ಕೆಎಸ್ಆರ್ಟಿಸಿ ಮತ್ತು ಖಾಸಗಿ ಬಸ್ ಪ್ರಯಾಣ ದರವನ್ನು ಏಕಾಏಕಿ ಹೆಚ್ಚಿಸಿರುವುದನ್ನು ಖಂಡಿಸಿ, ನವೆಂಬರ್ 23ರಂದು ಪಟ್ಟಣದಲ್ಲಿ ರೈತ ಸಂಘದಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಸಿ.ಎಂ. ಹೊಳೆ ಚಿರಂಜೀವಿ ಹೇಳಿದ್ದಾರೆ.
- ಎಲ್ಲರೂ ಭಾಗವಹಿಸಲು ರೈತ ಸಂಘ ತಾಲೂಕು ಅಧ್ಯಕ್ಷ ಸಿ.ಎಂ.ಹೊಳೆ ಚಿರಂಜೀವಿ ಮನವಿ
- - -
ಕನ್ನಡಪ್ರಭ ವಾರ್ತೆ ಜಗಳೂರು
ಕೆಎಸ್ಆರ್ಟಿಸಿ ಮತ್ತು ಖಾಸಗಿ ಬಸ್ ಪ್ರಯಾಣ ದರವನ್ನು ಏಕಾಏಕಿ ಹೆಚ್ಚಿಸಿರುವುದನ್ನು ಖಂಡಿಸಿ, ನವೆಂಬರ್ 23ರಂದು ಪಟ್ಟಣದಲ್ಲಿ ರೈತ ಸಂಘದಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಸಿ.ಎಂ. ಹೊಳೆ ಚಿರಂಜೀವಿ ಹೇಳಿದರು.
ಶುಕ್ರವಾರ ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸ್ ಪ್ರಯಾಣ ದರ ಹಿಂದೆಂದೂ ಕಾಣದಷ್ಟು ದುಬಾರಿಯಾಗಿದೆ. ಏಕಾಏಕಿ ದರ ಏರಿಸಿದರೆ ಬಡವರು, ಕೂಲಿಕಾರರು ಮತ್ತು ಸಾಮಾನ್ಯ ಜನರು ಜೀವನ ನಡೆಸುವುದು ಹೇಗೆ? ಬರಪೀಡಿತ ಪ್ರದೇಶ ಆಗಿರುವ ಜಗಳೂರಿನ ಜನತೆಗೆ ದರ ದುಪ್ಪಟ್ಟುಗೊಳಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚಿತ್ರದುರ್ಗದಿಂದ ಹಿರಿಯೂರಿಗೆ (40 ಕಿ.ಮೀ.) ₹139 ನಿಗದಿಪಡಿಸಲಾಗಿದೆ. ಜಗಳೂರು-ಚಿತ್ರದುರ್ಗ, ಜಗಳೂರು-ದಾವಣಗೆರೆ ಹಾಗೂ ಜಗಳೂರು-ಕೊಟ್ಟೂರು ಸೇರಿದಂತೆ ಎಲ್ಲ ಮಾರ್ಗಗಳಲ್ಲೂ ಸರ್ಕಾರಿ ಮತ್ತು ಖಾಸಗಿ ಬಸ್ಗಳಲ್ಲಿ ಪ್ರಯಾಣ ದರವನ್ನು ಒಮ್ಮೆಲೆ ಹೆಚ್ಚಿಸಲಾಗಿದೆ. ಸರ್ಕಾರ ಹಾಗೂ ಖಾಸಗಿ ಬಸ್ ಮಾಲೀಕರು ಕೂಡಲೇ ಈ ದರ ಏರಿಕೆ ಆದೇಶವನ್ನು ಹಿಂಪಡೆಯಬೇಕು. ನ.23ರಂದು ನಡೆಯುವ ಪ್ರತಿಭಟನೆಯಲ್ಲಿ ತಾಲೂಕಿನ ಕೂಲಿಕಾರರು, ವಿದ್ಯಾರ್ಥಿಗಳು, ನಾಗರಿಕರು, ರೈತ ಸಂಘಟನೆಗಳು ಮತ್ತು ಪ್ರಗತಿಪರ ಹೋರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕು ಎಂದು ಮನವಿ ಮಾಡಿದರು.
ರಾಜ್ಯ ಹೆದ್ದಾರಿ ಬಂದ್ ಎಚ್ಚರಿಕೆ:
ಹಸಿರು ಸೇನೆ ತಾಲೂಕು ಅಧ್ಯಕ್ಷ ನಾಗರಾಜ್ ಮಾತನಾಡಿ, ಈ ಹಿಂದೆ ಜಗಳೂರಿನಿಂದ ಚಿತ್ರದುರ್ಗಕ್ಕೆ ₹40 ಪ್ರಯಾಣ ದರವಿತ್ತು. ಈಗ ಅದನ್ನು ₹73ಕ್ಕೆ ಏರಿಸಲಾಗಿದೆ. ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಒಂದು ಕಡೆ ಉಚಿತ ಸೌಲಭ್ಯ ನೀಡಿ, ಮತ್ತೊಂದು ಕಡೆ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುವ ಕೆಲಸವನ್ನು ಸರ್ಕಾರ ಮಾಡಬಾರದು. ತಕ್ಷಣವೇ ಹಳೆಯ ದರವನ್ನು ಮುಂದುವರಿಸದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಕಸವನಹಳ್ಳಿ ಮಾಯಣ್ಣ, ಹನುಮಂತಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
- - -
-20ಜೆ.ಜಿ.ಎಲ್.3: ಜಗಳೂರು ಪಟ್ಟಣದ ಪತ್ರಿಕಾ ಭವನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಸಿ.ಎಂ. ಹೊಳೆ ಚಿರಂಜೀವಿ ಇತರರು ಮಾತನಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.