ಕಡಬನಕಟ್ಟೆ ಗ್ರಾಮಕ್ಕೆ ಎರಡನೇ ಬಾರಿ ಸಿಹಿಗಡುಬು

KannadaprabhaNewsNetwork |  
Published : Aug 04, 2026, 01:15 AM IST
ರಘುಮೂರ್ತಿ ಬಗೆಗಿನ ವರದಿ | Kannada Prabha

ಸಾರಾಂಶ

ಚಿತ್ರದುರ್ಗ ತಾಲೂಕಿನ ಕಡಬನಕಟ್ಟೆ ಗ್ರಾಮದಲ್ಲಿರುವ ಡಿಗ್ರಿ ಕಾಲೇಜು ಮಾದರಿಯ ಸರ್ಕಾರಿ ಪ್ರಾಥಮಿಕ ಶಾಲೆ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ನಿರೀಕ್ಷಿಸಿದಂತೆ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅವರು ಸಿಎಂ ಡಿ.ಕೆ.ಶಿವಕುಮಾರ್ ಸಂಪುಟದ ಸಚಿವರಾಗಿ ಸೋಮವಾರ ಪ್ರಮಾಣ ವಚನ ಸ್ವೀಕಸಿದ್ದಾರೆ. ಇದರಿಂದಾಗಿ ಚಿತ್ರದುರ್ಗ ತಾಲೂಕಿನ ತುರುವನೂರು ಹೋಬಳಿಯ ಪುಟ್ಟ ಗ್ರಾಮ ಕಡಬನಕಟ್ಟೆ ಸ್ವಾತಂತ್ರ್ಯಾನಂತರದ ರಾಜಕಾರಣದಲ್ಲಿ ಎರಡನೇ ಸಚಿವರನ್ನು ಕಂಡಂತಾಗಿದೆ. ಈ ಮೊದಲು ಗ್ರಾಮದ ಜಿ.ಎಚ್‌.ಅಶ್ವಥರೆಡ್ಡಿ ಸಚಿವರಾಗಿದ್ದರು.

ಕಡಬನಕಟ್ಟೆ ಗ್ರಾಮ ಶಾಸಕ ಟಿ.ರಘುಮೂರ್ತಿ ಅವರ ಹುಟ್ಟೂರು. ಒಂದು ರೀತಿಯಲ್ಲಿ ಜಿಲ್ಲಾ ರಾಜಕಾರಣದಲ್ಲಿ ಶಕ್ತಿ ಕೇಂದ್ರವಾಗಿ ಈ ಗ್ರಾಮ ಗುರುತಿಸಿಕೊಂಡಿದೆ. ಈ ಮೊದಲು ತುರುವನೂರು ಹೋಬಳಿ ಜಗಳೂರು ವಿಧಾನಸಭೆ ಕ್ಷೇತ್ರದಲ್ಲಿತ್ತು. ಕ್ಷೇತ್ರ ಪುನರ್ ವಿಂಗಡಣೆಯಾದಾಗ ಚಳ್ಳಕೆರೆ ವಿಧಾಸಭೆ ಕ್ಷೇತ್ರಕ್ಕೆ ಸೇರ್ಪಡೆಯಾಯಿತು.

ಅವಿಭಜಿತ ಚಿತ್ರದುರ್ಗ ಜಿಲ್ಲೆಯ ಜಗಳೂರಿನ ಶಾಸಕರಾಗಿದ್ದ ಅಶ್ವಥರೆಡ್ಡಿಯವರು ಎಸ್.ಬಂಗಾರಪ್ಪ ಅವರ ಸಂಪುಟದಲ್ಲಿ 1990-92 ರಲ್ಲಿ ಲೋಕೋಪಯೋಗಿ ಸಚಿವರಾಗಿದ್ದರು. ಬರೋಬ್ಬರಿ 35 ವರ್ಷಗಳ ನಂತರ ಕಡಬನಕಟ್ಟೆ ಗ್ರಾಮಕ್ಕೆ ಸಚಿವ ಸ್ಥಾನವ ಬರಸೆಳೆದುಕೊಂಡಿದೆ. ಅಶ್ವಥರೆಡ್ಡಿ ಅವರ ಸಹೋದರ ಜಿ.ಎಚ್.ತಿಪ್ಪಾರೆಡ್ಡಿ ಇದೇ ಗ್ರಾಮದವರಾಗಿದ್ದು ಆರು ಬಾರಿ ಎಂಎಲ್ಎ ಹಾಗೂ ಒಮ್ಮೆ ವಿಧಾನ ಪರಿಷತ್ ಸದಸ್ಯರಾಗಿದ್ದರು. ಜೆ.ಎಚ್.ಪಟೇಲ್ ಮುಖ್ಯಮಂತ್ರಿಯಾಗಿದ್ದಾಗ ಗೃಹ ಮಂಡಳಿ ಅಧ್ಯಕ್ಷರಾಗಿದ್ದ ತಿಪ್ಪಾರೆಡ್ಡಿ ಅವರು ಅನೇಕ ಸಲ ಸಚಿವ ಸ್ಥಾನದ ಹತ್ತಿರಕ್ಕೆ ಬಂದಿದ್ದರಾದರೂ ಅವಕಾಶಗಳ ಕ್ಷಿತಿಜದಲ್ಲಿ ನಕ್ಷತ್ರವಾಗಲಿಲ್ಲ.

ಅಶ್ವಥರೆಡ್ಡಿ ಹಾಗೂ ತಿಪ್ಪಾರೆಡ್ಡಿ ಅವರ ಕಡಬನಕಟ್ಟೆ ಗ್ರಾಮವ ಪ್ರತಿನಿಧಿಸಿದ್ದರೂ ರಘುಮೂರ್ತಿ ಅವರ ಕಾಲದಲ್ಲಿ ಅಭಿವೃದ್ಧಿಗೆ ಗ್ರಾಮ ತೆರೆದುಕೊಂಡಿದೆ. ಗ್ರಾಮ ಪ್ರವೇಶ ಮಾಡಿ ತಕ್ಷಣ ಶತಮಾನ ಕಂಡ ಪ್ರಾಥಮಿಕ ಶಾಲೆ ಕೈ ಬೀಸಿ ಕರೆಯುತ್ತದೆ. ಮಿನಿ ವಿಧಾನಸೌಧದ ಮಾದರಿಯಲ್ಲಿ ಶಾಲೆ ನಿರ್ಮಿಸಲಾಗಿದ್ದು ಡಿಗ್ರಿ ಕಾಲೇಜುಗಳೂ ಕೂಡ ಆ ಗೆಟಪ್‌ನಲ್ಲಿ ಕಾಣಿಸುವುದಿಲ್ಲ. ಗ್ರಾಮದಲ್ಲಿರುವ ಬಸ್ ನಿಲ್ದಾಣದಲ್ಲಿ ಪುಟ್ಟದೊಂದು ಲೈಬ್ರರಿ ಅರಳಿದೆ. ಈಶ್ವರ ಹಾಗೂ ಆಂಜನೇಯ ದೇವಸ್ಥಾನಗಳು ಭಕ್ತಾಧಿಗಳ ಕೇಂದ್ರ ಸ್ಥಾನಗಳಾಗಿವೆ. ಅಗಲಿದ ತಮ್ಮ ಏಕ ಮಾತ್ರ ಪುತ್ರನ ಸಮಾಧಿ ಮಾನ್ಯುಮೆಂಟ್ ರೀತಿ ಗೋಚರಿಸುತ್ತಿದೆ.

ರಘುಮೂರ್ತಿ ಅವರು ಕಡಬನಕಟ್ಟೆ ಪಕ್ಕದ ಮುಸ್ಚೂರಿನಲ್ಲಿ ಪ್ರೌಢಶಾಲೆ ಅಭ್ಯಾಸ ಮಾಡಿದ್ದರು. ಆದರೆ ಇದೀಗ ಅವರದೇ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆ ವಿಸ್ತೃತವಾಗಿ ಹರಡಿದ್ದು ಹಳ್ಳಿ ಮಕ್ಕಳು ಬೇರೆಡೆಗೆ ಹೋಗದಂತೆ ಹಿಡಿದಿಟ್ಟಕೊಂಡಿದೆ.

ಅಂದಹಾಗೆ ಚಿತ್ರದುರ್ಗದ ಉದ್ಯಮಿ ಹಾಗೂ ದುರ್ಗದ ಸಿರಿ ಹೋಟೆಲ್‌ನ ಮಾಲೀಕ ಜಿಪಂ ಮಾಜಿ ಸದಸ್ಯ ಬಾಬುರೆಡ್ಡಿ ಕೂಡಾ ಕಡಬನಕಟ್ಟೆ ಗ್ರಾಮದವರೆಂಬುದು ವಿಶೇಷ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಚಿವಸ್ಥಾನ ಆಕಾಂಕ್ಷಿ ಬಿಆರ್‌ ಪಾಟೀಲ್‌, ಖನೀಜ್‌ ಫಾತೀಮಾಗೆ ನಿರಾಶೆ
ಪಿಂಚಣಿಗಳ ಕೊಡದ ಕಾಂಗ್ರೆಸ್‌ ಸರ್ಕಾರ: ರೇಣು