ನವಲಗುಂದ: ಬಿಜೆಪಿಯಿಂದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಉಚ್ಚಾಟನೆ ಮಾಡಿರುವುದನ್ನು ಖಂಡಿಸಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಸಮಾಜದ ಮುಖಂಡ ಸದುಗೌಡ ಪಾಟೀಲ ಮಾತನಾಡಿ, ಯತ್ನಾಳ ಅವರು ಪಂಚಮಸಾಲಿ ಸಮಾಜದ ಹಿರಿಯ ಮುಖಂಡರು. 2ಎ ಮೀಸಲಾತಿ ಹೋರಾಟದ ರಾಷ್ಟ್ರೀಯ ಗೌರವಾಧ್ಯಕ್ಷರು. ಇಂಥವರನ್ನು ಅನಾವಶ್ಯಕವಾಗಿ ಉಚ್ಛಾಟನೆ ಮಾಡಿದ್ದು ಖಂಡನೀಯ.
ಬಿಜೆಪಿ ಹೈಕಮಾಂಡ್ ತೆಗೆದುಕೊಂಡಿರುವ ನಿರ್ಧಾರ ತಪ್ಪು. ಹಿಂದೂಗಳ ರಕ್ಷಣೆ ಹಾಗೂ ಪಕ್ಷದ ಹಿತದೃಷ್ಟಿಯಿಂದ ಯತ್ನಾಳ ಅವರನ್ನು ಮತ್ತೆ ಪಕ್ಷಕ್ಕೆ ಗೌರವಯುತವಾಗಿ ಸ್ವಾಗತಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಶಂಕರಗೌಡ ಬಾಳನಗೌಡ್ರ, ಲಕ್ಶ್ಮಣ ನಿಡವಣಿ, ನಾಗನಗೌಡ ಪಾಟೀಲ, ಗೌರೀಶ್ ಕಮತರ, ಸುರೇಶ ಕಮ್ಮಾರ, ದ್ಯಾಮನಗೌಡ ಪಾಟೀಲ, ಮಹೇಶ್ ಕುರ್ತಕೋಟಿ, ಲಾಲ್ ಬಹುದ್ದೂರ ಶಾಸ್ತ್ರಿ, ಸುರೇಶ ನಿಡವಣಿ, ಮಹೇಶ್ ದೇಸಾಯಿ, ಶಂಕರಪ್ಪ ಯಮನೂರ, ಶಂಕರಗೌಡ ಪಾಟೀಲ, ಎಂ.ವಿ. ಹೊಳೆಯನ್ನವರ, ವಿನೋದ ನಾಗರಹಳ್ಳಿ, ಸಂಗಪ್ಪ ನೀಡವಣಿ ಸೇರಿ ನೂರಾರು ಮುಖಂಡರು ಪಾಲ್ಗೊಂಡಿದ್ದರು.
ಧಾರವಾಡ:
ಯತ್ನಾಳ ಅವರಿಲ್ಲದೇ ಬಿಜೆಪಿ ಬರುವ ದಿನಗಳಲ್ಲಿ ಅಧಿಕಾರಕ್ಕೇರುವ ಸಾಧ್ಯತೆ ಕಡಿಮೆ. ಲಕ್ಷಾಂತರ ಹಿಂದೂ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಇದು ಅತೀವ ನೋವುಂಟು ಮಾಡಿದೆ. ರಾಜ್ಯದಲ್ಲಿ ಮತ್ತೇ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದಾದರೆ ಯತ್ನಾಳ ಅವರಂತಹ ಶಕ್ತಿ ಬಿಜೆಪಿಯಲ್ಲಿ ಇರಲೇಬೇಕು. ಪಕ್ಷದಲ್ಲಿರುವ ಸಣ್ಣಪುಟ್ಟ ವೈಮನಸ್ಸುಗಳನ್ನು ವರಿಷ್ಠರು ಕುಳಿತು ಬಗೆಹರಿಸುವ ಕೆಲಸ ಮಾಡಬೇಕು. ಯತ್ನಾಳ ಅವರನ್ನು ಮರಳಿ ಬಿಜೆಪಿಗೆ ಕರೆತರಲೇಬೇಕು ಎಂದು ಆಗ್ರಹಿಸಿದರು.