ಟಿ.ರಘುಮೂರ್ತಿ 2013ರಲ್ಲಿ ನಡೆದ ವಿಧಾನಸಭೆ ಚುನಾವಣೆಗೆ ಮೊದಲ ಬಾರಿಗೆ ಸ್ಪರ್ದಿಸಲು ನಾಮಪತ್ರ ಸಲ್ಲಿಸಲು ಆಗಮಿಸಿದ ದೃಶ್ಯ.
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಟಿ.ರಘುಮೂರ್ತಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರವನ್ನು ತನ್ನ ರಾಜಕೀಯ ಕರ್ಮ ಭೂಮಿಯನ್ನಾಗಿ ಮಾಡಿಕೊಂಡು 2013ರಲ್ಲಿ ಶಾಸಕರಾದ ಮೊದಲ ಅವಧಿಯಲ್ಲಿ ಇಡೀ ಕ್ಷೇತ್ರದ ಅಭಿವೃದ್ಧಿಗೆ ಹೈ ಸ್ಪೀಡ್ ಕೊಟ್ಟವರಲ್ಲಿ ಅಗ್ರ ಗಣ್ಯರು.ಆ ಸಮಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರ ಹಿಡಿದ ಪರಿಣಾಮ ಸಿಎಂ ಸಿದ್ದರಾಮಯ್ಯ ಅವರ ವಿಶ್ವಾಸ ಗಳಿಸಿ ಕ್ಷೇತ್ರಕ್ಕೆ ದೊಡ್ಡ ಮಟ್ಟದ ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿ ಪಥದೆಡೆಗೆ ಕೊಂಡೊಯ್ದ ಕೀರ್ತಿ ರಘುಮೂರ್ತಿ ಅವರಿಗೆ ಸಲ್ಲುತ್ತದೆ.
ವೇದಾವತಿ ನದಿಗೆ ಅಲ್ಲಲ್ಲಿ ಅಡ್ಡಲಾಗಿ ಕಟ್ಟಲಾಗಿರುವ ಬೃಹತ್ ಬ್ಯಾರೇಜ್ ಕಂ ಬ್ರಿಡ್ಜ್ ನಿರ್ಮಾಣದಂತಹ ಕಾರ್ಯ ಬರಡು ನೆಲಕ್ಕೆ ಭಗೀರಥಿಯನ್ನು ತಂದಷ್ಟು ಖುಷಿ ಈ ಭಾಗದ ಜನರದ್ದು. ಇದೇ ಅವಧಿಯಲ್ಲಿ ಜಿಲ್ಲಾ ಮಂತ್ರಿಯಾಗಿದ್ದ ಎಚ್.ಆಂಜನೇಯ ಅವರಿಗೂ ಗೊತ್ತಾಗದಂತೆ ಸರ್ಕಾರಿ ಎಂಜಿನಿಯರಿಂಗ್ ಕಾಲೇಜನ್ನು ಒಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೂ ದೊಡ್ಡ ಸಾಧನೆಯೇ ಸರಿ.
ಬಯಲು ಸೀಮೆಯಲ್ಲಿ ಯುವಜನತೆ ಶಿಕ್ಷಣ ಪಡೆಯಲು ಅದರಲ್ಲೂ ಎಂಜಿನಿಯರಿಂಗ್ ನಂತಹ ತಾಂತ್ರಿಕ ಶಿಕ್ಷಣ ಪಡೆಯಲು ಬೇರೆ ಕಡೆಗೆ ಹೋಗುವುದನ್ನು ತಪ್ಪಿಸಲು ಇಂತಹ ಸಾಹಸಕ್ಕೆ ಕೈ ಹಾಕಿದ್ದರು. ಇಡೀ ರಾಜ್ಯಕ್ಕೆ ಮೂರು ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಮಂಜೂರು ಮಾಡಿದ್ದ ಸಿಎಂ ಸಿದ್ದರಾಮಯ್ಯ ಅವರು ಚಳ್ಳಕೆರೆ ಕ್ಷೇತ್ರಕ್ಕೂ ಒಂದನ್ನು ಕೊಟ್ಟಿದ್ದರು.
ತುರುವನೂರು ಪ್ರಥಮ ದರ್ಜೆ ಕಾಲೇಜು ಸ್ಥಳಾಂತರ ಆಗುವುದರ ವಿರುದ್ಧ ಸರ್ಕಾರದ ಮಟ್ಟದಲ್ಲಿ ದೊಡ್ಡ ಹೋರಾಟವನ್ನೆ ಮಾಡಿದ್ದರು. ಆಗ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಬಂದಿತ್ತು. ಕಾಲೇಜು ಸ್ಥಳಾಂತರ ಆದೇಶ ಹಿಂಪಡೆಯುವವರೆಗೂ ಹೋರಾಡಿದ್ದರು. ಶಾಸಕರ ನಡೆಗೆ ಎಚ್ಚರಗೊಂಡು ಕಾಲೇಜು ಸ್ಥಳಾಂತರ ಆದೇಶ ರದ್ದು ಮಾಡಿತ್ತು.
ಭಾರತ್ ಜೋಡೋ ಯಶಸ್ವಿ ಅಖಿಲ ಭಾರತ ಕಾಂಗ್ರೆಸ್ ವತಿಯಿಂದ ರಾಹುಲ್ ಗಾಂಧಿ ಅವರು ಆಯೋಜಿಸಿದ್ದ ಭಾರತ್ ಜೋಡೋ ಯಾತ್ರೆ ಚಳ್ಳಕೆರೆ ಮಾರ್ಗವಾಗಿ ಹಾದು ಹೋದಾಗ ಯಾತ್ರಿಗಳಿಗೆ ಊಟದ ವ್ಯವಸ್ಥೆ ಸೇರಿದಂತೆ ರಾಹುಲ್ ಗಾಂಧಿ ಅವರಿಗೆ ವಾಸ್ತವ್ಯದ ವ್ಯವಸ್ಥೆ ಕೈಗೊಳ್ಳುಲ್ಲಿ ರಘುಮೂರ್ತಿ ಕಾಳಜಿಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಚಳ್ಳಕೆರೆ ಗಡಿ ಆರಂಭವಾದಾಗಿನಿಂದಲೂ ಜೋಡೋ ಯಾತ್ರೆ ಚಳ್ಳಕೆರೆ ಗಡಿ ದಾಟುವವರೆಗೂ ಯಾವುದೇ ಅಡ್ಡಿ ಆತಂಕಗಳಿಗೆ ಆಸ್ಪದ ನೀಡಿರಲಿಲ್ಲ
ವಿಧಾನಸಭಾ ಚುನಾವಣೆ ಮಾತ್ರವಲ್ಲದೇ ಲೋಕಸಭಾ ಚುನಾವಣೆ ಸಂದರ್ಭದಲ್ಲಿಯೂ ಕೂಡ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಮುತುವರ್ಜಿಯಿಂದ ಮತಕ್ರೋಢೀಕರಣ ಮಾಡುವ ಮೂಲಕ ರಘುಮೂರ್ತಿ ಪಕ್ಷಕ್ಕಾಗಿ ದುಡಿದಿದ್ದರು. ಜಿಲ್ಲೆಯ ಎಲ್ಲಾ ತಾಲೂಕುಗಳಿಗಿಂತ ಮತಗಳಿಕೆಯಲ್ಲಿ ಚಳ್ಳಕೆರೆ ವಿಧಾನ ಸಭಾ ಕ್ಷೇತ್ರ ಮುಂದಿತ್ತು. ಮೂರು ಲೋಕಸಭೆ ಚುನಾಣೆಯಲ್ಲಿಯೂ ಚಳ್ಳಕೆರೆ ಕಾಂಗ್ರೆಸ್‌ಗೆ ಲೀಡ್ ಕೊಟ್ಟಿತ್ತು.
ಅಭಿವೃದ್ಧಿ, ಜನರನ್ನು ಹಚ್ಚಿಕೊಳ್ಳುವ ರೀತಿ, ಕಷ್ಟ ಸುಖಗಳಿಗೆ ಸ್ಪಂದಿಸುವ ಪರಿಯನ್ನು ಕೇಳಿ ತಿಳಿದುಕೊಂಡು ಇಂತಹ ಶಾಸಕರು ನಮಗೆ ಸಿಗಬಾರದಿತ್ತೇ ಎಂಬಂತೆ ನೆರೆಯ ತಾಲೂಕಿನ ಮತದಾರರೂ ನೆನಪಿಸಿಕೊಳ್ಳುವುದುಂಟು. ಕಾರ್ಯಕರ್ತರನ್ನು ಕಡೆಗಣಿಸಿದ ಯಾವ ರಾಜಕಾರಣಿಯೂ ರಾಜಕೀಯ ರಂಗದಲ್ಲಿ ಬೆಳವಣಿಗೆ ಅಸಾಧ್ಯ. ಆದ್ದರಿಂದಲೇ ರಘುಮೂರ್ತಿ ಚಳ್ಳಕೆರೆ ಕ್ಷೇತ್ರದಲ್ಲಿ ಒಂದು ಬಾರಿ ಗೆದ್ದವರು ಮತ್ತೊಂದು ಬಾರಿ ಗೆಲ್ಲುವುದಿಲ್ಲ ಎಂಬುದನ್ನು ಸುಳ್ಳುಮಾಡಿ ಸತತ ಮೂರು ಬಾರಿ ಹ್ಯಾಟ್ರಿಕ್ ಸಾಧನೆಯನ್ನು ಮಾಡಿದ್ದಾರೆ ಎಂತಲೇ ಜನರು ಮಾತನಾಡಿಕೊಳ್ಳುತ್ತಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.