ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಗ್ರಾಮದಲ್ಲಿ ಸೋಮವಾರ ಶಾಂತಿಸಭೆ ನಡೆಸಿ ಸೌಹಾರ್ದತೆ ನಿರ್ಮಿಸಬೇಕು ಎಂದು ಅಧಿಕಾರಿಗಳು ಪ್ರಯತ್ನಿಸಿದ್ದರು. ಇದಕ್ಕೆ ಒಪ್ಪದ ಸಂತ್ರಸ್ಥರು ಜಿಲ್ಲಾಡಳಿತದ ತಟಸ್ಥ ಧೋರಣೆಗೆ ಬೇಸತ್ತು ಚಿತ್ರದುರ್ಗಕ್ಕೆ ಆಗಮಿಸಿ ಪ್ರತಿಭಟಿಸಿದರು. ಮಹಿಳೆಯರು ಸುರಿವ ಮಳೆಯಲ್ಲೇ ಉರುಳುತ್ತಾ ತಮ್ಮ ಗೋಳು ತೋಡಿಕೊಳ್ಳುತ್ತಿರುವುದು ಕಂಡು ಬಂದಿತು.
ಸ್ಥಳಕ್ಕೆ ಬಂದ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮನವಿ ಸ್ವೀಕರಿಸದೆ ವಾಪಾಸ್ಸಾದರು. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೇ ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದು ವಾಪಾಸ್ ಕಳುಹಿಸಿದರು.ಹಲ್ಲೆ ನಡೆಸಿರುವ ಆರೋಪಿಗಳನ್ನು ರಕ್ಷಿಸುವ ಕಡೆಗೆ ಪೋಲೀಸ್ ಮತ್ತು ಕಂದಾಯ ಅಧಿಕಾರಿಗಳು ಸಂಚು ನಡೆಸಿದ್ದಾರೆ. ಎಫ್ಐಆರ್ ಆಗಿದ್ದರೂ ಆರೋಪಿಗಳು ರಾಜಾರೋಷವಾಗಿ ಮೀಸೆ ತಿರುವುತ್ತಾ ಊರಿನಲ್ಲಿ ಓಡಾಡುತ್ತಿದ್ದಾರೆ. ನಾವು ದೂರು ಕೊಟ್ಟಂತೆ ಪೊಲೀಸರು ಮಾಡಿಲ್ಲ. ಆರೋಪಿಗಳನ್ನು ಅರೆಸ್ಟ್ ಮಾಡದೇ ಕಾಲಹರಣ ಮಾಡುತ್ತಿರುವ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ದೂರುಗಳ ಸುರಿಮಳೆಗೈಯ್ದರು.
ಕಳೆದ 25 ವರ್ಷಗಳಿಂದ ಆ ಗ್ರಾಮದಲ್ಲಿ ಗ್ರಾಮ ಪಂಚಾಯಿತಿಗೆ ಪರಿಶಿಷ್ಟ ಜಾತಿಗೆ ಸಿಗಬೇಕಾದ ಮೀಸಲು ಸ್ಥಾನವೇ ಲಭ್ಯವಾಗಿಲ್ಲ. ರೋಸ್ಟರ್ ಪಾಲನೆ ಆಗಿಲ್ಲ ಎಂದು ದೂರಿದರು. ಪ್ರತೀ ವರ್ಷವೂ ಸಾರಾಯಿ ಕಂಟ್ರಾಕ್ಟ್ ನಡೆಸುತ್ತಾರೆ. ಅಂದರೆ ಅಕ್ರಮವಾಗಿ ಮದ್ಯ ಮಾರಾಟ ಮಾಡಲು ಗ್ರಾಮಸ್ಥರೇ ಹರಾಜು ಕೂಗುತ್ತಾರೆ. ಒಬ್ಬರೇ ಮದ್ಯ ಮಾರಾಟ ಮಾಡಬೇಕು. ಈ ಬಾರಿ 9.53ಲಕ್ಷಕ್ಕೆ ಹರಾಜು ಕೂಗಲಾಗಿದೆ. ಇದು ಕಾನೂನು ಬಾಹಿರ ಎಂದು ಗೊತ್ತಿದ್ದರೂ ಪೋಲೀಸರು ಅಬಕಾರಿ ಅಧಿಕಾರಿಗಳು ಜಾಣ ಮೌನಕ್ಕೆ ಜಾರಿದ್ದಾರೆ ಎಂದು ದೂರಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ವಿಜಯಕುಮಾರ್, ಕುಮಾರ್, ಮಲ್ಲಿಕಾರ್ಜುನ್, ಸುರೇಶ್, ಹೊನ್ನೂರಸ್ವಾಮಿ, ಅನಂತ್, ಚಂದ್ರಪ್ಪ, ತಿಪ್ಪೇಸ್ವಾಮಿ, ಓಬಳೇಶ್, ಪ್ರಕಾಶ್ ಮತ್ತಿತರರು ಇದ್ದರು.