ಕೆಐಎಡಿಬಿ ಕಚೇರಿ ಮುಂದೆ ದಲಿತ ಉದ್ಯಮದಾರರ ಸಂಘದಿಂದ ಪ್ರತಿಭಟನೆ । ಎಸ್‌ಸಿ, ಎಸ್‌ಟಿ ಕೈಗಾರಿಕೆಗಳಿಗೆ ನಿವೇಶನ ತೊಂದರೆ
ಕನ್ನಡಪ್ರಭ ವಾರ್ತೆ ಹಾಸನಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ೨೪ ಹಾಗೂ ಸಾಮಾನ್ಯ ವರ್ಗದ ೧೨ ಸೇರಿ ಒಟ್ಟು ೩೮ ಉದ್ಯಮದಾರರಿಗೆ ಕೈಗಾರಿಕೆಗಳನ್ನು ಸ್ಥಾಪಿಸಲು ಎದುರಾಗುತ್ತಿರುವ ನಿವೇಶನದ ತೊಂದರೆಯನ್ನು ಸರಿಪಡಿಸಿಕೊಡದ ಜಿಲ್ಲಾಡಳಿತ ಮತ್ತು ಕೆಐಎಡಿಬಿದಿಂದ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ಜಿಲ್ಲಾ ದಲಿತ ಉದ್ಯಮದಾರರ ಸಂಘದ ವತಿಯಿಂದ ಕೆಐಎಡಿಬಿ ಕಚೇರಿ ಮುಂದೆ ಸೋಮವಾರದಿಂದ ಅನಿರ್ದಿಷ್ಟಾವಧಿ ಧರಣಿಯನ್ನು ಆರಂಭಿಸಲಾಗಿದೆ.
ಆರ್‌ಪಿಐ ಪಕ್ಷದ ಮುಖಂಡ ಶ್ರೀಧರ್ ಕಲಿವೀರ್ ಮತ್ತು ಕರ್ನಾಟಕ ದಲಿತ ಉದ್ದಿಮೆದಾರರ ಸಂಘದ ರಾಜ್ಯಾ ಕಾರ್ಯಾಧ್ಯಕ್ಷ ಸಿ.ಜಿ. ಶ್ರೀನಿವಾಸ್ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಾಗೂ ಒಬಿಸಿ ವರ್ಗದ ಜನರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡುವ ಉದ್ಯಮ ಸ್ನೇಹಿ ಯೋಜನೆಯನ್ನು ೨೦೧೫-೧೬ ಸಾಲಿನಲ್ಲಿ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲ ಅವಧಿಯಲ್ಲಿ ಜಾರಿಗೊಳಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರನ್ನು ಆರ್ಥಿಕವಾಗಿ ಸದೃಢಗೊಳಿಸಿ, ಉದ್ಯಮದಲ್ಲಿ ತೊಡಗುವಂತೆ ಮಾಡಬೇಕು ಎಂದು ಸರ್ಕಾರದ ಸಹಾಯಧನದೊಂದಿಗೆ ಕೆಐಎಡಿಬಿಯ ನಿವೇಶನಗಳಲ್ಲೂ ಮೀಸಲಾತಿ ನೀಡಬೇಕೆಂದು ಆದೇಶ ಮಾಡಲಾಗಿತ್ತು ಎಂದು ಹೇಳಿದರು.ಹಾಸನ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಉದ್ಯಮಿಗಳಾಗಲು ಕೆಐಎಡಿಬಿ ಹಾಗೂ ಹಾಸನ ಜಿಲ್ಲಾ ಕೈಗಾರಿಕಾ ಕೇಂದ್ರ ಕಚೇರಿಗೆ ನಿವೇಶನಗಳಿಗೆ ಅರ್ಜಿ ಸಲ್ಲಿಸಿದರು. ನಂತರ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆಯುವ ಉನ್ನತಾಧಿಕಾರದ ಏಕಗವಾಕ್ಷಿ ಸಮಿತಿ ಸಭೆಯಲ್ಲಿ ಯೋಜನೆಗಳು ಅನುಮೋದನೆಗೊಂಡು ಕೆಎಡಿಬಿಯವರು ಕೌಶಿಕ ಗ್ರಾಮದ ಸರ್ವೆ ನಂ.೩೨೮ರಲ್ಲಿ ನಿರ್ಮಾಣ ಮಾಡಿರುವ ಉಪ ಬಡಾವಣೆ ೪ರಲ್ಲಿರುವ ನಿವೇಶನಗಳನ್ನು ಮಂಜೂರು ಮಾಡಿ ನಂತರ ಹಣ ಪಾವತಿಸಿಕೊಂಡು ನಿವೇಶನದ ಹಂಚಿಕೆ ಪತ್ರಗಳನ್ನು ನೀಡಿದ ನಂತರ ಉಳಿಕೆ ಹಣವನ್ನು ಪಾವತಿಸಲು ವಿಳಂಬ ಮಾಡಿದ್ದೇವೆ ಎಂದು ಬಡ್ಡಿ ವಿಧಿಸಿ ನಿವೇಶನದ ಸಂಪೂರ್ಣ ಹಣವನ್ನು ಪಾವತಿಸಿದ ನಂತರ ಹಾಸನ ತಾಲೂಕಿನ ಉಪನೊಂದಣಾಧಿಕಾರಿ ಕಚೇರಿಯಲ್ಲಿ ನಿವೇಶನದ ನೋಂದಣಿ ಮಾಡಿಸಿ ಕೌಶಿಕ ಗ್ರಾಮ ಪಂಚಾಯಿತಿಯಲ್ಲಿ ಈ ಸ್ವತ್ತನ್ನು ಪಡೆದುಕೊಂಡು ಉದ್ಯಮವನ್ನು ಪ್ರಾರಂಭಿಸಲು ಬೇಕಾದ ಎಲ್ಲಾ ದಾಖಲಾತಿಗಳನ್ನು ನೀಡಿ ಸಾಲಗಳು ಮಂಜೂರಾಗಿದ್ದವು ಎಂದು ಹೇಳಿದರು.
ಆದರೆ ಉಪ ಬಡಾವಣೆ ೪ ರಲ್ಲಿನ ನಿವೇಶನಗಳಲ್ಲಿ ಕೆಲಸ ಪ್ರಾರಂಭಿಸಲು ಜೆಸಿಬಿ ಯಂತ್ರಗಳನ್ನು ತೆಗೆದುಕೊಂಡು ಹೋದಾಗ ಕೌಶಿಕ ಗ್ರಾಮದ ಗ್ರಾಮಸ್ಥರು ಇದು ಊರಿನ ಗೋಮಾಳ ಜಾಗ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೂ ಸಹ ಮುಂದಾದರು. ನಿಮಗಳಿಗೆ ನೀಡಿರುವ ನಿವೇಶನಗಳು ಗೋಮಾಳ ಜಾಗವಲ್ಲ ರೈತರಿಂದ ಸ್ವಾಧೀನ ಪಡಿಸಿಕೊಂಡಿರುವ ನಿವೇಶನಗಳು ಎಂದು ತಿಳಿಸಿದರು. ಆದರೆ ಸಮಸ್ಯೆ ಬಗೆಹರಿಸಿಲ್ಲ ಎಂದು ದೂರಿದರು.ಕರ್ನಾಟಕ ದಲಿತ ಉದ್ಯಮದಾರರ ಸಂಘದ ರಾಜ್ಯಾ ಕಾರ್ಯಾಧ್ಯಕ್ಷ ಸಿ.ಜಿ. ಶ್ರೀನಿವಾಸ್, ಭೀಮ್ ಆರ್ಮಿಯ ಪ್ರಸನ್ನ, ರಾಜ್ಯಾಧ್ಯಕ್ಷ ರಾಜಗೋಪಾಲ್, ಆರ್.ಪಿ.ಐ. ರಾಜ್ಯಾಧ್ಯಕ್ಷ ಸತೀಶ್, ವೆಂಕಟೇಶ್ ಹಾಗೂ ರಾಜ್ಯ ಪದಾಧಿಕಾರಿಗಳು, ಕರ್ನಾಟಕ ರಾಜ್ಯ ದಲಿತ ಉದ್ಯಮದಾರರ ಸಂಘದ ಎಲ್ಲಾ ಜಿಲ್ಲೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಇದ್ದರು.ಕೆಐಎಡಿಬಿ ಕಚೇರಿ ಎದುರು ಜಿಲ್ಲಾ ದಲಿತ ಉದ್ಯಮದಾರರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.