ರಾಜಬೀದಿಯಲ್ಲಿ ಯಲ್ಲಮ್ಮ ದೇವಿ ವೈಭವದ ಮೆರವಣಿಗೆ

KannadaprabhaNewsNetwork |  
Published : May 25, 2024, 12:46 AM IST
ಚಿತ್ರದುರ್ಗ ಮೂರನೇ ಪುಟದ ಮಿಡ್ಲ್  | Kannada Prabha

ಸಾರಾಂಶ

ರಾಜ ಉತ್ಸವಾಂಬ ಉಚ್ಚಂಗಿ ಯಲ್ಲಮ್ಮ ದೇವಿಯ ಮೆರವಣಿಗೆ ಶುಕ್ರವಾರ ಚಿತ್ರದುರ್ಗದ ರಾಜಬೀದಿಯಲ್ಲಿ ಅದ್ದೂರಿಯಾಗಿ ನೆರವೇರಿತು. ವೈಭವದಿಂದ ನೆರವೇರಿತು.

ಕನ್ನಡಪ್ರಭ ವಾರ್ತೆ, ಚಿತ್ರದುರ್ಗಕೋಟೆನಾಡಿನ ಪ್ರಮುಖ ಶಕ್ತಿ ದೇವತೆ, ಶ್ರೀ ರಾಜ ಉತ್ಸವಾಂಬ ಉಚ್ಚಂಗಿ ಯಲ್ಲಮ್ಮ ದೇವಿಯ ಮೆರವಣಿಗೆ ಶುಕ್ರವಾರ ನಗರದ ರಾಜಬೀದಿಗಳಲ್ಲಿ ಅತ್ಯಂತ ವೈಭವದಿಂದ ನೆರವೇರಿತು. ಕೋಟೆ ನಾಡಿನ ಮಂದಿ ಮೆರವಣಿಗೆ ಕಣ್ತುಂಬಿಕೊಂಡು ಧನ್ಯತಾ ಭಾವ ಪ್ರದರ್ಶಿಸಿದರು.

ಅಶ್ವಾರೂಢಳಾಗಿದ್ದ ದೇವಿಯ ಕೈಗಳಲ್ಲಿ ತ್ರಿಶೂಲ, ಖಡ್ಗ, ಕತ್ತಿ, ಮತ್ತಿತರ ಆಯುಧಗಳನ್ನು ಹಿಡಿದು ಅಸುರರ ಸಂಹಾರಕ್ಕಾಗಿ ಮಹಾಕಾಳಿ ಸ್ವರೂಪಿಯಾಗಿ ದೇವಿಯ ಅಲಂಕಾರ ಮಾಡಿದ್ದು ಈ ಬಾರಿಯ ವಿಶೇಷವಾಗಿತ್ತು. ಚಿನ್ನ ಲೇಪಿತ ಬೆಳ್ಳಿಯ ನೂತನ ಮುಖಪದ್ಮದ ತಲೆಯ ಮೇಲೆ ಐದು ಹೆಡೆ ಸರ್ಪದ ಮಾದರಿ ಕಿರೀಟಿ ಆಕರ್ಷಣೀಯವಾಗಿತ್ತು. ಗುಲಾಬಿ, ಸೇವಂತಿಗೆ, ಚೆಂಡು ಮತ್ತಿತರ ಹೂವುಗಳಿಂದ ಪೂಣಿಸಿದ ಮಾಲೆಗಳು, ಅಲ್ಲದೇ ನಾನಾ ಅಲಂಕಾರಿಕ ವಸ್ತುಗಳಿಂದ ದೇವಿಯನ್ನು ಮನಮೋಹಕವಾಗಿ ಸಿಂಗರಿಸ ಲಾಗಿತ್ತು. ಹಿಂಭಾಗದಲ್ಲಿ ಅಶ್ವದ ಮೇಲೆ ಕುಳಿತ ದೇವಿಯ ಸ್ವರೂಪದ ಮಾದರಿ ವಿಶೇಷ ಗಮನ ಸೆಳೆಯಿತು.

ನಗರದ ಕೋಟೆ ರಸ್ತೆಯ ಶ್ರೀ ಉಚ್ಚಂಗಿ ಯಲ್ಲಮ್ಮ ದೇವಸ್ಥಾನದ ಮುಂಭಾಗ ಶುಕ್ರವಾರ ಬೆಳಗ್ಗೆ ಮಂಗಳಾರತಿ ನೇರವೇರಿಸಿದ ಬಳಿಕ ಮೆರವಣಿಗೆಗೆ ಚಾಲನೆ ದೊರೆಯಿತು. ಕಹಳೆ, ಉರುಮೆ, ಚಂಡೆ, ತಮಟೆ, ಕರಡಿ ಚಮ್ಮಾಳ, ಕೀಲುಕುದುರೆ, ಬೊಂಬೆ ಕುಣಿತ, ನಂದಿ ಕೋಲು, ಸೇರಿದಂತೆ ನಾನಾ ಜಾನಪದ ಕಲಾ ವಾದ್ಯಗಳೊಂದಿಗೆ ಪ್ರಮುಖ ರಾಜಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮಹಿಳಾ ಭಕ್ತರು ಅಲ್ಲಲ್ಲಿ ಆರತಿ ಬೆಳಗಿ ಭಕ್ತಿ ಸಮರ್ಪಿಸಿದರು.ಉಚ್ಚಂಗಿ ಯಲ್ಲಮ್ಮ ದೇವಸ್ಥಾನದಿಂದ ಪ್ರಾರಂಭವಾದ ಮೆರವಣಿಗೆ ಚಿಕ್ಕಪೇಟೆ, ಬುರುಜನಹಟ್ಟಿ, ಸಿಹಿನೀರು ಹೊಂಡದ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತ, ಗಾಂಧಿ ವೃತ್ತ, ಎಸ್‍ಬಿಎಂ ಸರ್ಕಲ್, ಧರ್ಮಶಾಲೆ ರಸ್ತೆ, ದೊಡ್ಡಪೇಟೆ, ಜೋಗಿಮಟ್ಟಿ ರಸ್ತೆ, ಸುಣ್ಣದ ಗುಮ್ಮಿ, ಕರುವಿನಕಟ್ಟೆ ವೃತ್ತ, ಫಿಲ್ಟರ್ ಹೌಸ್ ರಸ್ತೆ ಮಾರ್ಗವಾಗಿ ದೇವಸ್ಥಾನ ತಲುಪಿತು. ದಾರಿಯುದ್ಧಕ್ಕೂ ಭಕ್ತರಿಂದ ಅಕ್ಕಿ, ಬೇಳೆ, ಬೆಲ್ಲ ಸೇರಿದಂತೆ ಮತ್ತಿತರ ದವಸ ದಾನ್ಯಗಳ ಮೀಸಲು ಸ್ವೀಕರಿಸಲಾಯಿತು. ಜಾತ್ರಾ ಮಹೋತ್ಸವದ ಪ್ರಯುಕ್ತ ಮೇ.25ರಂದು ದೇವಿಗೆ ಭಂಡಾರ ಪೂಜೆ ಹಾಗೂ ಪುಷ್ಪಾಲಂಕಾರದೊಂದಿಗೆ ಪೂಜೆ ನೆರವೇರಲಿದೆ. ಸಂಜೆ ದೇವಸ್ಥಾನದ ಮುಂಭಾಗದಲ್ಲಿ ಸಿಡಿ ಉತ್ಸವ ಜರುಗಲಿದೆ. ಮೇ.26ರ ಬೆಳಗ್ಗೆ ದೇವಿಗೆ ಅಭಿಷೇಕ, ಮಹಾಮಂಗಳಾರತಿ, ರಾತ್ರಿ 9ಕ್ಕೆ ಜೋಗಪ್ಪ ಮತ್ತು ಜೋಗಮ್ಮ ಅವರಿಂದ ಓಕುಳಿ ನೆರವೇರಲಿದೆ. ಮೇ.28ರ ಬೆಳಗ್ಗೆ 9ಕ್ಕೆ ದೇವಿಗೆ ಅಭಿಷೇಕ, ಕಂಕಣ ವಿಸರ್ಜನೆ ಹಾಗೂ ಜಾತ್ರೆ ಮುಕ್ತಾಯ ಆಗಲಿದೆ.

PREV

Recommended Stories

ಹಿಂದುಗಳಿಗೆ ಡಿಕೆಶಿ ಅಪಮಾನ, ಹೇಳಿಕೆ ಹಿಂಪಡೆಯಲಿ : ಬಿವೈವಿ
ಬಾನು ಮುಷ್ತಾಕ್ ಅವರಿಂದ ದಸರಾ ಉದ್ಘಾಟನೆ: ಮುತಾಲಿಕ್‌ ಖಂಡನೆ