ಹದಗೆಟ್ಟ ಭಟ್ಕಳ ಸರ್ಕಾರಿ ಆಸ್ಪತ್ರೆ ರಸ್ತೆ, ಗಿಡ ನೆಟ್ಟು ಪ್ರತಿಭಟನೆ

KannadaprabhaNewsNetwork |  
Published : Jul 12, 2026, 03:15 AM IST
ಭಟ್ಕಳ ಪಟ್ಟಣದ ಸರ್ಕಾರಿ ಆಸ್ಪತ್ರೆ ರಸ್ತೆಯ ಹೊಂಡದಲ್ಲಿ ಸಾರ್ವಜನಿಕರು ಗಿಡನೆಟ್ಟು ಪ್ರತಿಭಟಿಸಿದರು. | Kannada Prabha

ಸಾರಾಂಶ

ಭಟ್ಕಳ ಪಟ್ಟಣದ ಸರ್ಕಾರಿ ಆಸ್ಪತ್ರೆ ರಸ್ತೆ ಅವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು ರಸ್ತೆಯ ಹೊಂಡದಲ್ಲಿ ಗಿಡನೆಟ್ಟು ಸಾಂಕೇತಿಕವಾಗಿ ಪ್ರತಿಭಟಿಸಿದರು.

ಭಟ್ಕಳ: ಪಟ್ಟಣದ ಸರ್ಕಾರಿ ಆಸ್ಪತ್ರೆ ರಸ್ತೆ ಅವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು ರಸ್ತೆಯ ಹೊಂಡದಲ್ಲಿ ಗಿಡನೆಟ್ಟು ಸಾಂಕೇತಿಕವಾಗಿ ಪ್ರತಿಭಟಿಸಿದರು.

ಈ ರಸ್ತೆ ಜನ ಹಾಗೂ ವಾಹನ ಸಂಚಾರಕ್ಕೆ ಅಯೋಗ್ಯವಾಗಿದ್ದು, ದಿನಂಪ್ರತಿ ರಸ್ತೆಯಲ್ಲಿ ಸಾವಿರಾರು ಜನರು ತಿರುಗಾಡುತ್ತಿದ್ದರೂ ರಸ್ತೆ ರಿಪೇರಿಗೆ ಇಲಾಖೆ ಮುಂದಾಗಿಲ್ಲ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರಸಭೆಯ ನಗರೋತ್ಥಾನ ಕಾಮಗಾರಿಯಲ್ಲಿ ಈ ರಸ್ತೆ ಮಾಡಬೇಕಾಗಿದ್ದರೂ ನಿರ್ಲಕ್ಷ್ಯ ತಾಳಲಾಗಿದೆ. ಸರ್ಕಾರಿ ಆಸ್ಪತ್ರೆಯ ರಸ್ತೆಯ ಬಗ್ಗೆ ಅಸಡ್ಡೆ ತೋರಿರುವುದು ಯಾಕೆ ಎಂದು ಜನರು ಪ್ರಶ್ನಿಸಿದರು. ರಸ್ತೆ ಹೊಂಡಮಯವಾಗಿದ್ದು, ಸಂಚಾರಕ್ಕೆ ತೊಂದರೆಯಾಗಿದೆ. ಇಲ್ಲಿ ಸ್ವಲ್ಪ ಯಾಮಾರಿದರೂ ಹೊಂಡಕ್ಕೆ ಬೀಳುವುದು ಖಚಿತ ಎಂದು ಹೇಳಿದರು.

ಸಾಗರ ರಸ್ತೆಯಿಂದ ಸರ್ಕಾರಿ ಆಸ್ಪತ್ರೆಗೆ ಹೋಗುವ ರಸ್ತೆ ತೀರಾ ಹದಗೆಟ್ಟು ವರ್ಷಗಳೇ ಸಂದಿದ್ದರೂ ಕ್ರಮ ಕೈಗೊಂಡಿಲ್ಲ. ದಿನಕ್ಕೆ ಸರ್ಕಾರಿ ಆಸ್ಪತ್ರೆ ಸೇರಿದಂತೆ ಪಟ್ಟಣ ಭಾಗಕ್ಕೆ, ವಾರದ ಸಂತೆ ಇದ್ದಾಗ ಈ ರಸ್ತೆಯಲ್ಲಿ ಸಾವಿರಾರು ಜನರು ಸಂಚರಿಸುತ್ತಾರೆ. ರಸ್ತೆ ದುಸ್ಥಿತಿಯ ಬಗ್ಗೆ ಅರಿವು ಇರುವ ಜನಪ್ರತಿನಿಧಿಗಳು, ಅಧಿಕಾರಿಗಳು ಮಳೆಗಾಲದೊಳಗೆ ಕ್ರಮ ಕೈಗೊಂಡು ಮರುಡಾಂಬರೀಕರಣ ಮಾಡಿಸಬೇಕಿತ್ತು. ಆದರೆ ಸರ್ಕಾರಿ ಆಸ್ಪತ್ರೆಯ ಬಗ್ಗೆ ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಮೌನ ತಾಳಿರುವುದು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಸರ್ಕಾರಿ ಆಸ್ಪತ್ರೆ ರಸ್ತೆ ಸಂಚಾರಕ್ಕೆ ತೀರಾ ಅಗತ್ಯವಿರುವುದರಿಂದ ಕೂಡಲೇ ರಸ್ತೆ ಮರುಡಾಂಬರೀಕರಣಕ್ಕೆ ಮುಂದಾಗಿ ಜನ ಹಾಗೂ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕಿದೆ. ಇದು ನಗರಸಭೆ ವ್ಯಾಪ್ತಿಗೆ ಒಳಪಟ್ಟಿದ್ದರಿಂದ ನಗರಸಭೆ ರಸ್ತೆಯ ಅವ್ಯವಸ್ಥೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಜನರು ಒತ್ತಾಯಿಸಿದರು.

ಸರ್ಕಾರಿ ಆಸ್ಪತ್ರೆಯ ರಸ್ತೆಯಲ್ಲಿ ಹೊಂಡ ಬಿದ್ದಿದ್ದರಿಂದ ಸಂಚಾರಕ್ಕೆ ತೀರಾ ತೊಂದರೆ ಆಗಿದೆ. ಕೂಡಲೇ ಸಂಬಂಧಿಸಿದವರು ರಸ್ತೆ ಮರುಡಾಂಬರೀಕರಣ ಅಥವಾ ರಿಪೇರಿಗೆ ಮುಂದಾಗಬೇಕು ಎಂದು ಆಟೋ ಚಾಲಕ ಗಣೇಶ ಹಳ್ಳೇರ ಮುಂಡಳ್ಳಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಲಿ ಗಣತಿ ಕ್ಯಾಮೆರಾ ಕಳ್ಳನ ಬಂಧನ, ಎರಡು ಕ್ಯಾಮೆರಾ ವಶ
ಅನುದಾನ ಕೊರತೆ: ಗ್ರಾಪಂ ಸೇವೆ ಸ್ಥಗಿತದ ಎಚ್ಚರಿಕೆ