ರಾಣಿಬೆನ್ನೂರು: ಆಟೋರಿಕ್ಷಾಗಳಿಗೆ ಬಳಸುವ ಎಲ್‌ಪಿಜಿ ಗ್ಯಾಸ್ ದರ ಏರಿಕೆಯ ಕ್ರಮ ಖಂಡಿಸಿ ಮತ್ತು ದರ ವ್ಯತ್ಯಾಸ ಮಾಡಿ ಗ್ರಾಹಕರಿಗೆ ವಂಚಿಸುತ್ತಿರುವ ಗ್ಯಾಸ್ ಬಂಕ್ ಮಾಲೀಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸೋಮವಾರ ನಗರದಲ್ಲಿ ತಾಲೂಕಿನ ಆಟೋ ಚಾಲಕ ಮತ್ತು ಮಾಲೀಕರು ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರಿದೀಪಸಿಂಗ್ ಪುರಿ ಅವರಿಗೆ ಮನವಿ ಸಲ್ಲಿಸಿದರು. ಇಲ್ಲಿನ ಕೆಇಬಿ ವಿನಾಯಕ ದೇವಸ್ಥಾನದ ಬಳಿಯಿಂದ ಮೆರವಣಿಗೆಯಲ್ಲಿ ಹೊರಟ ಪ್ರತಿಭಟನಾಕಾರರು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಹಸೀಲ್ದಾರ್ ಕಚೇರಿ ತಲುಪಿದರು. ಕೇಂದ್ರ ಸರ್ಕಾರ ದಿಢೀರನೆ ಎಲ್‌ಪಿಜಿ ಗ್ಯಾಸ್ ದರ ಏರಿಕೆ ಮಾಡಿರುವುದರಿಂದ ಆಟೋ ಚಾಲಕರು ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದೆ. ಇಂಧನ ಬೆಲೆ ಏರಿಕೆಗೆ ಅನುಗುಣವಾಗಿ ನಾವು ಕನಿಷ್ಠ ದರವನ್ನು ಪ್ರಯಾಣಿಕರಿಗೆ ಏರಿಕೆ ಮಾಡಿದರೆ ಪ್ರಯಾಣಿಕರು ಆಟೋರಿಕ್ಷಾಗಳಲ್ಲಿ ಪ್ರಯಾಣ ಮಾಡುವುದಿಲ್ಲ. ಹಾಗಂತ ಮೊದಲಿನ ದರ ಪಡೆದರೆ ಖರ್ಚು ವೆಚ್ಚಗಳನ್ನು ನಿರ್ವಹಣೆ ಮಾಡಿಕೊಂಡು ರಿಕ್ಷಾ ಓಡಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಕೇಂದ್ರ ಸರ್ಕಾರ ಶೀಘ್ರವೇ ಏರಿಕೆ ಮಾಡಿರುವ ಎಲ್‌ಪಿಜಿ ದರವನ್ನು ಕಡಿಮೆ ಮಾಡಿ ಆಟೋರಿಕ್ಷಾ ವೃತ್ತಿಯನ್ನೇ ಅವಲಂಬಿಸಿಕೊಂಡು ಬದುಕುತ್ತಿರುವ ಕುಟುಂಬಗಳಿಗೆ ನ್ಯಾಯ ನೀಡಬೇಕು. ಇದಲ್ಲದೆ ಕೂಡಲೇ ಜಿಲ್ಲಾಡಳಿತವು ತಾಲೂಕು ದಂಡಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಗರದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಎಲ್‌ಪಿಜಿ ಗ್ಯಾಸ್ ಮಾಲೀಕರು ಮತ್ತು ಆಟೋ ಚಾಲಕರ ಸಭೆ ಕರೆದು ದರ ವ್ಯತ್ಯಾಸ ಮಾಡುತ್ತಿರುವ ಬಂಕ್ ಮಾಲೀಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಆಟೋ ಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಎಲ್ಲಪ್ಪ ಚಿಕ್ಕಣ್ಣನವರ, ರವೀಂದ್ರಗೌಡ ಪಾಟೀಲ, ಜಗದೀಶ್ ಕೆರೊಡಿ, ಉದಯ ತೆಗ್ಗಿನ, ರಮೇಶ ಕೆಂಪಣ್ಣನವರ, ಮಂಜಪ್ಪ ಗಳಗನಾಥ, ನಾಗರಾಜ ಹಾರೋಗೊಪ್ಪ, ಅಣ್ಣಪ್ಪ ಕೆ, ವಿನಯ್ ಚೆನ್ನಪ್ಪನವರ, ಮಂಜು ಹಾವೇರಿ, ರಾಜು ರಾವಳ, ಪರಶುರಾಮ ಅಯ್ಯಜ್ಜನವರ, ಮಾಲತೇಶ ವಡ್ಡರ ಮತ್ತಿತರರಿದ್ದರು.