ಮಾಜಿ ಉಪಸಭಾಪತಿ ಎಂ.ಕೆ. ಪ್ರಾಣೇಶ್
ನಾಮನಿರ್ದೇಶಿತ ಸದಸ್ಯರ ಮತದಾನದ ಹಕ್ಕಿಗೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯ ನೀಡಿದ ತೀರ್ಪಿಗೆ ಗೌರವ ಸೂಚಿಸಿ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿರುವುದಾಗಿ ಮಾಜಿ ಉಪಸಭಾಪತಿ ಎಂ.ಕೆ. ಪ್ರಾಣೇಶ್ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ 1996 ರಿಂದಲೇ ಚುನಾವಣಾ ಆಯೋಗದ ನಿಯಮದಂತೆ ನಾಮನಿರ್ದೇಶಿತ ಸದಸ್ಯರು ಮತ ಚಲಾಯಿಸುತ್ತಾ ಬಂದಿದ್ದು, ಈ ಹಿಂದೆ ನಡೆದ ಎಲ್ಲ ಚುನಾವಣೆಗಳಲ್ಲೂ ಇದೇ ಪದ್ಧತಿ ಅನುಸರಿಸಲಾಗಿದೆ. ತಮ್ಮ ಚುನಾವಣೆಯಲ್ಲೂ ನಾಮನಿರ್ದೇಶಿತ ಸದಸ್ಯರ ಮತಗಳು ಚಲಾವಣೆಯಾಗಿದೆ. ಅದರ ಆಧಾರದ ಮೇಲೆಯೇ ಗೆಲುವು ಸಾಧಿಸಿದ್ದೇನೆ ಎಂದರು.ಆದರೆ ಇತ್ತೀಚೆಗೆ ಉಚ್ಚ ನ್ಯಾಯಾಲಯ ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕಿಲ್ಲ ಎಂದು ತೀರ್ಪು ನೀಡಿರುವ ಹಿನ್ನೆಲೆಯಲ್ಲಿ, ಕಾನೂನಿಗೆ ಗೌರವ ಸೂಚಿಸಿ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಹೇಳಿದರು.
ಈ ಬೆಳವಣಿಗೆಯಿಂದ ವೈಯಕ್ತಿಕವಾಗಿ ನೋವಾಗಿದೆ. ಆದರೆ ನ್ಯಾಯಾಂಗದ ಬಗ್ಗೆ ಅಥವಾ ಉಚ್ಚ ನ್ಯಾಯಾಲಯ ಹಾಗೂ ಸುಪ್ರೀಂ ಕೋರ್ಟ್ ತೀರ್ಪುಗಳ ಬಗ್ಗೆ ಯಾವುದೇ ಟೀಕೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ತಮ್ಮ ರಾಜಕೀಯ ಜೀವನದಲ್ಲಿ ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ಯಾರ ಮನಸ್ಸಿಗೂ ನೋವಾಗದಂತೆ ಜವಾಬ್ದಾರಿ ನಿರ್ವಹಿಸಿದ್ದೇನೆ ಎಂಬ ಆತ್ಮತೃಪ್ತಿ ಇದೆ. ತಮ್ಮ ಕಾರ್ಯವೈಖರಿ ಹಾಗೂ ಪಕ್ಷದ ಮೇಲಿನ ನಿಷ್ಠೆ ಗುರುತಿಸಿ ವಿಧಾನ ಪರಿಷತ್ತಿನ ಉಪಸಭಾಪತಿ ಹುದ್ದೆಯಂತಹ ಮಹತ್ವದ ಜವಾಬ್ದಾರಿ ಪಕ್ಷ ನೀಡಿತ್ತು ಎಂದು ಹೇಳಿದರು.