ಬಳ್ಳಾರಿ: ಕೇಂದ್ರ ಸರ್ಕಾರದಿಂದ ಮನರೇಗಾ ಹೆಸರನ್ನು ವಿಕಸಿತ ಭಾರತ ರಾಮ್ ಜಿ ಎಂದು ಬದಲಾವಣೆ ಮಾಡಲು ಹೊರಟಿರುವುದು ಅತ್ಯಂತ ಖಂಡನೀಯ. ಕೇಂದ್ರದ ಧೋರಣೆ ಖಂಡಿಸಿ ರಾಜ್ಯಾದ್ಯಂತ ಪ್ರತಿ ಜಿಲ್ಲೆ, ತಾಲೂಕು, ಗ್ರಾಮ ಮಟ್ಟದಲ್ಲೂ ಕಾಂಗ್ರೆಸ್‌ನಿಂದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.
ವಾಲ್ಮೀಕಿ ಪುತ್ಥಳಿ ಅನಾವರಣ ವಿಚಾರಕ್ಕೆ ಸಂಬಂಧಿಸಿದಂತೆ ಕ್ಯಾಬಿನೆಟ್ ನಲ್ಲಿ ಈ ಬಗ್ಗೆ ಚರ್ಚಿಸಿ ಪುತ್ಥಳಿ ಅನಾವರಣ ಕಾರ್ಯಕ್ರಮ ಅದ್ಧೂರಿಯಾಗಿ ಮಾಡುತ್ತೇವೆ. ಬಳ್ಳಾರಿ ಗಲಭೆ ಖಂಡಿಸಿ ಬಿಜೆಪಿ ಪಾದಯಾತ್ರೆ ಮಾಡಲಿ. ಅದಕ್ಕೆ ಅನುಮತಿ ಕೊಡುವುದು ಪೊಲೀಸರು. ಆ ಘಟನೆ ಯಾಕಾಯ್ತು, ಹೇಗಾಯ್ತು ಎಲ್ಲರಿಗೂ ಗೊತ್ತಿದೆ? ಬಿಜೆಪಿಯವರು ಏನಂತ ಪಾದಯಾತ್ರೆ ಮಾಡುತ್ತಾರೆ? ಇದು ಪಾದಯಾತ್ರೆ ಮಾಡುವ ವಿಷಯ ಅಲ್ಲ. ಸದ್ಯ ಪ್ರಕರಣದ ಬಗ್ಗೆ ಸಿಐಡಿ ತನಿಖೆ ನಡೆಯುತ್ತಿದ್ದು, ಆ ತನಿಖೆ ವರದಿ ಬಂದಮೇಲೆ ಪ್ರತಿಕ್ರಿಯಿಸುತ್ತೇನೆ ಎಂದರು.
ಸಿಎಂ ಬದಲಾವಣೆ ವಿಚಾರ, ಸಿಎಂ ಬದಲಾವಣೆ ಮಾಡುವುದು ಹೈಕಮಾಂಡ್. ನಮ್ಮ ಕೈಯಲ್ಲಿಲ್ಲ. ಸದ್ಯಕ್ಕೆ ಸಿಎಂ ಸ್ಥಾನ ಖಾಲಿಯಿಲ್ಲ. ಐದು ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ. ಬಿಜೆಪಿಯವರು ನವಂಬರ್ ಕಾಂತ್ರಿ ಅಂದರು. ಬಳಿಕ ಡಿಸೆಂಬರ್ ಕ್ರಾಂತಿ ಆಯ್ತು. ಈಗ ಸಂಕ್ರಾಂತಿ ಅಂತಿದ್ದಾರೆ. ಸಿಎಂ ಖುರ್ಚಿ ವಿಚಾರವಾಗಿ ಏನೂ ಚರ್ಚೆಯಿಲ್ಲ ಎಂದರು.ಕಾಂಗ್ರೆಸ್ ಬಡವರ ಬಗ್ಗೆ ಕಾಳಜಿ ಹೊಂದಿದೆ. ವಸತಿ ಇಲಾಖೆಯಿಂದ ಹುಬ್ಬಳ್ಳಿಯಲ್ಲಿ ಜ.24ಕ್ಕೆ ರಾಜ್ಯದಲ್ಲಿನ 42345 ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿ ಅವರಿಗೂ ಆಹ್ವಾನ ಕೊಡುತ್ತೇವೆ. ಬಿಜೆಪಿಯವರ ಅವಧಿಯಲ್ಲಿ ಒಂದು ಮನೆಯನ್ನೂ ಕೊಟ್ಟಿಲ್ಲ. ಒಂದು ಮನೆ ಕೊಟ್ಟಿದ್ದು ಸಾಬೀತು ಪಡಿಸಿದಲ್ಲಿ ನಾನು ರಾಜೀನಾಮೆ ಕೊಡುತ್ತೇನೆಂದು ಹೇಳಿದ್ದೆ. ಆದರೆ, ಬಿಜೆಪಿಯವರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ. ಹೀಗಾಗಿ ಅವರ ಅವಧಿಯಲ್ಲಿ ಒಂದೂ ಮನೆ ಕಟ್ಟಿಕೊಡಲು ಸಾಧ್ಯ ಆಗಿಲ್ಲ. ಬಿಜೆಪಿಯವರದ್ದು ಹಿಂದೂ-ಮುಸ್ಲಿಂ ಅಜೆಂಡಾದೊಂದಿಗೆ ಗಲಾಟೆ ಸೃಷ್ಟಿಸುವುದೇ ಬಿಜೆಪಿಯ ಸಾಧನೆ ಎಂದು ಹರಿಹಾಯ್ದರು.
ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ಸಂಸದ ಈ.ತುಕಾರಾಂ ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರ ರಾಮನ ಹೆಸರಿನಲ್ಲಿ ವಿಷ ಬೀಜ ಬಿತ್ತುವ ಕಾರ್ಯ ಮಾಡುತ್ತಿದೆ. ಈ ಹಿಂದೆ ಇದ್ದ ಬ್ರಿಟಿಷ್ ಅವಧಿಯಲ್ಲಿನ ಗುಲಾಮಗಿರಿ ಆಡಳಿತವನ್ನು ಮರು ಸ್ಥಾಪಿಸಲು ಮುಂದಾಗುತ್ತಿದೆ. ಕಾಂಗ್ರೆಸ್ ಜೀವಂತವಿರುವವರೆಗೆ ಬಿಜೆಪಿ ಆಟ ನಡೆಯಲು ಬಿಡುವುದಿಲ್ಲ. ಬಳ್ಳಾರಿಯಲ್ಲಿ ಜೀನ್ಸ್ ಅಪೆರಲ್ ಪಾರ್ಕ್ ಸ್ಥಾಪನೆಗೆ ಈಗಾಗಲೇ ಭೂಮಿ ಸಿದ್ಧತೆ ನಡೆಸಲಾಗುತ್ತಿದ್ದು, ಫೆಬ್ರವರಿಯಲ್ಲಿ ರಾಹುಲ್ ಗಾಂಧಿ ಅವರು ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಮಾಜಿ ಸಚಿವ ಜನಾರ್ದನ ರೆಡ್ಡಿ ವಿರುದ್ಧ ಅಕ್ರಮ ಗಣಿಗಾರಿಕೆ ಆರೋಪದ ವರದಿ ಕುರಿತು ಪ್ರತಿಕ್ರಿಯಿಸಿ, ಅಂತರ್ ರಾಜ್ಯ ಗಡಿ ನಾಶಕ್ಕೆ ಸಂಬಂಧಿಸಿದ ಪ್ರಕರಣ ಸದ್ಯ ಸುಪ್ರೀಂ ಕೋರ್ಟ್‌ನಲ್ಲಿದ್ದು, ಈ ಬಗ್ಗೆ ಅನೇಕ ಬಾರಿ ನಾನು ಸಹ ಪತ್ರ ಬರೆದಿದ್ದೆ. ಜಿಲ್ಲೆಯ ಶಾಸಕರು ಸಹ ಅಧಿವೇಶನ ವೇಳೆ ಧ್ವನಿ ಎತ್ತಿದ್ದರು ಎಂದು ತಿಳಿಸಿದರು.ಶಾಸಕರಾದ ನಾರಾ ಭರತ್ ರೆಡ್ಡಿ, ಜೆ.ಎನ್.ಗಣೇಶ್, ಪಾಲಿಕೆ ಮೇಯರ್ ಗಾದೆಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್, ಎ.ಮಾನಯ್ಯ, ಕೆ.ಎಸ್.ಎಲ್.ಸ್ವಾಮಿ ಸೇರಿದಂತೆ ಪಕ್ಷದ ಜಿಲ್ಲಾ ಪ್ರಮುಖರು ಸುದ್ದಿಗೋಷ್ಠಿಯಲ್ಲಿದ್ದರು.