ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯ ಕಚೇರಿ ಬಳಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಕ್ಯಾಂಡಲ್ ಮಾರ್ಚ್ ನಡೆಸಿದರು. ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಸಂಸದ ಪಿ.ಸಿ.ಮೋಹನ್, ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ, ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಲಾಯಿತು.
ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದಲ್ಲಿ ಬೆಳಗ್ಗೆ 11-12ರವರೆಗೆ ಒಂದು ತಾಸು ಸ್ವಯಂಪ್ರೇರಿತ ಬಂದ್ ಆಚರಿಸಲಾಯಿತು. ಪುತ್ತೂರಿನಲ್ಲಿ ಮಾತೃಭೂಮಿ ಸಂರಕ್ಷಣಾ ವೇದಿಕೆಯ ನೇತೃತ್ವದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ, ಬಿಜೆಪಿಯ ಸಹಯೋಗದಲ್ಲಿ ಗಾಂಧಿ ಕಟ್ಟೆಯ ಬಳಿ ಶ್ರದ್ದಾಂಜಲಿ ಹಾಗೂ ಪ್ರತಿಭಟನಾ ಸಭೆ ಆಯೋಜಿಸಲಾಗಿತ್ತು. ಧಾರವಾಡದಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಕಾರ್ಗಿಲ್ ಸ್ಥೂಪದಲ್ಲಿ ಮೌನಾಚರಣೆಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ ಎಬಿವಿಪಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.ಹುಬ್ಬಳ್ಳಿಯಲ್ಲಿ ಎಬಿವಿಪಿಯಿಂದ ಬಿವಿಬಿ ಕಾಲೇಜಿನ ಬಳಿ ಪ್ರತಿಭಟನೆ ನಡೆಸಲಾಯಿತು. ಮಾನವ ಸರಪಳಿ ನಿರ್ಮಿಸಿ ಭಯೋತ್ಪಾದಕರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ಹಾವೇರಿ, ಹುಬ್ಬಳ್ಳಿಯಲ್ಲಿ ಬಿಜೆಪಿಯಿಂದ ಹಾಗೂ ಕಾಂಗ್ರೆಸ್‌ನಿಂದ ಕೃತ್ಯ ಖಂಡಿಸಿ ಪ್ರತ್ಯೇಕವಾಗಿ ಮೇಣದ ಬತ್ತಿ ಪ್ರತಿಭಟನೆ ನಡೆಯಿತು. ಕೊಪ್ಪಳದಲ್ಲಿ ಬಸವೇಶ್ವರ ದೇವಸ್ಥಾನದಿಂದ ಅಶೋಕ ವೃತ್ತದವರೆಗೆ ಮೇಣದ ಬತ್ತಿ ಮೆರವಣಿಗೆ ನಡೆಸಲಾಯಿತು. ಗಂಗಾವತಿಯಲ್ಲಿ ಕರವೇ ವತಿಯಿಂದ ಪ್ರತಿಭಟನೆ ನಡೆಸಿ, ಕೃತ್ಯವನ್ನು ಖಂಡಿಸಲಾಯಿತು.