ಕನ್ನಡಪ್ರಭ ವಾರ್ತೆ ಮಂಡ್ಯ
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ 2.50 ಕೋಟಿ ರು. ಹಣದ ಲೆಕ್ಕ ಕೊಡದೇ, ಜಿಲ್ಲೆ ಜನತೆಯ ಕ್ಷಮೆ ಕೇಳದ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ಸ್ಮರಣ ಸಂಚಿಕೆ ಬಿಡುಗಡೆಗೆ ಜಿಲ್ಲೆಗೆ ಆಗಮಿಸಿದರೆ ಪ್ರತಿಭಟನೆ ಮಾಡಲಾಗುವುದು ಎಂದು ಕರ್ನಾಟಕ ಸಂಘದ ಅಧ್ಯಕ್ಷ ಡಾ.ಜಯಪ್ರಕಾಶ್ ಗೌಡ ಎಚ್ಚರಿಕೆ ನೀಡಿದರು.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಆಗಸ್ಟ್ 24 ರಂದು ಹಮ್ಮಿಕೊಂಡಿರುವ ಬೆಲ್ಲದಾರತಿ ಸ್ಮರಣ ಸಂಚಿಕೆ ಬಿಡುಗಡೆಗೆ ಜಿಲ್ಲಾಡಳಿತ ಮಹೇಶ್ ಜೋಶಿಗೆ ಆಹ್ವಾನ ನೀಡಿರುವುದು ತಿಳಿದು ಬಂದಿದೆ. ಅವರು ಜಿಲ್ಲೆಗೆ ಆಗಮಿಸಿದರೆ ಪ್ರತಿಭಟಿಸಲಾಗುವುದು ಎಂದರು.
ಸಮ್ಮೇಳನದ ವೇಳೆ ಮಹೇಶ್ ಜೋಶಿ ಜಿಲ್ಲೆಯ ಜನತೆ ಹಾಗೂ ಹಿರಿಯ ಸಾಹಿತಿಗಳು ಮತ್ತು ಸಮ್ಮೇಳನದ ಸಂಘಟಕರಿಗೆ ಅವಮಾನ ಮಾಡಿದ್ದಾರೆ. ಸಮ್ಮೇಳನದ ವೇಳೆ ಕನ್ನಡ ಸಾಹಿತ್ಯ ಪರಿಷತ್ ಗೆ ನೀಡಿದ 2.50 ಕೋಟಿ ರು. ಹಣದ ಲೆಕ್ಕ 6 ತಿಂಗಳಲ್ಲಿ ನೀಡುವುದಾಗಿ ಹೇಳಿ, 8 ತಿಂಗಳು ಕಳೆದರೂ ಲೆಕ್ಕ ಕೊಡದಕ್ಕೆ ಕಾರಣ ಏನು ಎಂದು ಪ್ರಶ್ನಿಸಿದರು.ಜಿಲ್ಲೆಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆದು 8 ತಿಂಗಳುಗಳು ಕಳೆದರೂ ಜನತೆಗೆ ಕೃತಜ್ಞತೆ ಸಲ್ಲಿಸದ ರಾಜ್ಯಾಧ್ಯಕ್ಷನ ವಿರುದ್ಧ ಜಿಲ್ಲೆಯ ಹಿರಿಯ ಸಾಹಿತಿಗಳು, ಸಂಘಟಕರು ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ 100ಕ್ಕೂ ಹೆಚ್ಚು ಮಂದಿಗೆ ಪರಿಷತ್ ಸದಸ್ಯತ್ವ ರದ್ದು ಪಡಿಸುವ ಹಾಗೂ ಮಾನನಷ್ಟ ಮೊಕದ್ದಮೆ ಹೂಡುವ ಕೃತ್ಯವೆಸಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಂಡ್ಯ ಜಿಲ್ಲೆಗೆ ಆಗಮಿಸದಿರಲು ಜೀವ ಬೆದರಿಕೆ ಇದೆ ಎಂದು ಉಸ್ತುವಾರಿ ಸಚಿವರ ಮೂಲಕ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಪೊಲೀಸರು ನಮ್ಮೆಲ್ಲರ ತನಿಖೆ ನಡೆಸಿ ದೂರು ವಿಲೇವಾರಿ ಮಾಡಲಾಗಿದೆ ಎಂದು ಹಿಂಬರಹ ನೀಡಿದ್ದಾರೆ ಎಂದು ಹೇಳಿದರು.ಮಹೇಶ್ ಜೋಶಿ ವಿರುದ್ಧ ಹಿರಿಯ ಸಾಹಿತಿಗಳು, ಸಂಘಟಕರು, ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದ್ದಾರೆ. ಈ ಹಿನ್ನೆಲೆ ಸರ್ಕಾರ ಜೋಶಿಗೆ ನೀಡಿದ್ದ ಸಚಿವ ಸ್ಥಾನಮಾನ ಹಿಂಪಡೆದಿದೆ. ಬೈಲ ತಿದ್ದುಪಡಿ ರದ್ದುಗೊಳಿಸಿದೆ. ರಾಜ್ಯದ ಗಡಿಯಲ್ಲಿ ಮಾಡಲು ಉದ್ದೇಶಿಸಿದ ಸರ್ವ ಸದಸ್ಯರ ಸಭೆಯನ್ನು ಮೂರು ಬಾರಿ ರದ್ದು ಮಾಡಿದೆ ಎಂದರು.
ಆರ್ಥಿಕ ಅಶಿಸ್ತು, ಅವ್ಯವಹಾರದ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ತನಿಖಾ ತಂಡ ರಚಿಸಿ ತನಿಖೆಗೆ ಆದೇಶಿಸಿದೆ. ತನಿಖೆ ಆದೇಶ ಪ್ರಶ್ನಿಸಿ ಜೋಶಿ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ತಿರಸ್ಕೃರಿಸಿದೆ. ಜೋಶಿ ಧೋರಣೆ ಖಂಡಿಸಿ ಇಬ್ಬರು ಗೌರವ ಕಾರ್ಯದರ್ಶಿಗಳು ರಾಜೀನಾಮೆ ನೀಡಿದ್ದಾರೆ ಎಂದು ತಿಳಿಸಿದರು.ಜಿಲ್ಲೆಯಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಪಡೆದ 2.50 ಕೋಟಿ ರು.ಗಳ ಲೆಕ್ಕ ಕೊಡದ ಮಹೇಶ್ ಜೋಶಿ, ಮುಂದಿನ ಸಮ್ಮೇಳನಕ್ಕೆ 40 ಕೋಟಿ ರು. ಅನುದಾನ ಬಿಡುಗಡೆಗೆ ಬೇಡಿಕೆ ಇಟ್ಟಿದ್ದು, ಜಿಲ್ಲೆಯಲ್ಲಿ ನಡೆಯುವ ಸಾರ್ವಜನಿಕ ಸಮಾರಂಭದಲ್ಲಿ ಅವರು ಭಾಗವಹಿಸುವುದು ಅಗೌರವ ಎಂದು ಪರಿಗಣಿಸಿ ಪ್ರತಿಭಟನೆ ಮಾಡಲಾಗುತ್ತಿದೆ ಎಂದು ಹೇಳಿದರು.
ಸುದ್ಧಿಗೋಷ್ಠಿಯಲ್ಲಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ವಿ.ಧರಣೇಂದ್ರಯ್ಯ, ಡಿ.ಪಿ.ಸ್ವಾಮಿ, ತಾಲೂಕು ಮಾಜಿ ಉಪಾಧ್ಯಕ್ಷ ಎಸ್.ಮಂಜು, ಜಿಲ್ಲಾ ಯುವ ಪರಿಷತ್ ಅಧ್ಯಕ್ಷ ಕಾರಸವಾಡಿ ಮಹದೇವು ಇದ್ದರು.