ಹೊಸಪೇಟೆಯಲ್ಲಿ ಪಾದಯಾತ್ರೆ, ಷಡ್ಯಂತ್ರ ನಡೆಸುವವರ ವಿರುದ್ಧ ಆಕ್ರೋಶ
ಕನ್ನಡಪ್ರಭ ವಾರ್ತೆ ಹೊಸಪೇಟೆಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ಖಂಡಿಸಿ ನೂರಾರು ಭಕ್ತರು ನಗರದ ಸಾಯಿಬಾಬಾ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಗುರುವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ನಗರದ ಸಾಯಿಬಾಬಾ ವೃತ್ತದಿಂದ ಪಾದಯಾತ್ರೆ ನಡೆಸಿದ ಭಕ್ತರು, ಶ್ರದ್ಧಾಕೇಂದ್ರದ ವಿರುದ್ಧ ನಿರಂತರ ಅಪಪ್ರಚಾರ ನಡೆಸಲಾಗುತ್ತಿದೆ. ಧರ್ಮಸ್ಥಳದ ವಿರುದ್ಧ ಪಿತೂರಿ, ಷಡ್ಯಂತ್ರ ನಡೆಸಲಾಗುತ್ತಿದೆ. ಇದನ್ನು ತೊಡೆದು ಹಾಕಲು ಕ್ರಮವಹಿಸಬೇಕು. ಧರ್ಮಸ್ಥಳದ ಮೇಲೆ ಭಕ್ತರು ಅಪಾರ ನಂಬಿಕೆ ಹೊಂದಿದ್ದಾರೆ. ಧರ್ಮಸ್ಥಳದ ಪಾವಿತ್ರ್ಯ ಹಾಳು ಮಾಡುವ ಕಾರ್ಯ ಮಾಡಲಾಗುತ್ತಿದ್ದು, ಇದನ್ನು ತಡೆಯಬೇಕು. ಧರ್ಮಸ್ಥಳದ ಕುರಿತು ಪಿತೂರಿ ನಡೆಸುತ್ತಿರುವವರ ವಿರುದ್ಧ ತನಿಖೆ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಶ್ರದ್ಧಾಕೇಂದ್ರ ಧರ್ಮಸ್ಥಳ ಹೆಸರು ಹಾಳು ಮಾಡಲಾಗುತ್ತಿದೆ ಮತ್ತು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಹೆಸರಿಗೆ ಕಳಂಕ ತರುವ ಕೆಲಸ ಮಾಡಲಾಗುತ್ತಿದೆ. ಸತ್ಯಾಸತ್ಯತೆ ಅರಿಯದೇ ಬಾಯಿಗೆ ಬಂದಂತೆ ಧರ್ಮಸ್ಥಳದ ಬಗ್ಗೆ ಮಾತನಾಡಲಾಗುತ್ತಿದೆ. ವೃಥಾ ಆರೋಪ ಮಾಡುವವರ ವಿರುದ್ಧ ಕ್ರಮವಹಿಸಬೇಕು. ಸರ್ಕಾರ ಅಂಥವರ ವಿರುದ್ಧ ಕ್ರಮ ಜರುಗಿಸಬೇಕು. ಧರ್ಮಸ್ಥಳ ಎಲ್ಲರಲ್ಲೂ ಭಕ್ತಿ ಭಾವನೆ ಮೂಡಿಸಿದ ಕ್ಷೇತ್ರವಾಗಿದೆ. ಹಸಿದು ಬಂದವರಿಗೆ ಆಶ್ರಯ ಹಾಗೂ ಅನ್ನ ನೀಡುತ್ತದೆ. ಅಂತಹ ಕ್ಷೇತ್ರದ ಕುರಿತು ಅವಹೇಳನ ಮಾಡುವ ಕಾರ್ಯ ನಡೆಸಲಾಗುತ್ತಿದೆ. ಸರ್ಕಾರ ಪಿತೂರಿ ನಡೆಸಿದವರ ಮೇಲೆ ಕ್ರಮ ಜರುಗಿಸಬೇಕು. ಎಸ್‌ಐಟಿ ಅಂಥವರ ವಿರುದ್ಧ ಕ್ರಮ ಜರುಗಿಸಬೇಕು. ಅನಾಮಿಕ ದೂರುದಾರನ ಹಿಂದೆ ಯಾರು ಇದ್ದಾರೆ ಎಂಬುದನ್ನು ಪತ್ತೆ ಹಚ್ಚಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ನಾಡಿನ ಭಕ್ತಿ ಪ್ರತೀಕವಾಗಿರುವ ಧರ್ಮಸ್ಥಳದ ಬಗ್ಗೆ ನಿತ್ಯವೂ ಸುಳ್ಳು ಸುದ್ದಿ ಹರಡಲಾಗುತ್ತಿದೆ. ಈಗಾಗಲೇ ಎಸ್‌ಐಟಿ ನಡೆಸಿದ ಶೋಧದಲ್ಲಿ ಏನೂ ಸಿಕ್ಕಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹೀಗಿದ್ದರೂ ಸುಮ್ಮನೆ ಆರೋಪ ಮಾಡಲಾಗುತ್ತಿದೆ. ಇಲ್ಲಸಲ್ಲದ ಆರೋಪ ಮಾಡಿದವರ ಬಗ್ಗೆ ತನಿಖೆ ಕೈಗೊಂಡು ಜೈಲಿಗೆ ಹಾಕಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಸುಳ್ಳು ಮತ್ತು ಅಪಪ್ರಚಾರ ಮಾಡುವವರಿಗೆ ಜೈಲಿಗೆ ಹಾಕಲಿ, ಜೈ ಶ್ರೀ ಧರ್ಮಸ್ಥಳ ಕ್ಷೇತ್ರ ಎಂಬ ಪ್ಲೇಕಾರ್ಡ್‌ಗಳನ್ನು ಪ್ರತಿಭಟನಾಕಾರರು ಪ್ರದರ್ಶಿಸಿದರು. ಪೊಲೀಸರು ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು.
ಪ್ರತಿಭಟನೆಯಲ್ಲಿ ಮುಸ್ಲಿಂ ಮಹಿಳೆಯರು ಸೇರಿದಂತೆ ನೂರಾರು ಮಹಿಳೆಯರು ಹಾಗೂ ಭಕ್ತರು ಪಾಲ್ಗೊಂಡಿದ್ದರು. ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.ಮುಖಂಡರಾದ ಕಾಸಟ್ಟಿ ಉಮಾಪತಿ, ಕೆ. ಪ್ರಕಾಶ್, ಕಾವಲಿ ಶಿವಪ್ಪ ನಾಯಕ, ಜಲ್ಬಿರ್ ಸಿಂಗ್, ರಾಜೇಶ್, ಹನುಮಂತ, ನಾಗರಾಜ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಸಂಘದ ಮುಖ್ಯಸ್ಥೆ ಉಷಾ ಮತ್ತು ಜೈನ ಸಮುದಾಯದ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.