ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ನಾಳೆ ಹೋರಾಟ: ಅನಂತಮೂರ್ತಿ ಹೆಗಡೆ

KannadaprabhaNewsNetwork |  
Published : Dec 15, 2025, 03:30 AM IST
ಪೊಟೋ13ಎಸ್.ಆರ್‌.ಎಸ್‌1 (ಸುದ್ದಿಗೋಷ್ಠಿಯಲ್ಲಿ ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಮಾತನಾಡಿದರು.) | Kannada Prabha

ಸಾರಾಂಶ

ಡಿ. 16ರಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಬೃಹತ್ ಹೋರಾಟ ಕೈಗೊಳ್ಳಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಶಿರಸಿ

ನಗರದ ಪಂಡಿತ ಸಾರ್ವಜನಿಕ ಆಸ್ಪತ್ರೆಯ ಕಾಮಗಾರಿ ಶೇ.80ರಷ್ಟು ಪೂರ್ಣಗೊಂಡು ಒಂದು ವರ್ಷಕ್ಕಿಂತಲೂ ಅಧಿಕ‌ ಸಮಯವಾದರೂ, ಇದುವರೆಗೂ ಆಸ್ಪತ್ರೆಗೆ ಸಂಬಂಧಿಸಿ ವೈದ್ಯಕೀಯ ಉಪಕರಣ, ತಜ್ಞ ವೈದ್ಯರ ನೇಮಕಾತಿ ಸಂಬಂಧಿಸಿ ಯಾವುದೇ ಪ್ರಕ್ರಿಯೆ ಆರಂಭಗೊಳ್ಳದಿರುವುದು ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು, ಹಿರಿಯರಾಗಿರುವ ದೇಶಪಾಂಡೆ ಒಳಗೊಂಡು ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯವಾಗಿದೆ. ಇದನ್ನು ಖಂಡಿಸಿ ಡಿ. 16ರಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಬೃಹತ್ ಹೋರಾಟ ಕೈಗೊಳ್ಳಲಾಗುತ್ತಿದೆ. ಇದು ಕೇವಲ ಯಾರ ವಿರುದ್ಧದ ಹೋರಾಟವಲ್ಲ. ಕ್ಷೇತ್ರದ ಜನರ ಹಿತಕ್ಕಾಗಿ ನಡೆಯುತ್ತಿರುವ ಹೋರಾಟವಾಗಿದ್ದು, ಪಕ್ಷ ಬೇಧ ಮರೆತು ಈ ಆಸ್ಪತ್ರೆ ಹೋರಾಟಕ್ಕೆ ಭಾಗವಹಿಸಬೇಕೆಂದು ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಹೇಳಿದ್ದಾರೆ.

ಶನಿವಾರ ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ‌ ಅಪಘಾತಗಳಿಗೆ ಒಳಗಾಗಿ ಮಾರ್ಗಮಧ್ಯೆ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ನಮ್ಮ ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಇಲ್ಲದಿರುವ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಹೊರ ಜಿಲ್ಲೆಯ ಉತ್ತಮ ಆಸ್ಪತ್ರೆಗೆ ಹೋಗುತ್ತಿದ್ದಾರೆ. ಆ ಕಾರಣಕ್ಕಾಗಿಯೇ ಶಿರಸಿಯಲ್ಲಿ ಅಂದಿನ ಬಿಜೆಪಿ ಸರ್ಕಾರದ ಆಡಳಿತದಲ್ಲಿ 250 ಹಾಸಿಗೆಗಳ ಆಸ್ಪತ್ರೆಗೆ ನಾಂದಿ ಹಾಡಲಾಗಿತ್ತು. ಆದರೆ ಈಗಿನ ರಾಜ್ಯ ಕಾಂಗ್ರೆಸ್ ಸರ್ಕಾರ ಆಸ್ಪತ್ರೆಯನ್ನು ಬಿಜೆಪಿ ಅವಧಿಯಲ್ಲಿ ಆರಂಭಗೊಂಡಿರುವ ಆಸ್ಪತ್ರೆಯನ್ನು ರಾಜಕೀಯ ಕಾರಣಕ್ಕಾಗಿ ನಿರ್ಮಾಣ ಹಂತದಲ್ಲಿ ನಿಧಾನಗೊಳಿಸಲಾಗುತ್ತಿದೆ. ಈಗಲೇ ಆಸ್ಪತ್ರೆ ನಿರ್ಮಾಣವಾದರೆ ಅದರ ಕ್ರೆಡಿಟ್ ಬಿಜೆಪಿ ಸರ್ಕಾರಕ್ಕೆ ‌ದೊರೆಯುತ್ತದೆ ಎಂಬ ಕಾರಣದಿಂದ ಮುಂಬರುವ ಚುನಾವಣೆ ಸಮಯಕ್ಕೆ ಆಸ್ಪತ್ರೆ ಪೂರ್ಣಗೊಳಿಸಿದರೆ, ಆಗ ಕ್ರೆಡಿಟ್ ತಮಗೆ ಬರುತ್ತದೆ ಎಂಬ ಭ್ರಮೆಯಲ್ಲಿ ಕೆಲವರು ಇದ್ದಾರೆ ಎನಿಸುತ್ತದೆ. ಇದನ್ನು ಶಿರಸಿಯ ಸಮಸ್ತ ನಾಗರಿಕರ ಪರವಾಗಿ ವಿರೋಧಿಸುವುದು ಅನಿವಾರ್ಯವಾಗಿದೆ. ಈ ಹಿಂದೆ ಘೋಷಿಸಲಾಗಿದ್ದ ಆಸ್ಪತ್ರೆಗೆ ಸಂಬಂಧಿಸಿ ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ವೈದ್ಯಕೀಯ ಉಪಕರಣಗಳ ಖರೀದಿ ಹಾಗೂ ತಜ್ಞ ವೈದ್ಯರ ನೇಮಕಾತಿ ಸಂಬಂಧಿಸಿ ಮಾಹಿತಿ ಕೇಳಲಾಗಿತ್ತು. ಇದಕ್ಕೆ ಪ್ರತಿಯಾಗಿ ಡಿ. 4ರಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯಿಂದ ಆಸ್ಪತ್ರೆ ವೈದ್ಯಕೀಯ ಉಪಕರಣ ಹಾಗು ತಜ್ಞ ವೈದ್ಯರ ನೇಮಕಾತಿ ಸಂಬಂಧಿಸಿ ಯಾವುದೇ ಹುದ್ದೆಗಳು ಮಂಜೂರಾಗಿಲ್ಲ. ಯಂತ್ರೋಪಕರಣಗಳು ಸರಬರಾಜು ಆಗಿಲ್ಲ ಎಂಬ ಉತ್ತರ ದೊರಕಿದೆ. ಈ ಪ್ರಸ್ತಾವನೆಯು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಬಳಿಯಿದ್ದು, ಯಾವ ಹಂತದಲ್ಲಿದೆ ಎಂಬ ಮಾಹಿತಿ ಇಲ್ಲದಿರುವುದಾಗಿ ಉತ್ತರ ನೀಡಿದ್ದಾರೆ. ಇದು ಹೀಗೆಯೇ ಮುಂದುವರೆದರೆ ಇದೊಂದು ದೊಡ್ಡ ಗೋಡೌನ್ ಆಗುವುದರಲ್ಲಿ ಸಂಶಯವಿಲ್ಲ. ಹಾಗಾಗಿ ವೈದ್ಯಕೀಯ ಉಪಕರಣಗಳಿಗೆ ಆದಷ್ಟು ಕೂಡಲೇ ಟೆಂಡರ್ ಕರೆಯಬೇಕು ಮತ್ತು ತಜ್ಞ ವೈದ್ಯರ ನೇಮಕಾತಿ ನಡೆಯಬೇಕು ಎಂದು ಆಗ್ರಹಿಸಿ ಬೆಳಗಾವಿಯ‌ ಸುವರ್ಣ ಸೌಧದೆದುರು ಪ್ರತಿಭಟನೆ ನಡೆಸಿ, ಸಚಿವರಿಗೆ ಮನವಿ ಸಲ್ಲಿಸಲಿದ್ದೇವೆ ಎಂದರು.

ಉಷಾ ಹೆಗಡೆ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಸಾರಿಗೆ ಇಲಾಖೆಯ ನಿವೃತ್ತ ಅಧಿಕಾರಿ ಜಿ.ಎಸ್. ಹೆಗಡೆ ಹಲಸರಿಗೆ, ಬಿಸ್ಲಕೊಪ್ಪ ಗ್ರಾಪಂ ಸದಸ್ಯ ರಾಘವೇಂದ್ರ ನಾಯ್ಕ, ಗ್ರಾಪಂ ಸದಸ್ಯ ನಾರಾಯಣ ಹೆಗಡೆ, ಅಂಕಿತ್ ಹೆಗಡೆ ಇದ್ದರು.ಆಸ್ಪತ್ರೆ ನಿರ್ಲಕ್ಷಿಸಿದರೆ ಕಾನೂನು ಹೋರಾಟ

ಜನರ ಜೀವದ ಪ್ರಶ್ನೆಯಾಗಿರುವ ಆಸ್ಪತ್ರೆ ವಿಷಯದಲ್ಲಿ ಶಾಸಕರನ್ನು ಒಳಗೊಂಡ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದರೆ, ಪ್ರತಿ ಗ್ರಾಪಂ ಮಟ್ಟದಲ್ಲಿ‌ ಜನಜಾಗೃತಿ ಮಾಡಲಾಗುವುದು. ಜೊತೆಗೆ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ದಾಖಲಿಸುವ ಮೂಲಕ ಕಾನೂನು ಹೋರಾಟಕ್ಕೆ ಮುಂದಾಗುತ್ತೇವೆ. ಎಲ್ಲ ರೀತಿಯ ಹೋರಾಟಕ್ಕೆ ನಾವೂ ಸಿದ್ಧರಿದ್ದೇವೆ ಎಂದು ಅನಂತಮೂರ್ತಿ ಹೆಗಡೆ ಎಚ್ಚರಿಕೆ ನೀಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ