ಮೊಳಕೆಯೊಡೆದ ಮೆಕ್ಕೆಜೋಳ ತೆನೆ ಹಿಡಿದು ರೈತರ ಪ್ರತಿಭಟನೆ

KannadaprabhaNewsNetwork |  
Published : Oct 23, 2024, 01:45 AM IST
ಪೋಟೊ-೨೨ ಎಸ್.ಎಚ್.ಟಿ. ೧ಕೆ- ತಾಲೂಕಿನ ಮಾಗಡಿ, ಕೊಂಚೀಗೇರಿ ಗ್ರಾಮದ ರೈತರು ಮೊಳಕೆಯೊಡೆದ ಮೆಕ್ಕೆ ಜೋಳ ತೆನೆ ಹಿಡಿದು ಪ್ರತಿಭಟನೆ ನಡೆಸಿ ತಹಸೀಲ್ದಾರ ಅನಿಲ್ ಬಡಿಗೇರ ಅವರಿಗೆ ಬೆಳೆಹಾನಿ ಪರಿಹಾರಕ್ಕೆ ಆಗ್ರಹಿಸಿ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ತಾಲೂಕಿನಲ್ಲಿ ರೈತರು ವರ್ಷವಿಡಿ ಬೆವರು ಸುರಿಸಿ ಕಷ್ಟಪಟ್ಟು ಬೆಳೆದ ಬೆಳೆ ಮೊದಲು ಕಾಡು ಪ್ರಾಣಿ, ಪಕ್ಷಿಗಳ ಪಾಲಾಗುತ್ತಿರುವುದು, ಒಂದೆಡೆಯಾದರೆ ಪೈರು ಬರುವಷ್ಟರಲ್ಲಿ ವಿಪರೀತ ಮಳೆ ಸುರಿದು ಬೆಳೆದ ಬೆಳೆ ಸಂಪೂರ್ಣ ನಾಶವಾಗಿದೆ

ಶಿರಹಟ್ಟಿ: ತಾಲೂಕಿನ ಮಾಗಡಿ, ಕೊಂಚಿಗೇರಿ ಸೇರಿದಂತೆ ಹಲವು ಗ್ರಾಮಗಳ ರೈತರು ಮೊಳಕೆಯೊಡೆದ ಮೆಕ್ಕೆಜೋಳ ತೆನೆ ಹಿಡಿದು ಮಂಗಳವಾರ ಪಟ್ಟಣದ ಬಸವೇಶ್ವರ ವೃತ್ತದಿಂದ ಪ್ರತಿಭಟನೆ ನಡೆಸಿ ಬೆಳೆಹಾನಿ ಪರಿಹಾರಕ್ಕೆ ಆಗ್ರಹಿಸಿ ತಹಸೀಲ್ದಾರ್ ಅನಿಲ್ ಬಡಿಗೇರಗೆ ಮನವಿ ಸಲ್ಲಿಸಿದರು.

ಈ ವೇಳೆ ಕಿಸಾನ್ ಜಾಗೃತಿ ವಿಕಾಸ ಸಂಘದ ಅಧ್ಯಕ್ಷ ಸಂಜೀವ ಹುಡೇದ್, ರೈತ ಮುಖಂಡ ಚನ್ನಪ್ಪ ಷಣ್ಮುಖಿ ಮಾತನಾಡಿ, ಕಳೆದ ೧೫ ದಿನಗಳಿಂದ ತಾಲೂಕಿನಾದ್ಯಂತ ಸತತ ಸುರಿಯುತ್ತಿರುವ ಮಳೆಯಿಂದ ಬಿತ್ತಿದ ಎಲ್ಲ ಬೆಳೆಗಳು ಹಾನಿಗೊಂಡಿದ್ದು, ಹೊಲಕ್ಕೆ ಹಾಕಿದ ಬಂಡವಾಳ ಮರಳಿ ಬಾರದಂತಾಗಿದೆ. ದುಬಾರಿ ಬೀಜ, ಗೊಬ್ಬರ ಹಾಕಿ ಬೆಳೆದ ಎಲ್ಲ ಬೆಳೆ ಸಂಪೂರ್ಣ ಜಲಾವೃತಗೊಂಡಿದ್ದು, ಸರ್ಕಾರ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.

ತಾಲೂಕಿನಲ್ಲಿ ರೈತರು ವರ್ಷವಿಡಿ ಬೆವರು ಸುರಿಸಿ ಕಷ್ಟಪಟ್ಟು ಬೆಳೆದ ಬೆಳೆ ಮೊದಲು ಕಾಡು ಪ್ರಾಣಿ, ಪಕ್ಷಿಗಳ ಪಾಲಾಗುತ್ತಿರುವುದು, ಒಂದೆಡೆಯಾದರೆ ಪೈರು ಬರುವಷ್ಟರಲ್ಲಿ ವಿಪರೀತ ಮಳೆ ಸುರಿದು ಬೆಳೆದ ಬೆಳೆ ಸಂಪೂರ್ಣ ನಾಶವಾಗಿದೆ. ಕಟಾವಿಗೆ ಬಂದ ಬೆಳೆ ಮಳೆ ನೀರಿನಲ್ಲಿ ಜಲಾವೃತಗೊಂಡು ಕೊಳೆಯುತ್ತಿದೆ. ತಕ್ಷಣ ಅಧಿಕಾರಿಗಳು ಎಚ್ಚೆತ್ತುಕೊಂಡು ಕೂಡಲೇ ರೈತರಿಗೆ ಬೆಳೆಹಾನಿ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.

ಬಹುತೇಕ ರೈತರು ಮುಂಗಾರು ಹಂತದಲ್ಲಿ ಬಿತ್ತನೆ ಮಾಡಿದ ಬೆಳೆ ಕಟಾವ ಮಾಡುವ ಹಂತಕ್ಕೆ ಬಂದಿದ್ದು, ಪ್ರಮುಖ ಬೆಳೆಗಳಾದ ಗೋವಿನ ಜೋಳ, ಶೇಂಗಾ, ಬಿಟಿ ಹತ್ತಿ, ಕೆಂಪು ಮೆಣಸಿನಕಾಯಿ, ಈರುಳ್ಳಿ, ಸೇರಿದಂತೆ ಹಲವಾರು ಬೆಳೆಗಳು ಕೊಳೆತು ರಸ್ತೆಗೆ ಎಸೆಯುವಂತಹ ಸ್ಥಿತಿಗೆ ಬಂದಿವೆ. ವಿಮಾ ಕಂಪನಿಯಿಂದ ನಮಗೆ ಪರಿಹಾರ ಬರುವ ಸಾಧ್ಯತೆ ಕಡಿಮೆಯಾಗಿದ್ದು, ಕಂದಾಯ ಇಲಾಖೆ ಸಿಬ್ಬಂದಿಗಳು ಜಮೀನುಗಳಿಗೆ ಭೇಟಿ ನೀಡಿ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಇದೇ ಪರಿಸ್ಥಿತಿ ಮುಂದುವರೆದರೆ ಸದ್ಯದ ಸಂದರ್ಭದಲ್ಲಿ ಹಿಂಗಾರು ಬಿತ್ತನೆ ಸಹ ಕುಂಠಿತಗೊಳ್ಳಲಿದೆ. ಬಿತ್ತಿದ ಬೆಳೆಗಳು ಇಳುವರಿ ಹಾಗೂ ರೋಗಕ್ಕೆ ತುತ್ತಾಗಿ ರೈತ ಸಮುದಾಯ ದೊಡ್ಡ ನಷ್ಟ ಅನುಭವಿಸುವಂತಹ ಸ್ಥಿತಿಗೆ ಈಡಾಗುವದರಲ್ಲಿ ಯಾವುದೇ ಸಂದೇಹವಿಲ್ಲ. ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಸಿಬ್ಬಂದಿಗಳು ಜಂಟಿಯಾಗಿ ಸಮೀಕ್ಷೆ ಮಾಡಬೇಕು. ಅತಿವೃಷ್ಟಿ ಬೆಳೆ ಪರಿಹಾರ ಹಾಗೂ ಬೆಳೆ ವಿಮಾ ಕಂಪನಿಯಿಂದ ಮಧ್ಯಂತರ ಪರಿಹಾರ ದೊರಕಿಸಿಕೊಡುವಲ್ಲಿ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಮನವಿ ಮಾಡಿದರು.

ತಹಸೀಲ್ದಾರ್ ಅನಿಲ್ ಬಡಿಗೇರ ಮನವಿ ಸ್ವೀಕರಿಸಿ ಮಾತನಾಡಿ, ರೈತರ ಹಿತ ಕಾಪಾಡಲು ತಾಲೂಕಾಡಳಿತ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಸರ್ಕಾರ ಮತ್ತು ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಕಂದಾಯ, ಕೃಷಿ, ತೋಟಗಾರಿಕೆ ಅಧಿಕಾರಿಗಳ ತಂಡ ಜಂಟಿಯಾಗಿ ಸಮೀಕ್ಷೆ ಕಾರ್ಯ ನಡೆಸಿದ್ದು, ಎರಡು ಮೂರು ದಿನದಲ್ಲಿ ವರದಿ ಸಿದ್ದಪಡಿಸಿ ಜಿಲ್ಲಾಧಿಕಾರಿಗಳಿಗೆ ತಲುಪಿಸುವುದಾಗಿ ತಿಳಿಸಿದರು.

ತಾಲೂಕಿನಾದ್ಯಂತ ಅತಿವೃಷ್ಟಿ ಆಗಿರುವ ಬಗ್ಗೆ ಸ್ಪಷ್ಟತೆ ಇದೆ. ಸಂಬಂಧಿಸಿದ ಇಲಾಖೆಗಳ ಸಹಯೋಗದಲ್ಲಿ ಸೂಕ್ತ ಸರ್ವೆ ಕಾರ್ಯ ನಡೆದಿದೆ. ರೈತರು ಅಧಿಕಾರಿಗಳಿಗೆ ಹಾನಿಯ ನಿಖರ ಮಾಹಿತಿ ನೀಡಬೇಕು. ರೈತರ ನೆರವಿಗೆ ಮತ್ತು ಬಿದ್ದ ಮನೆಗಳಿಗೆ ಸೂಕ್ತ ಪರಿಹಾರ ದೊರಕಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಶಿವಪ್ಪ ಸರವಿ, ಶಿವಾನಂದ ಲಿಂಗಶೆಟ್ರ, ಸಂಗಪ್ಪ ನಂದಗಾವಿ, ಖಾನಸಾಬ್‌ ಸೂರಣಗಿ, ಚಂದ್ರಶೇಖರ ಬೂದಿಹಾಳ, ಚನ್ನಬಸಪ್ಪ ಹಾವೇರಿ, ಶಿವಾನಂದಪ್ಪ ಹೊಸಮನಿ, ಅಶೋಕ ಸೊರಟೂರ, ದೇವಪ್ಪ ಬಟ್ಟೂರ, ಶಿವರೆಡ್ಡಿ ಗುತ್ತಲ, ಮರಿಯಪ್ಪ ಬಳ್ಳಾರಿ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ