ಸೋಮವಾರ ಕೇಬಲ್ ಕಳವು ಜಾಗಕ್ಕೆ 112 ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ತಲೂಕಿನ ಹಲವೆಡೆ ಕೃಷಿ ಜಮೀ ನನಲ್ಲಿ ಕೊಳವೆ ಭಾವಿಗಳ ಕೇಬಲ್ ಕಳ್ಳತನ ಅವ್ಯಾಹತವಾಗಿ ನಡೆಯುತ್ತಿದೆ. ಸಾವಿರಾರು ರು. ಮೌಲ್ಯದ ಕೇಬಲ್ ಗಳು ಕಳ್ಳರ ಪಾಲಾಗುತ್ತಿರುವುದು ರೈತರ ನಿದ್ದೆಗೆಡಿಸಿದೆ.
ಚಿಕ್ಕಂಗಳ, ಹೊಸಹಳ್ಳಿ, ಅಂದೇನಹಳ್ಳಿ ಗ್ರಾಮಗಳಲ್ಲಿ ರೈತರು ಕೊಳವೆ ಭಾವಿ ರಕ್ಷಣೆ ಮಾಡಲಾಗದೆ ಹೈರಾಣಾಗಿದ್ದಾರೆ. ಮೊದಲೇ ಬರಗಾಲ ಆವರಿಸಿ ಮಳೆಯಿಲ್ಲದೆ ಕೊಳವೆ ಬಾವಿಯನ್ನೆ ನಂಬಿಕೊಂಡ ರೈತರು ಕೇಬಲ್ ಕಳ್ಳರ ಕಾಟದಿಂದ ಹೈರಾಣಾಗಿದ್ದಾರೆ.ಈ ಕೇಬಲ್ ಕಳ್ಳರು ಅತ್ಯಂತ ಚಾಣಾಕ್ಷತೆಯಿಂದ ಕೇಬಲ್ ಕದಿಯುತ್ತಾರೆ. ಈ ಮೂರು ಹಳ್ಳಿಗಳಲ್ಲಿ ಸುಮಾರು 150 ಕ್ಕೂ ಹೆಚ್ಚು ಕೊಳವೆ ಭಾವಿಗಳ ಕೇಬಲ್ ಕದ್ದಿದ್ದಾರೆ. 3-4 ರೈತರ ಕೊಳವೆ ಬಾವಿ ಕೇಬಲ್ ಗಳನ್ನು ಎರಡಕ್ಕೂ ಹೆಚ್ಚು ಬಾರಿ ಕಳ್ಳತನವಾಗಿದೆ.
ಕೇಬಲ್ ಕದಿಯುವ ಕಳ್ಳರು ಈ ಕೊಳವೆ ಬಾವಿಗಳನ್ನು ಹಗಲು ಹೊತ್ತು ಗಮನಿಸುತ್ತಾರೆ. ನಂತರ ರಾತ್ರಿ ಹೊತ್ತು ತೆರಳಿ ಮೊದಲು ಪ್ಯಾನೆಲ್ ಬೋರ್ಡ್ ಬಳಿ ಕೇಬಲ್ ಕಟ್ ಮಾಡಿ ನಂತರ ಕೊಳವೆ ಭಾವಿ ಬಳಿ ಕೇಬಲ್ ಅನ್ನು ಬಲವಾಗಿ ಎಳೆದಾಗ ಕೇಬಲ್ ಕಟ್ ಆಗುತ್ತದೆ. ಹೀಗೆ ಒಂದು ದಿನದಲ್ಲಿ ಮೂರ್ನಾಲ್ಕು ಕೊಳವೆ ಬಾವಿಗಳ ಕೇಬಲ್ ಕದ್ದೊಯ್ಯುತ್ತಾರೆ. ಕದ್ದ ಕೇಬಲ್ ಗಳನ್ನು ಸುಟ್ಟು ದೊರೆಯುವ ತಾಮ್ರದ ತಂತಿಗಳನ್ನು ಕೆ.ಜಿ.ಗೆ ₹800-900ಗೆ ಮಾರಾಟ ಮಾಡುತ್ತಾರೆ. ಇತ್ತ ರೈತರು ಕೊಳವೆ ಬಾವಿ ಚಾಲೂ ಮಾಡಲು ಹೋದಾಗ ಕೇಬಲ್ ಕಳವು ಕಂಡು ಪರದಾಡುವಂತಾಗುತ್ತದೆ.
ಪ್ರತಿ ನಿತ್ಯ ಕೇಬಲ್ ಕಳವಿನಿಂದ ಬೇಸತ್ತು ರೈತರು ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ. ಸೋಮವಾರ ಕೇಬಲ್ ಕಳ್ಳತನ ಜಾಗಕ್ಕೆ 112 ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಈ ಹಿಂದೆ ಕೆಲ ಕಳ್ಳತನ ನಡೆದಾಗ ಪೊಲೀಸ್ ಇಲಾಖೆ ಸೂಚನೆ ನೀಡಿದ ಮೇರೆಗೆ ಚಿಕ್ಕಂಗಳ ಗ್ರಾಪಂ ಅಧ್ಯಕ್ಷರಾಗಿದ್ದ ಪ್ರಕಾಶ ನಾಯ್ಕ ಅವರು ಮುತುವರ್ಜಿ ವಹಿಸಿ ಪಂಚಾಯಿತಿಯಿಂದ ಕೆರೆ ಏರಿ ಮೇಲೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಳಿ ಎರಡು ಸಿಸಿ ಟಿ ವಿ ಕ್ಯಾಮೆರಾ ಅಳವಡಿಸಿದ್ದರು. ಆದರೆ ಅದರಿಂದೇನೂ ಉಪಯೋಗವಾಗಿಲ್ಲ. ಅವುಗಳ ನಿರ್ವಹಣೆ ಮಾಡಬೇಕಾದ ಗ್ರಾಪಂ ಪಿಡಿಒ ಅವುಗಳತ್ತ ಗಮನ ಹರಿಸಿಲ್ಲ. ಒಂದು ವೇಳೆ ಸಿಸಿ ಕ್ಯಾಮೆರಾ ಸರಿಯಾಗಿ ಕೆಲಸ ಮಾಡದ್ದಿದ್ದರೆ ಕೇಬಲ್ ಕಳ್ಳರ ಸುಳಿವು ಸಿಗುವ ಸಾಧ್ಯತೆಯಿತ್ತು ಎಂಬುದು ರೈತರ ಅನಿಸಿಕೆ.