ಜಿಪಂ ಎದುರು ಅನಿರ್ದಿಷ್ಟಾವಧಿಯ ಮುಷ್ಕರ ಆರಂಭ,
ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಆರ್‌ಡಿಪಿಆರ್ ವ್ಯಾಪ್ತಿಗೆ ಒಳಪಡುವ ಇಲಾಖೆ ನೌಕರರು ಜಿಲ್ಲಾ ಪಂಚಾಯ್ತಿ ಎದುರು ಅನಿರ್ಧಿಷ್ಟಾವಧಿ ಪ್ರತಿಭಟನೆ ಕೈಗೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕ್ಷೇಮಾಭೀವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಯೋಗೀಶ್, ರಾಜ್ಯದಲ್ಲಿ ಜನರಿಗೆ ಸ್ಥಳೀಯ ಸಂಸ್ಥೆಯಾದ ಗ್ರಾಮ ಪಂಚಾಯಿತಿಗಳಿಂದ ಶೇ.70 ರಷ್ಟು ಸೇವೆಗಳನ್ನು ಒದಗಿಸುತ್ತಿದೆ. ಈ ವ್ಯವಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಗ್ರಾಪಂ ಸದಸ್ಯರು, ಪಿಡಿಒ, ಕಾರ್ಯದರ್ಶಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಹಾಗೂ ಸಿಬ್ಬಂದಿ ವಿವಿಧ ಸಮಸ್ಯೆಗಳು ಎದುರಿಸುತ್ತಿದೆ. ಈ ನಡುವೆ ಎಲ್ಲಾ ಸಮಸ್ಯೆಗಳಿಗೆ ಪಿಡಿಒ ಹಾಗೂ ಸಿಬ್ಬಂದಿಯನ್ನು ನೇರ ಹೊಣೆಗಾರನ್ನಾಗಿಸುವ ಸರ್ಕಾರ ಮತ್ತು ಇಲಾಖೆ ಧೋರಣೆಯನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು.ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆಯನ್ನು ಗೆಜೆಟೆಡ್ ಗ್ರೂಪ್ ಬಿ ದರ್ಜೆಗೆ ಉನ್ನತೀಕರಿಸುವುದು. ಜೇಷ್ಟತಾ ಪಟ್ಟಿಯನ್ನು ಕೂಡಲೇ ಅಂತಿಮಗೊಳಿಸಿ, ಬಡ್ತಿ ನೀಡಲು ಕ್ರಮ ಕೈಗೊಳ್ಳಬೇಕು. ಇತರೆ ಇಲಾಖೆಯಲ್ಲಿರುವ ಸಮಾನಾಂತರ ಹುದ್ದೆಗಳಿಗೆ ನಿಯೋಜನೆ ಮೇಲೆ ಹೋಗಲು ಒಟ್ಟು ಮಂಜೂರಾದ ಹುದ್ದೆಗಳಲ್ಲಿ ಶೇ.25 ಹುದ್ದೆಗಳಿಗೆ ಅನುಮತಿ ನೀಡಬೇಕು ಎಂದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಜಗನ್ನಾಥ್ ಮಾತನಾಡಿ, ಗ್ರಾಪಂಗಳು ಮೇಲ್ದರ್ಜೇಗೇರಿಸಿದ ವೇಳೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ಅಲ್ಲಿನ ಸರ್ಕಾರಿ ನೌಕರರನ್ನು ಸಾರ್ವಜನಿಕ ಹಿತದೃಷ್ಟಿಯಿಂದ ವಿಲೀನಗೊಳಿಸುವುದು ಹಾಗೂ ವಸತಿ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರ ಹುದ್ದೆ ಸೃಜನೆ ಮಾಡಿ ಪಿಡಿಒಗಳಿಗೆ ಪದೋನ್ನತಿ ನೀಡುವ ಮೂಲಕ ಭರ್ತಿಗೊಳಿಸಬೇಕು ಎಂದು ತಿಳಿಸಿದರು.
ಗ್ರಾ.ಪಂ. ಸಿಬ್ಬಂದಿಗೆ ಆರೋಗ್ಯವಿಮೆ 50 ಸಾವಿರವಿದೆ. ಇದರಿಂದ ನೌಕರರಿಗೆ ಪ್ರಯೋಜನವಾಗುತ್ತಿಲ್ಲ. ಹೀಗಾಗಿ 5 ಲಕ್ಷ ಆರೋಗ್ಯ ವಿಮೆ ಜಾರಿ ಮಾಡಬೇಕು. ಕರ ವಸೂಲಿಗಾರರು ಮತ್ತು ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ವೃಂದದಿಂದ ಸೇವೆ ಒಳಗಿನ ನೇಮಕಾತಿಗೆ ಎಸ್.ಡಿ.ಎ.ಎ. ವೃಂದಕ್ಕೆ ಪದೋನ್ನತಿ ಹೊಂದಲು ಶೇ.75 ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಗೆ ಬೆಂಬಲ ಸೂಚಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಪಂಚ ನೌಕರರನ್ನು ಬೇಡಿಕೆ ಈಡೇರಿಸದೇ ರಾಜ್ಯ ಸರ್ಕಾರ ಸತಾಯಿಸುತ್ತಿದೆ. ಪಂಚಾಯಿತಿ ವ್ಯಾಪ್ತಿಯ ನೌಕರರನ್ನು ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿದ್ದು ಶೀಘ್ರದಲ್ಲೇ ಸರ್ಕಾರ ನೌಕರರ ಬೇಡಿಕೆಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.
7 ಕೆಸಿಕೆಎಂ 1ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಗ್ರಾಮ ಪಂಚಾಯ್ತಿ ನೌಕರರು ಚಿಕ್ಕಮಗಳೂರು ಜಿಪಂ ಎದುರು ಸೋಮವಾರ ಅನಿರ್ದಿಷ್ಟಾವಧಿಯ ಮುಷ್ಕರವನ್ನು ನಡೆಸಿದರು.