ಕನ್ನಡಪ್ರಭ ವಾರ್ತೆ ಕಲಘಟಗಿ ಪಂಚಮಸಾಲಿ ಸಮಾಜದ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಅ.13ರಂದು ಶುಕ್ರವಾರ ಹುಬ್ಬಳ್ಳಿಯ ಗಬ್ಬೂರ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ ನೆರವೇರಿಸುವ ಮೂಲಕ ಶಾಂತಿಯುತ ಪ್ರತಿಭಟನೆ ನಡೆಸಲಾಗುವುದು ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. ಪಟ್ಟಣದ ಫಕ್ಕಿರಪ್ಪ ನಿಗದಿ ಅವರ ಮನೆಯಲ್ಲಿ ಸೋಮವಾರ ಇಷ್ಟಲಿಂಗ ಪೂಜೆ ನೆರವೇರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಶ್ರಾವಣ ಮಾಸದಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ಆಯೋಜಿಸಿತ್ತಾ ಬರಲಾಗಿದೆ. ಈ ಬಾರಿ ಹುಬ್ಬಳಿಯಲ್ಲಿ ನಡೆಯಲಿದೆ ಎಂದು ಹೇಳಿದರು. ರಾಜ್ಯ ಸರ್ಕಾರ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು ಹಾಗೂ ಒಬಿಸಿ ಮೀಸಲಾತಿಗೆ ಕೂಡಲೇ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿ ಹಲವು ಜಿಲ್ಲೆಗಳಲ್ಲಿ ಶಾಂತಿಯುತ ಪ್ರತಿಭಟನೆ ಮಾಡುತ್ತ ಬಂದಿದ್ದೇವೆ. ಕೇವಲ ಮೀಸಲಾತಿ ಒಂದೇ ಅಲ್ಲದೇ ರೈತರು ಮತ್ತು ಲೋಕ ಕಲ್ಯಾಣಾರ್ಥವಾಗಿ ಶಾಂತಿಯುತ ಪ್ರತಿಭಟನೆ ನಡೆಸಲಾಗುವುದು ಎಂದರು. ಅ. 13ರಂದು ಬೆಳಗ್ಗೆ ಕಿತ್ತೂರುರಾಣಿ ಚೆನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಸಾಮೂಹಿಕವಾಗಿ ಜಿಲ್ಲಾ ಮಟ್ಟದ ಇಷ್ಟಲಿಂಗ ಪೂಜೆ ನೆರವೇರಿಸಲಾಗುವುದು. ನಂತರ ಗಬ್ಬೂರು ಕ್ರಾಸ್ ವರೆಗೆ ತೆರಳಿ ಪ್ರತಿಭಟನೆ ಮಾಡಲಾಗುವುದು. ಎಲ್ಲ ಲಿಂಗಾಯತ ಸಮಾಜ ಬಾಂಧವರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಸಿ.ಬಿ. ಹೊನ್ನಿಹಳ್ಳಿ, ಡಾ. ಫಕ್ಕಿರಪ್ಪ ನಿಗದಿ, ಬಿ.ವೈ. ಪಾಟೀಲ, ಪರಮಾನಂದ ಒಡೆಯರ, ಯಲ್ಲಪ್ಪ ಚವರಗಿ, ಚಂದ್ರು ಬೀಸರಳ್ಳಿ, ಬಸಪ್ಪ ಜಿನ್ನೂರು, ಜಿ.ಎನ್. ಘಾಳಿ, ಮಂಜುನಾಥ ನಾವಳ್ಳಿ ಇತರರಿದ್ದರು