ಶಾಲೆಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ । ಶೌಚಾಲಯ, ಅಗತ್ಯ ಕೊಠಡಿಗಳಿಲ್ಲ
ಶಿಕ್ಷಕರ ಕೊರತೆ ನೀಗಿಸಿ ಮೂಲಭೂತ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸೋಮವಾರ ತಾಲೂಕಿನ ಉಗಿನಕೇರಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಗೆ ಬೀಗ ಜಡಿದು ಪ್ರತಿಭಟಿಸಿದರು.
ಶಾಲೆಯಲ್ಲಿ ೨೭೦ ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ೩ ಜನ ಮಾತ್ರ ಕಾಯಂ ಶಿಕ್ಷಕರು ಹಾಗೂ ೫ ಜನ ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು, ಮಕ್ಕಳಿಗೆ ಗುಣಮಟ್ಟ ಶಿಕ್ಷಣ ಸಿಗುತ್ತಿಲ್ಲ. ಇದರ ನಡುವೆ ೧ರಿಂದ ೫ನೇ ತರಗತಿವರೆಗೆ ಆಂಗ್ಲ ಮಾಧ್ಯಮ ಕೂಡ ಪ್ರಾರಂಭಿಸಲಾಗಿದ್ದು, ಶಿಕ್ಷಕರು ಮಾತ್ರ ಇಲ್ಲ. ಕೆಲವಷ್ಟು ಪುಸ್ತಕಗಳು ಬಂದಿಲ್ಲ. ಮೂಲಭೂತ ವ್ಯವಸ್ಥೆ ಕಲ್ಪಿಸಲಾಗದಿದ್ದರೆ ಆಂಗ್ಲ ಮಾಧ್ಯಮ ಏಕೆ ಪ್ರಾರಂಭಿಸಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.ಶಾಲೆಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಮಕ್ಕಳು ಕಲುಷಿತ ನೀರು ಸೇವಿಸುವಂತಾಗಿದೆ. ಸುಸಜ್ಜಿತವಾದ ಶೌಚಾಲಯ ಮತ್ತು ಅಗತ್ಯ ಕೊಠಡಿಗಳಿಲ್ಲ. ಒಟ್ಟಾರೆ ಯಾವುದೇ ಮೂಲಭೂತ ಸೌಲಭ್ಯವಿಲ್ಲದೆ ಶಾಲೆ ಕೊಂಡವಾಡದಂತಾಗಿದೆ. ಇದೇ ಪರಿಸ್ಥಿತಿ ಮುದುವರೆದರೆ ಶಾಲೆಯನ್ನು ಮುಚ್ಚುವ ಪ್ರಸಂಗ ಬರುತ್ತದೆ. ತಕ್ಷಣ ಮೇಲಾಧಿಕಾರಿಗಳು ಸ್ಥಳಕ್ಕಾಗಮಿಸಿ ಸಮಸ್ಯೆ ಪರಿಹರಿಸಬೇಕೆಂದು ಒತ್ತಾಯಿಸಿದರು.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಸುಮಾ, ಪ್ರತಿಯೊಂದು ಸಮಸ್ಯೆಗೂ ಪರಿಹಾರವಿದೆ. ಒಳಗೆ ಹೋಗಿ ಮಾತನಾಡೋಣ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಬೇಕು ಎಂದು ಹೇಳುತ್ತಿದ್ದಂತೆ ಮತ್ತಷ್ಟು ಕೆರಳಿದ ಪಾಲಕರು, ಸಂಸ್ಕಾರ ನೀಡಲು ಶಾಲೆಯಲ್ಲಿ ಶಿಕ್ಷಕರೇ ಇಲ್ಲವಲ್ಲ. ಪ್ರಸಕ್ತ ಶೈಕ್ಷಣಿಕ ವರ್ಷ ಮುಗಿಯುತ್ತ ಬಂದಿದ್ದು, ವಾರ್ಷಿಕ ಪರೀಕ್ಷೆ ಹತ್ತಿರ ಬರುತ್ತಿವೆ. ಪಾಠಗಳು ನಡೆದಿಲ್ಲ. ಹಾಗಾದರೆ ಮಕ್ಕಳು ಪರೀಕ್ಷೆ ಹೇಗೆ ಬರೆಯಬೇಕು ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಶಿಕ್ಷಣಾಧಿಕಾರಿ ಅಗತ್ಯ ಅತಿಥಿ ಶಿಕ್ಷಕರನ್ನು ನೀಡುವುದಾಗಿ ತಿಳಿಸಿದರು. ಇದಕ್ಕೆ ಜಗ್ಗದ ಗ್ರಾಮಸ್ಥರು ಕಾಯಂ ಶಿಕ್ಷಕರನ್ನು ನೇಮಿಸುವಂತೆ ಪಟ್ಟುಹಿಡಿದರು. ಕಾಯಂ ಶಿಕ್ಷಕರನ್ನು ನೀಡುವಂತೆ ಉಪನಿರ್ದೇಶಕರಿಗೆ ಪತ್ರ ಬರೆಯಲಾಗುವುದು. ಶಿಕ್ಷಕರು ಲಭ್ಯವಾಗುವವರೆಗೆ ಹೆಚ್ಚುವರಿಯಾಗಿ ಮತ್ತೆರಡು ಅತಿಥಿ ಶಿಕ್ಷಕರನ್ನು ನೇಮಿಸುವುದಾಗಿ ಭರವಸೆ ನೀಡಿದರು. ಕೇವಲ ಹಾರಿಕೆ ಉತ್ತರ ನೀಡಿದರೆ ನಡೆಯುವುದಿಲ್ಲ. ಉಚಿತ ಊಟ ನೀಡಲಾಗುತ್ತದೆ ಎಂದು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿಲ್ಲ. ಬದಲಾಗಿ ಒಳ್ಳೆಯ ಶಿಕ್ಷಣ ಪಡೆಯಲೆಂದು ಕಳುಹಿಸಲಾಗುತ್ತದೆ. ಶಿಕ್ಷಣವೇ ಸಿಗದಿದ್ದರೆ ಮಕ್ಕಳನ್ನು ಏಕೆ ಶಾಲೆಗೆ ಕಳುಹಿಸಬೇಕು ಎಂದು ಪ್ರಶ್ನಿಸಿದ ಪ್ರತಿಭಟನಾಕಾರರು, ಕಾಯಂ ಶಿಕ್ಷಕರನ್ನು ನೇಮಿಸುವವರೆಗೆ ಯಾವುದೇ ಕಾರಣಕ್ಕೂ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಪಾಲಕರು ಎಲ್ಲ ಮಕ್ಕಳನ್ನು ಮನೆಗೆ ಕಳುಹಿಸಿದರು.ಬಳಿಕ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಶಾಲೆಯೊಳಗೆ ಕರೆದುಕೊಂಡು ಹೋಗಿ ಶೌಚಾಲಯದ ಸ್ಥಿತಿಯನ್ನು ತೋರಿಸಿದರು. ಹಾಳು ಬಿದ್ದು ಗಬ್ಬು ನಾರುತ್ತಿದ್ದ ಶೌಚಾಲಯವನ್ನು ವೀಕ್ಷಿಸಿದ ಶಿಕ್ಷಣಾಧಿಕಾರಿ, ಶಾಲಾ ನಿರ್ವಹಣಾ ಹಣವನ್ನು ಏನು ಮಾಡುತ್ತೀರಿ ಎಂದು ಶಾಲೆಯ ಮುಖ್ಯ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡರು.
ಬಳಿಕ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಸುಮಾ ಸಭೆ ನಡೆಸಿ ಶಿಕ್ಷಕರನ್ನು ನೇಮಿಸುವ ಹಾಗೂ ಅಗತ್ಯ ಮೂಲಭೂತ ಕಲ್ಪಿಸುವ ಬಗ್ಗೆ ಲಿಖಿತವಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು. ಒಟ್ಟಾರೆ ಇಡೀ ದಿನ ಪ್ರತಿಭಟನೆಯಲ್ಲಿ ಕಾಲ ಹರಣವಾಗಿದ್ದರಿಂದ ಶಾಲೆಯಲ್ಲಿ ಯಾವುದೇ ತರಗತಿ ನಡೆಯಲಿಲ್ಲ.ಈ ಸಂದರ್ಭ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಮೌಲಾಸಾಬ ನದಾಫ್, ಉಪಾಧ್ಯಕ್ಷೆ ಸಾವಿತ್ರಿ ಕರಲಕೊಪ್ಪ, ಮಾಜಿ ಅಧ್ಯಕ್ಷ ಶಿವಾನಂದ ನಡುವಿನಮನಿ,ಗುರುಬಸಯ್ಯ ಹಿರೇಮಠ, ಹನುಮಂತ ನಲಿಗೆ, ತುಕಾರಾಮ ನಲಿಗೆ, ಲಿವಿಸ್ ಸಿದ್ದಿ ಮುಂತಾದವರಿದ್ದರು.