ಕನ್ನಡಪ್ರಭ ವಾರ್ತೆ ವಾಡಿ
ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದ ಖಾತ್ರಿ ಯೋಜನೆಯಲ್ಲಿ ದುಡಿದ ನೂರಾರು ಕೂಲಿ ಕಾರ್ಮಿಕರ ಹಾಜರಾತಿ ರದ್ದು ಪಡಿಸಲು ಪ್ರಮುಖ ಕಾರಣರಾದ ಗ್ರಾಪಂ ಅಧ್ಯಕ್ಷ-ಪಿಡಿಓ ವಿರುದ್ಧ ಅಖಿಲ ಭಾರತ ಕೃಷಿ ಕೇತ್ ಮಜ್ದೂರ್ (ಎಐಕೆಎಂಎಸ್) ರೈತ ಸಂಘಟನೆ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.ಗ್ರಾಪಂ ಕಚೇರಿ ಮುಂದೆ ಜಮಾಯಿಸಿದ ನೂರಾರು ನರೇಗಾ ಕೂಲಿ ಕಾರ್ಮಿಕ ಮಹಿಳೆಯರು, ಗ್ರಾಪಂ ಅಧ್ಯಕ್ಷ-ಪಿಡಿಒ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಕಾಮ್ರೇಡ್ ಭಗವಾನ್ ರೆಡ್ಡಿ, ಗ್ರಾಪಂ ಆಡಳಿತದ ನಿರ್ಲಕ್ಷ್ಯದಿಂದ ಕಾರ್ಮಿಕರಿಗೆ ಮೋಸವಾಗಿದೆ. ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸುಮಾರು 800ಕ್ಕೂ ಹೆಚ್ಚು ಕೂಲಿಕಾರ್ಮಿಕರು ಸುಡು ಬಿಸಿಲಿನ ಬೇಗೆ ಲೇಕ್ಕಿಸದೆ ಬೇವರು ಸುರುಸಿದ್ದಾರೆ. ಎರಡು ವಾರದ ಕೂಲಿಯ ಹಾಜರಾತಿಯು ಗ್ರಾಪಂ ಅಧ್ಯಕ್ಷರು ಹಾಗೂ ಪಿಡಿಓ ಅವರ ನಿರ್ಲಕ್ಷ್ಯದಿಂದ ಕಾರ್ಮಿಕರ ಹಾಜರಾತಿ ಸೊನ್ನೆಯಾಗಿದೆ. ಕಾರ್ಮಿಕರ ಗೋಳಾಟಕ್ಕೆ ಕಾರಣವಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಈಗಾಗಲೇ ಇಂತಹ ನಿರ್ಲಕ್ಷ್ಯದಿಂದಾಗಿಯೇ ಸುಮಾರು 500ಕ್ಕಿಂತ ಹೆಚ್ಚಿನ ಜನರ ಒಂದು ವಾರದ ಕೂಲಿಯನ್ನು ನೀಡದೇ ಅನ್ಯಾಯ ಮಾಡಲಾಗಿದೆ. ಸಚಿವ ಪ್ರಿಯಾಂಕ್ ಖರ್ಗೆ ಪ್ರತಿನಿಧಿಸುವ ಮತಕ್ಷೇತ್ರದಲ್ಲಿ ಇಂತಹ ಸಮಸ್ಯೆ ತಲೆ ಎತ್ತಿದೆ ಎಂದರೆ, ಇದು ಅವರ ಗಮನಕ್ಕೆ ಏಕೆ ಇಲ್ಲ.? ಕಾರ್ಮಿಕರ ಗೋಳು ಪರಿಹರಿಸಲು ಸಮಯವಿಲ್ಲವೇ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮನವಿ ಸ್ವೀಕರಿಸಿದ ತಾಪಂ ಇಒ ಮಹ್ಮದ್ ಪಿ.ಅಕ್ರಮ ಪಾಶಾ ಹಾಗೂ ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಪಂಡಿತ್ ಸಿಂದೆ, ಕೂಲಿ ಕಾರ್ಮಿಕರಿಗೆ ಆಗಿರುವ ಸಮಸ್ಯೆಯನ್ನು ನಾವು ಬಗೆಹರಿಸುತ್ತೇವೆ. ದುಡಿದ ಹಣವನ್ನು ಮೂರು ವಾರಗಳಲ್ಲಿ ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಭರವಸೆ ನೀಡಿದರು. ಕಾಮ್ರೇಡ್ ವೀರಭದ್ರಪ್ಪ ಆರ್.ಕೆ, ಸಂಘಟನೆ ತಾಲೂಕು ಅಧ್ಯಕ್ಷ ಅಧ್ಯಕ್ಷ ಮಲ್ಲಣ್ಣ ದಂಡಬಾ, ತಾಲೂಕ ಕಾರ್ಯದರ್ಶಿ ಶಿವಕುಮಾರ್ ಆಂದೋಲಾ, ಗ್ರಾಮ ಘಟಕದ ಅಧ್ಯಕ್ಷ ಚೌಡಪ್ಪ ಗಂಜಿ, ಕಾಯಕ ಬಂಧು ನಾಗರಾಜ, ಭೀಮಪ್ಪ ಮಾಟ್ನಳ್ಳಿ, ವೀರೇಶ್ ನಾಲವಾರ, ಈರಣ್ಣ ಇಸಬಾ, ಶರಣು ಹೇರೂರ, ಮಲ್ಲಿಕಾರ್ಜುನ ಗಂಧಿ, ಗೌತಮ್ ಪರತೂರಕರ್, ಮಂಜುನಾಥ್ ವಗ್ಗರ, ಭಾಗೇಶ ಛತ್ರಕಿ, ನಾಗರಾಜ ಅಕ್ಕಿ, ಈರಣ್ಣ ಚಾಮನೂರ್, ನಿಂಗಪ್ಪ ನೆಲೋಗಿ, ಆನಂದ್ ವಗ್ಗರ, ದೊಡಪ್ಪ ಹಿಟ್ಟಿನ ಸೇರಿದಂತೆ ಗ್ರಾಮದ ನೂರಾರು ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೋಂಡಿದ್ದರು.