ದಲಿತ ಸಿಎಂಗೆ ಆಗ್ರಹಿಸಿ ಪಂಜಿನ ಮಂಡ್ಯದಲ್ಲಿ ಪ್ರತಿಭಟನೆ

KannadaprabhaNewsNetwork |  
Published : May 28, 2026, 01:30 AM IST
27ಕೆಎಂಎನ್‌ಡಿ-7ದಲಿತ ಸಿಎಂಗೆ ಒತ್ತಾಯಿಸಿ ಮಂಡ್ಯದ ಜೆ.ಸಿ.ವೃತ್ತದಲ್ಲಿ ಪ್ರಗತಿಪರ ಹೋರಾಟಗಾರರು ಮತ್ತು ದಲಿತ ಸಂಘಟಕರು ಪಂಜಿನ ಮೆರವಣಿಗೆ ನಡೆಸಿ ಪ್ರತಿಭಟಿಸಿದರು. | Kannada Prabha

ಸಾರಾಂಶ

ನಾಳೆ ಕೈ ಹೈಕಮಾಂಡ್ ನಡೆಸುವ ಕಾಂಗ್ರೆಸ್ ಸಂಪುಟ ಸಭೆಯಲ್ಲಿ ದಲಿತ ಸಿಎಂ ಘೋಷಣೆ ಮಾಡಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಂಜಿನ ಬೆಂಕಿಯಲ್ಲಿ ವಿನಾಶವಾಗಲಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷದಿಂದ ಮುಖ್ಯಮಂತ್ರಿ ಬದಲಾವಣೆಯಾದರೆ ದಲಿತರನ್ನು ಮುಖ್ಯಮಂತ್ರಿ ಮಾಡುವಂತೆ ಹೈಕಮಾಂಡ್‌ನ್ನು ಒತ್ತಾಯಿಸಿ ನಗರದಲ್ಲಿ ಪ್ರಗತಿಪರ ಹೋರಾಟಗಾರರು ಮತ್ತು ದಲಿತ ಸಂಘಟಕರು ಪಂಜಿನ ಮೆರವಣಿಗೆ ನಡೆಸಿ ಪ್ರತಿಭಟಿಸಿದರು.

ನಗರದಲ್ಲಿರುವ ಮೈಸೂರು- ಬೆಂಗಳೂರು ಹೆದ್ದಾರಿಯ ಜಯಚಾಮರಾಜೇಂದ್ರ ಒಡೆಯರ್‌ ವೃತ್ತದಲ್ಲಿ ಸೇರಿದ ಸಂಘಟನೆಗಳ ಕಾರ್ಯಕರ್ತರು ಕಾಂಗ್ರೆಸ್ ಹೈಕಮಾಂಡ್ ಗಮನ ಸೆಳೆಯಲು ಪಂಜಿನ ಹೋರಾಟ ನಡೆಸಿ, ದಲಿತ ಸಿಎಂ ಪರ ಘೋಷಣೆಗಳನ್ನು ಕೂಗಿದರು.

ಕರ್ನಾಟಕ ಸಂವಿಧಾನ ಸೇನೆ ರಾಜ್ಯಾಧ್ಯಕ್ಷ ಎಚ್.ಎನ್.ನರಸಿಂಹಮೂರ್ತಿ ಮಾತನಾಡಿ, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಮುನ್ನೆಲೆಗೆ ಬಂದಿದೆ. ಕಳೆದ ೭೫ ವರ್ಷಗಳಿಂದ ಎಸ್‌ಸಿ, ಎಸ್‌ಟಿ, ಒಬಿಸಿ ವರ್ಗಗಳು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುತ್ತಾ ಅಧಿಕಾರಕ್ಕೆ ಬೆಂಬಲಿಸಿಕೊಂಡು ಬಂದಿವೆ. ಆದರೆ ಇದುವರೆಗೆ ಅವಕಾಶ ಸಿಕ್ಕರೂ, ಸಮರ್ಥ ನಾಯಕರಿದ್ದರೂ ದಲಿತ ಸಿಎಂ ಮಾಡಲು ಸಾಧ್ಯವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾಮಾಜಿಕ ವ್ಯವಸ್ಥೆಯನ್ನು ಕಾಂಗ್ರೆಸ್ ಹೈಕಮಾಂಡ್ ಕಾಯ್ದುಕೊಳ್ಳುವಲ್ಲಿ ವಿಫಲವಾಗುತ್ತಿದೆ. ಶೇ.೯೦ರಷ್ಟು ದಲಿತರು ಕಾಂಗ್ರೆಸ್ ಪಕ್ಷ ಗೆಲ್ಲಲು ಕಾರಣರಾಗುತ್ತಿದ್ದಾರೆ ಎಂಬುದು ದೇಶಕ್ಕೇ ಗೊತ್ತು. ಆದರೂ ರಾಜ್ಯದಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ಡಾ.ಪರಮೇಶ್ವರ್ ಅವರು ಮುಖ್ಯಮಂತ್ರಿಯಾಗುವುದನ್ನು ತಪ್ಪಿಸಿದರು. ಅವಕಾಶವಿದ್ದರೂ ದಲಿತರಿಗೆ ಸಿಎಂ ಸ್ಥಾನ ನೀಡುತ್ತಿಲ್ಲ, ಚುನಾವಣೆಯಲ್ಲಿ ಮಾತ್ರ ದಲಿತರ ಓಟುಗಳು ಬೇಕು, ಅಧಿಕಾರ ನೀಡುವಾಗ ಕಣ್ಣಿಗೆ ಕಾಣಿಸುವುದಿಲ್ಲವೇ ಎಂದು ಕೈ ಹೈಕಮಾಂಡ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ದಸಂಸ ಹೋರಾಟಗಾರ ಎಂ.ವಿ.ಕೃಷ್ಣ ಮಾತನಾಡಿ, ಕರ್ನಾಟಕದಲ್ಲಿ ‘ದಲಿತ ಸಿಎಂ’ ಕೂಗು ಆಗಾಗ್ಗೆ ರಾಜಕೀಯ ವಲಯದಲ್ಲಿ ಸದ್ದು ಮಾಡುತ್ತಲೇ ಇದೆ. ಇತ್ತೀಚಿನ ರಾಜಕೀಯ ಬೆಳವಣಿಗೆಗಳಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ದಲಿತರಿಗೆ ನೀಡಬೇಕೆಂದು ಒತ್ತಾಯಿಸಿ ಪಂಜಿನ ಹೋರಾಟ ಮಾಡುತ್ತಿದ್ದೇವೆ ಎಂದರು.

ಕಾಂಗ್ರೆಸ್ ಸರ್ಕಾರಗಳಲ್ಲಿನ ಆಡಳಿತದಲ್ಲಿ ದಕ್ಷತೆ ಹೊಂದಿರುವ ದಲಿತರು ಸಾಕಷ್ಟು ಮಂದಿ ನಾಯಕರಿದ್ದಾರೆ. ನವದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯುವ ವೇಳೆ ದಲಿತ ಸಂಘಟಕರು ದಲಿತ ಸಿಎಂ ಆಗಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿ ಎಚ್ಚರಿಸಿದ್ದರೂ ಮೀನಮೇಷ ಎಣಿಸುತ್ತಿರುವುದು ನಾಚಿಗೆಗೇಡಿನ ವಿಷಯ ಎಂದು ಕಿಡಿಕಾರಿದರು.

ನಾಳೆ ಕೈ ಹೈಕಮಾಂಡ್ ನಡೆಸುವ ಕಾಂಗ್ರೆಸ್ ಸಂಪುಟ ಸಭೆಯಲ್ಲಿ ದಲಿತ ಸಿಎಂ ಘೋಷಣೆ ಮಾಡಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಂಜಿನ ಬೆಂಕಿಯಲ್ಲಿ ವಿನಾಶವಾಗಲಿದೆ ಎಂದು ಎಚ್ಚರಿಸಿದರು.

ಇದೇ ಸಂದರ್ಭದಲ್ಲಿ ಪ್ರಗತಿಪರ ಹೋರಾಟಗಾರರಾದ ಟಿ.ಡಿ.ಬಸವರಾಜ್ ತಗ್ಗಹಳ್ಳಿ, ಉಮೇಶ್, ಮುಕುಂದ್‌ ಹಾಲಹಳ್ಳಿ, ಚನ್ನಕೇಶವ, ಜಿ.ಕೆ.ಕುಮಾರ್, ಪ್ರದೀಪ್ ಹೊಸಹಳ್ಳಿ, ನಿರಂಜನ್, ಟಿ.ಡಿ.ನಾಗರಾಜ್ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಮರ್ಥ್ಯಕ್ಕೆ ಅನುಗುಣವಾಗಿ ಸಮಾಜದ ಸೇವೆ ಮಾಡಿ
ರಸ್ತೆ ಚರಂಡಿ ನಿರ್ಮಾಣಕ್ಕೆ ಶಾಸಕ ಸಿಮೆಂಟ್ ಮಂಜು ಭೂಮಿಪೂಜೆ