ಗದಗ: ವಿಂಡ್ ಪವರ್ ಯೋಜನೆಗಳಲ್ಲಿ ಸ್ಥಳೀಯ ಭೂಮಾಲೀಕರಿಗೆ ಹಾಗೂ ರೈತರಿಗೆ ಆದ್ಯತೆ ನೀಡುವ ಕುರಿತು ಹಾಗೂ ಪಾಲುದಾರರಾಗುವ ಕುರಿತು ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು.
ಜಿಲ್ಲೆಯಲ್ಲಿ ವಿಂಡ್ ಪವರ್ ಅತ್ಯಧಿಕ ಉತ್ಪಾದನೆ ಆಗುತ್ತಿದ್ದು, ಉತ್ಪಾದನೆಯಲ್ಲಿ ಭೂಮಾಲೀಕರಾದ ರೈತರಿಗೂ ಪಾಲು ಸಿಗಬೇಕು ಎಂದು ಸಚಿವ ಎಚ್.ಕೆ. ಪಾಟೀಲ ಅವರು ಜಾರ್ಜ್ ಅವರಿಗೆ ವೇದಿಕೆಯಲ್ಲೇ ಮನವಿ ಮಾಡಿದ್ದರು. ಮನವಿಗೆ ವೇದಿಕೆಯಲ್ಲೇ ಪ್ರತಿಕ್ರಿಯೆ ನೀಡಿದ ಅವರು, ವಿಂಡ್ ಮಿಲ್ ಸ್ಥಾಪನೆಗೆ ಸಂಬಂಧಿಸಿದಂತೆ ಸ್ಥಳೀಯ ರೈತರು ಮತ್ತು ಭೂಮಾಲೀಕರು ಪಾಲುದಾರರಾಗುವಂತೆ ನೀತಿ ರೂಪಿಸುವ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚೆ ನಡೆಸಲಾಗುತ್ತದೆ ಎಂದರು.
ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಈಗಾಗಲೇ ಸುಮಾರು 2500 ಮೆಗಾವಾಟ್ ವಿಂಡ್ ಪವರ್ ಉತ್ಪಾದನೆಗಾಗಿ ಟೆಂಡರ್ ನೀಡಲಾಗಿದೆ. ಇದರಿಂದ ಸುಮಾರು ₹10 ಸಾವಿರ ಕೋಟಿ ಹೂಡಿಕೆ ರಾಜ್ಯಕ್ಕೆ ಬರಲಿದ್ದು, ವಿದ್ಯುತ್ ಉತ್ಪಾದನೆ ಹೆಚ್ಚುವ ಜತೆಗೆ ರೈತರಿಗೆ ಸಹ ಲಾಭವಾಗಲಿದೆ ಎಂದರು.ರಾಜ್ಯ ಸರ್ಕಾರ ರೈತರಿಗೆ ವಿದ್ಯುತ್ ಸಬ್ಸಿಡಿ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ನೆರವು ನೀಡುತ್ತಿವೆ. ಗೃಹಜ್ಯೋತಿ ಸೇರಿದಂತೆ ಉಚಿತ ವಿದ್ಯುತ್ ಯೋಜನೆಗಳಿಗೆ ವರ್ಷಕ್ಕೆ ಸುಮಾರು ₹33 ಸಾವಿರ ಕೋಟಿ ವೆಚ್ಚವಾಗುತ್ತಿದೆ ಎಂದರು. ರೈತರಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡುವ ಮೂಲಕ ಕೃಷಿ ಉತ್ಪಾದನೆ ಹೆಚ್ಚಿಸುವುದು ಸರ್ಕಾರದ ಉದ್ದೇಶವಾಗಿದೆ. ರೈತರು ಉತ್ಪಾದನೆ ಹೆಚ್ಚಿಸಿದಷ್ಟು ರಾಜ್ಯದ ಆರ್ಥಿಕತೆಗೂ ಬಲ ಸಿಗುತ್ತದೆ ಎಂದರು.
ಸೋಮವಾರ ನಗರದ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ ಆಯೋಜಿಸಿದ್ದ ದಿ. ಕೆ.ಎಚ್. ಪಾಟೀಲರ 101ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ರೈತರ ಹೊಲಗಳಲ್ಲಿ ಬೀಸುವ ಗಾಳಿಯಲ್ಲಿಯೂ ರೈತರ ಹಕ್ಕಿರುತ್ತದೆ. ರೈತರ ಜಮೀನುಗಳಲ್ಲಿ ಸಿಗುವ ಖನಿಜ ಸಂಪತ್ತಿಗೆ ಹೇಗೆ ಬೆಲೆ ನೀಡಲಾಗುತ್ತದೆಯೋ ಹಾಗೆಯೇ ರೈತರ ಜಮೀನುಗಳಲ್ಲಿ ಬೀಸುವ ಗಾಳಿಯಲ್ಲಿ ರೈತರಿಗೆ ಹಕ್ಕಿದೆ.ಗಾಳಿಯಂತ್ರ ಸ್ಥಾಪನೆ ಮಾಡಿರುವ ರೈತರ ಜಮೀನುಗಳ ಮಾಲೀಕರಿಗೆ ಅದರ ಆದಾಯದಲ್ಲಿ ಪಾಲು ನೀಡುವ ವ್ಯವಸ್ಥೆ ಮಾಡಬೇಕು. ಉತ್ಪಾದನೆಯಾಗುವ ವಿದ್ಯುತ್ ಆದಾಯದಲ್ಲಿ ರೈತರಿಗೆ ಶೇಕಡಾವಾರು ಪಾಲು ನೀಡಬೇಕು. ಈ ವಿಷಯವನ್ನು ಇಂಧನ ಸಚಿವರು ಗಂಭೀರವಾಗಿ ಪರಿಗಣಿಸಬೇಕು ಎಂದರು.
ಈ ರೀತಿಯ ಯೋಜನೆಗಳು ಹೊಸದಲ್ಲ. ಕೆಲವು ಕಡೆ ರೈತರಿಗೆ ವಿದ್ಯುತ್ ಉತ್ಪಾದನೆಯ ಆದಾಯದಲ್ಲಿ ಪಾಲು ನೀಡುವ ಮಾದರಿ ಜಾರಿಯಲ್ಲಿದೆ ಎಂದ ಅವರು, ನಮ್ಮೂರಾದ ಹುಲಕೋಟಿಯಲ್ಲಿನ 70 ಮಂದಿ ರೈತರು ಈ ರೀತಿಯ ಲಾಭ ಪಡೆಯುತ್ತಿರುವ ಉದಾಹರಣೆಯನ್ನು ಉಲ್ಲೇಖಿಸಿದರು. ಈ ಯೋಜನೆ ಜಾರಿಯಾದರೆ ಜಿಲ್ಲೆಯ ರೈತರಿಗೆ ಹೊಸ ಆದಾಯದ ಮಾರ್ಗ ದೊರೆಯಲಿದೆ ಎಂದು ಇಲಾಖೆ ಸಚಿವರಲ್ಲಿ ಮನವಿ ಮಾಡಿದರು.