ಮಹಾನಗರ ಪಾಲಿಕೆ ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ, ಪ್ರತಿಭಟನೆ

KannadaprabhaNewsNetwork |  
Published : Jul 31, 2026, 02:15 AM IST
ಮಹಾನಗರ ಪಾಲಿಕೆ ನೌಕರರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಗುತ್ತಿಗೆದಾರ ಶರದ್‌ ಎಂ. ದೊಡ್ಡಮನಿ ಇವರು ಮಾಧ್ಯಮದ ಎದುರು ಪಾಲಿಕೆ ಅಧಿಕಾರಿಗಳ ಕುರಿತು “ಎಸ್‌ಐಆರ್‌ ಹೆಸರಿನಲ್ಲಿ ಇವರು ಆಡಿದ್ದೇ ಆಟ, ದೇವಸ್ಥಾನ, ವೋಟರ್‌ ಬೂತ್‌, ಶಾಲೆಯಲ್ಲಿ ಕುಳಿತು ಅಲ್ಲಿಂದ ಮಧ್ಯಾಹ್ನ ಮನೆಗೆ ಹೋಗಿ ಮಲಗುತ್ತಾರೆ. ಎಷ್ಟು ದಿನ ಎಸ್‌ಐಆರ್‌ ಕೆಲಸ? ಎಂದು ದೂರಿದ್ದರು.

ಹುಬ್ಬಳ್ಳಿ:

ಮಹಾನಗರ ಪಾಲಿಕೆ ನೌಕರರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಗುತ್ತಿಗೆದಾರ ಶರದ್‌ ಎಂ. ದೊಡ್ಡಮನಿ ಮೇಲೆ ಕಾನೂನು ಕ್ರಮಕೈಗೊಳ್ಳುವಂತೆ ಹಾಗೂ ಅವರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಆಗ್ರಹಿಸಿ ಪಾಲಿಕೆ ನೌಕರರ ಸಂಘದ ವತಿಯಿಂದ ಗುರುವಾರ ನಗರದ ಪಾಲಿಕೆ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಚುನಾವಣಾ ಆಯೋಗದ ಸುತ್ತೋಲೆಯಂತೆ ಎಸ್‌ಐಆರ್‌ (ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ) ಕುರಿತು ಮತದಾರರ ಮನೆ ಮನೆಯ ಸರ್ವೇ ಕಾರ್ಯದಲ್ಲಿ ತೊಡಗಿದ್ದೇವೆ. ಪರಿಷ್ಕರಣೆಗೆ ಸಮಯಾವಕಾಶ ನಿಗದಿಪಡಿಸಿದ್ದು, ರಜೆ ಇದ್ದಾಗಲೂ ಚುನಾವಣೆ ಕಾರ್ಯದಲ್ಲಿ ತೊಡಗಿರುತ್ತೇವೆ. ಗುತ್ತಿಗೆದಾರ ಶರದ್‌ ಎಂ. ದೊಡ್ಡಮನಿ ಇವರು ಮಾಧ್ಯಮದ ಎದುರು ಪಾಲಿಕೆ ಅಧಿಕಾರಿಗಳ ಕುರಿತು “ಎಸ್‌ಐಆರ್‌ ಹೆಸರಿನಲ್ಲಿ ಇವರು ಆಡಿದ್ದೇ ಆಟ, ದೇವಸ್ಥಾನ, ವೋಟರ್‌ ಬೂತ್‌, ಶಾಲೆಯಲ್ಲಿ ಕುಳಿತು ಅಲ್ಲಿಂದ ಮಧ್ಯಾಹ್ನ ಮನೆಗೆ ಹೋಗಿ ಮಲಗುತ್ತಾರೆ. ಎಷ್ಟು ದಿನ ಎಸ್‌ಐಆರ್‌ ಕೆಲಸ? ಎಂದು ದೂರಿದ್ದರು.

ಅಲ್ಲದೇ, ಶರದ್‌ ಎಂ. ದೊಡ್ಡಮನಿ ಅವರು ಪಾಲಿಕೆ ಅಧಿಕಾರಿ ಹಾಗೂ ಸಿಬ್ಬಂದಿ ಬಗ್ಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ನೌಕರರ ಮೇಲೆ ಸುಳ್ಳು ಆರೋಪ ಮಾಡಿದ ಅವರ ಮೇಲೆ ಕಾನೂನು ಕ್ರಮಕೈಗೊಂಡು ಬಂಧಿಸಲು ಕ್ರಮಕೈಗೊಳ್ಳಬೇಕು ಎಂದು ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಅವರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಸಂಘದ ಗೌರವಾಧ್ಯಕ್ಷ ಡಾ. ಶ್ರೀಧರ ದಂಡಪ್ಪನವರ, ಶಿವಾನಂದ ರಾಮಯ್ಯನವರು, ರಮೇಶ ಬಿ., ಪ್ರಸಾದ್‌ ಎಂ. ಪೆರೂರ, ವಿಜಯಕುಮಾರ ಸಾಳುಂಕೆ ಸೇರಿದಂತೆ ಅನೇಕರಿದ್ದರು.

ಕುಸಿದು ಬಿದ್ದ ಗುತ್ತಿಗೆದಾರ

ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು, ಸದಸ್ಯರು ಪಾಲಿಕೆ ನೌಕರರು ಮಾಡುತ್ತಿರುವ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ್ದ ಗುತ್ತಿಗೆದಾರ ಶರದ್‌ ದೊಡ್ಡಮನಿ ಅವರು ಚರ್ಚೆ ನಡೆಸುತ್ತಿದ್ದಾಗ, ಅನಾರೋಗ್ಯದಿಂದ ಕೆಳಗೆ ಕುಸಿದು ಬಿದ್ದ ಘಟನೆ ನಡೆಯಿತು. ಆಗ ಅವರನ್ನು ಪಾಲಿಕೆ ನೌಕರರು ಹಾಗೂ ಗುತ್ತಿಗೆದಾರರೇ ಆಸ್ಪತ್ರೆಗೆ ಕರೆದುಕೊಂಡು ಚಿಕಿತ್ಸೆ ಕೊಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ರಕ್ಷಣೆಗೆ ಸೂಕ್ತ ಕಾನೂನು ಅರಿವು ನೀಡುವುದು ಅತ್ಯಗತ್ಯ: ಹುಲಗಪ್ಪ ಡಿ.
ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಬಾರದು: ಜಾನಕಿ ಕೆ.ಎಂ.