ನಾರಾಯಣ ಹೆಗಡೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾವೇರಿಯಲ್ಲಿ ಸಮಾವೇಶ ನಡೆಸುವ ಬಗ್ಗೆ ಹೇಳಿಕೆ ನೀಡಿರುವ ಬೆನ್ನಲ್ಲೇ ಹಾವೇರಿಯಲ್ಲಿ ಅಗತ್ಯ ಸಿದ್ಧತೆ ನಡೆಸಲಾಗಿದೆ. ಹೊಸಪೇಟೆಯಲ್ಲಿ ಕಳೆದ ವರ್ಷ ಮೇ 13ರಂದು ಸರ್ಕಾರದ ಎರಡು ವರ್ಷದ ಸಾಧನಾ ಸಮಾವೇಶ ನಡೆದಿತ್ತು. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಫೆ. 13ಕ್ಕೆ 1000 ಸಾವಿರ ದಿನವನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಮತ್ತೊಂದು ಬೃಹತ್ ಸಮಾವೇಶ ನಡೆಸಲು ತೀರ್ಮಾನಿಸಿದೆ. ಜಿಲ್ಲೆ ಹಾಗೂ ರಾಜ್ಯದ ಎಲ್ಲ ಜಿಲ್ಲೆಗಳಿಂದ ಸೇರಿ ಒಂದು ಲಕ್ಷಕ್ಕೂ ಅಧಿಕ ಜನರು ಪಾಲ್ಗೊಳ್ಳಲಿದ್ದು, ಈ ನಿಟ್ಟಿನಲ್ಲಿ ಅಗತ್ಯ ಸಿದ್ಧತೆಗೆ ಜಿಲ್ಲೆಯ ಶಾಸಕರು ಹಾಗೂ ಅಧಿಕಾರಿಗಳು ಮುಂದಾಗಿದ್ದಾರೆ.
ಹಾವೇರಿಯಲ್ಲೇ ಏಕೆ?: ಭೌಗೋಳಿಕವಾಗಿ ರಾಜ್ಯದ ಮಧ್ಯ ಭಾಗದಲ್ಲಿರುವ ಹಾವೇರಿ ಉತ್ತಮ ಸಾರಿಗೆ ಸಂಪರ್ಕ ಹೊಂದಿದೆ. ಇದರಿಂದ ರಾಜ್ಯದ ಎಲ್ಲ ಭಾಗಗಳಿಂದ ಸಮಾವೇಶಕ್ಕೆ ಬರುವವರಿಗೆ ಅನುಕೂಲವಾಗಲಿದೆ. ಅಲ್ಲದೇ ಜಿಲ್ಲೆಯಲ್ಲಿ 300ಕ್ಕೂ ಹೆಚ್ಚು ತಾಂಡಾ, ಹಟ್ಟಿ, ಹಾಡಿಗಳನ್ನು ಕಂದಾಯ ಉಪಗ್ರಾಮಗಳನ್ನಾಗಿ ಘೋಷಣೆ ಮಾಡಲಾಗಿದ್ದು, 25 ಸಾವಿರಕ್ಕೂ ಹೆಚ್ಚು ಫಲಾನುಭವಿಗಳು ಜಿಲ್ಲೆಯಲ್ಲೇ ಇರುವುದರಿಂದ ಸಮಾವೇಶದಲ್ಲಿ ಹಕ್ಕುಪತ್ರ ವಿತರಿಸಲು ಅನುಕೂಲವಾಗಲಿದೆ. ಜತೆಗೆ, ಕಾಂಗ್ರೆಸ್ ಸರ್ಕಾರಕ್ಕೆ ಹಾವೇರಿ ಜಿಲ್ಲೆ ಹೆಚ್ಚಿನ ರಾಜಕೀಯ ಶಕ್ತಿ ಕೂಡ ನೀಡಿದೆ. ಜಿಲ್ಲೆಯ ಎಲ್ಲ 6 ವಿಧಾನಸಭಾ ಕ್ಷೇತ್ರಗಳಲ್ಲಿ ಕೈ ಶಾಸಕರಿದ್ದಾರೆ. ಮುಂಬರುವ ನಗರ, ಗ್ರಾಮೀಣ ಸ್ಥಳೀಯ ಸಂಸ್ಥೆ ಚುನಾವಣೆಗೂ ಸಮಾವೇಶದಿಂದ ನೆರವಾಗುವ ನಿರೀಕ್ಷೆ ಹೊಂದಲಾಗಿದೆ.ಸಮಾವೇಶಕ್ಕಾಗಿ ಸ್ಥಳ ಹುಡುಕಾಟ: ಸರ್ಕಾರದ ಸಾಧನಾ ಸಮಾವೇಶಕ್ಕೆ ರಾಜ್ಯದ ನಾನಾ ಮೂಲೆಗಳಿಂದ ಲಕ್ಷಾಂತರ ಜನರು ಪಾಲ್ಗೊಳ್ಳುವುದರಿಂದ ಎಲ್ಲ ರೀತಿಯಲ್ಲಿ ಅನುಕೂಲಕರವಾಗಿರುವ ಸ್ಥಳಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ. ಜಿಲ್ಲಾ ಕ್ರೀಡಾಂಗಣ, ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆದ ಜಾಗ ಅಥವಾ ಹಾನಗಲ್ಲ ರಸ್ತೆಯ ಬೈಪಾಸ್ ಪಕ್ಕದ ಹೊಲ ಈ ಮೂರರಲ್ಲಿ ಒಂದು ಕಡೆ ಸಮಾವೇಶ ನಡೆಸುವ ಬಗ್ಗೆ ಪಕ್ಷದ ಸ್ಥಳೀಯ ನಾಯಕರು ಗುರುತು ಮಾಡಿಕೊಂಡಿದ್ದಾರೆ. ಸಮಾವೇಶದ ಜಾಗ, ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸಲು ಕಂದಾಯ ಸಚಿವ ಕೃಷ್ಣ ಬೈರೇಗೌಡ ಒಂದೆರಡು ದಿನಗಳಲ್ಲೇ ಜಿಲ್ಲೆಗೆ ಆಗಮಿಸುವ ಸಾಧ್ಯತೆಯಿದೆ.
ಕ್ರಾಂತಿಕಾರಕ ಹೆಜ್ಜೆ: ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳ ಜತೆಗೆ ಭೂ ಗ್ಯಾರಂಟಿ ಕೂಡ ಈಗ ಸೇರ್ಪಡೆಯಾಗಿದೆ. ಹಲವಾರು ವರ್ಷಗಳಿಂದ ಸರ್ಕಾರಿ ಜಾಗದಲ್ಲಿ, ತಾಂಡಾ, ಹಟ್ಟಿ, ಹಾಡಿಗಳಲ್ಲಿ ವಾಸವಿದ್ದ ಬಡವರಿಗೆ ಭೂಮಿ, ನಿವೇಶನದ ಭೂಮಾಲೀಕತ್ವ ನೀಡುವುದು ಸರ್ಕಾರದ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕಂದಾಯ ಉಪಗ್ರಾಮಗಳನ್ನಾಗಿ ಘೋಷಿಸಲಾಗಿದ್ದು, ಸರ್ಕಾರದಿಂದ ಫಲಾನುಭವಿಗಳಿಗೆ ನೋಂದಣಿ ಕರಾರುಪತ್ರ, ಹಕ್ಕುಪತ್ರ, ಇ-ಸ್ವತ್ತು ನೀಡಲಾಗುತ್ತದೆ. ರಾಜ್ಯದ ಇತರ ಜಿಲ್ಲೆಗಳ ಫಲಾನುಭವಿಗಳಿಗೂ ಇದೇ ದಾಖಲೆ ನೀಡಲು ಸರ್ಕಾರ ಯೋಜಿಸಿದೆ. ಇದರಿಂದ ತಾಂಡಾ, ಹಟ್ಟಿ, ಹಾಡಿ, ಕ್ಯಾಂಪ್, ಕಾಲನಿ, ಮಜಿರೆಗಳ ನಿವಾಸಿಗಳು ಮನೆ ಮಾಲೀಕರಾಗಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಿಂದ ಇದೊಂದು ಕ್ರಾಂತಿಕಾರಕ ಹೆಜ್ಜೆಯಾಗಿದೆ ಎಂದು ವಿಧಾನಸಭೆ ಉಪಾಧ್ಯಕ್ಷ, ಹಾವೇರಿ ಶಾಸಕರೂ ಆಗಿರುವ ರುದ್ರಪ್ಪ ಲಮಾಣಿ ತಿಳಿಸಿದರು.ಸಿದ್ಧತೆ ಆರಂಭ: ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಫೆ.13ಕ್ಕೆ ಒಂದು ಸಾವಿರ ದಿನ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಹಾವೇರಿಯಲ್ಲಿ ಬೃಹತ್ ಸಮಾವೇಶ ನಡೆಸಲು ಮುಖ್ಯಮಂತ್ರಿಗಳು ಸೇರಿದಂತೆ ರಾಜ್ಯದ ನಾಯಕರು ನಿರ್ಧರಿಸಿದ್ದಾರೆ. ಸಮಾವೇಶಕ್ಕೆ ಸಿದ್ಧತೆಗಳನ್ನು ಈಗಿನಿಂದಲೇ ಆರಂಭಿಸಲಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕರಾದ ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ ಹಾಗೂ ಸಚಿವರು, ಪಕ್ಷದ ಶಾಸಕರು ಸಮಾವೇಶದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ಹೇಳಿದರು.