೈತರಿಗೆ ಗೊಬ್ಬರ ಒದಗಿಸಬೇಕು. ಗೊಬ್ಬರ ಖರೀದಿಸುವ ರೈತರಿಗೆ ಆಧಾರ್ ಲಿಂಕ್ ಮಾಡಿಸುವ ಪ್ರಕ್ರಿಯೆ ಕೈಬಿಡಬೇಕು ಎಂದು ಒತ್ತಾಯಿಸಿದರು. ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಚುನಾವಣೆಯ ಪೂರ್ವದಲ್ಲಿ ಭರವಸೆ ನೀಡಿದ್ದಂತೆ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ಮತ್ತು ಜಾನುವಾರು ಹತ್ಯೆ ಮತ್ತು ಸಂರಕ್ಷಣಾ ಕಾಯಿದೆಯನ್ನು ವಾಪಸ್ ಪಡೆಯಬೇಕು, ಜೊತೆಗೆ ಎಪಿಎಂಸಿಯನ್ನು ರೈತಸ್ನೇಹಿಯಾಗಿ ಬಲಯುತಗೊಳಿಸಬೇಕು ಹಾಗೂ ಕೃಷಿ ಬೆಲೆ ಆಯೋಗವನ್ನು ಶಾಶ್ವತ ಆಯೋಗವನ್ನಾಗಿ ಘೋಷಿಸಬೇಕು ಎಂದು ಒತ್ತಾಯಿಸಿದರು.ಬಳಿಕ ಸ್ಥಳಕ್ಕಾಗಮಿಸಿದ ತಹಶೀಲ್ದಾರ್ ಸ್ಮಿತಾ ರಾಮು ಅವರಿಗೆ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗೆ ಮನವಿ ಮಾಡಿರುವ ಪತ್ರವನ್ನು ಹಸ್ತಾಂತರಿಸಿ ಪ್ರತಿಭಟನೆ ಅಂತ್ಯಗೊಳಿಸಲಾಯಿತು.ರೈತ ಸಂಘದ ತಾಲೂಕು ಅಧ್ಯಕ್ಷ ಮಹೇಶ್, ಪ್ರಧಾನ ಕಾರ್ಯದರ್ಶಿ ಎಂ. ರವಿ, ಯುವ ರೈತ ಘಟಕದ ಜಿಲ್ಲಾಧ್ಯಕ್ಷ ಪ್ರೇಮರಾಜ್, ಶ್ರೀಕಂಠ, ರಮೇಶ್ ಒಡೆಯನಪುರ, ಪ್ರಕಾಶ್ ಇಮ್ಮಾವು, ಮಾದಯ್ಯನಹುಂಡಿ ಬಸಪ್ಪ, ರಘು ಹೊಸಕೋಟೆ, ರಾಚಮ್ಮ, ಕಳಸಮ್ಮ, ಸಾಕಮ್ಮ, ರಾಜಮ್ಮ, ಮಾಳಶೆಟ್ಟಿ, ಗಿರಿರಾಜ್, ಬಸವರಾಜಣ್ಣ, ರಾಜಣ್ಣ, ನಾಗಣ್ಣ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಜೆ ಧಾರಾಕಾರ ಮಳೆಗೆ 57 ಮರಗಳು ಧರೆಗೆ
ಕಾಶಿಗೆ ಹೋಗಿದ್ದ ಅಧಿಕಾರಿ ಮನೇಲಿಚಿನ್ನ ದೋಚಿದ್ದ ಇಬ್ಬರು ಕಳ್ಳರ ಸೆರೆ