ಕನ್ನಡಪ್ರಭ ವಾರ್ತೆ ಬೇಲೂರು
ಕರ್ನಾಟಕ ರಕ್ಷಣಾ ವೇದಿಕೆ ಒಂದು ಜಾತಿ, ಪಕ್ಷಕ್ಕೆ ಸೀಮಿತವಾಗಿರದೆ ಕರ್ನಾಟಕದ ನಾಡು, ನುಡಿ, ಜಲದ ಬಗ್ಗೆ ನಿರಂತರ ಹೋರಾಟ ನಡೆಸುತ್ತಿರುವ ಸಂಘಟನೆಯಾಗಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಸಿ.ಡಿ. ಮನು ಕುಮಾರ್ ತಿಳಿಸಿದರು.ಪಟ್ಟಣದ ಆರ್ ವಿ ಕಲ್ಯಾಣ ಮಂಟಪದಲ್ಲಿ ಕರವೇ ತಾಲೂಕು ಘಟಕದ ವತಿಯಿಂದ ಏರ್ಪಡಿಸಲಾಗಿದ್ದ ನೂತನ ಪದಾಧಿಕಾರಿಗಳ ಸಭೆ ಮತ್ತು ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕರವೇ ಸಂಘಟನೆ ಒಂದು ವಿರೋಧ ಪಕ್ಷದ ರೀತಿಯಲ್ಲಿ ನಿತ್ಯ ನೊಂದವರ ಮತ್ತು ಶೋಷಿತರ ಪರವಾಗಿ ಕೆಲಸ ನಿರ್ವಹಿಸುತ್ತಿದೆ. ರಾಜ್ಯದ ಗಡಿಭಾಗಗಳಲ್ಲಿ ಮತ್ತು ಕನ್ನಡಿಗರ ಪರ ಧ್ವನಿಯಾಗಿ ನಿಲ್ಲುವುದು ಹಾಗೂ ನಾಡಿನಾದ್ಯಂತ ನಾಡು, ನುಡಿ, ಜಲ, ಸಂಸ್ಕೃತಿ, ಭಾಷೆಗೆ ಧಕ್ಕೆಯಾದ ಸಂದರ್ಭ ದಿಟ್ಟ ಧ್ವನಿ ಎತ್ತುವ ಮೂಲಕ ಭ್ರಷ್ಟರಿಗೆ ಮತ್ತು ಅನ್ಯ ಭಾಷಿಕರಿಗೆ ಸಿಂಹ ಸ್ವಪ್ನವಾಗಿ ರಾಜ್ಯಾದ್ಯಂತ ಬೆಳೆದು ನಿಂತಿದೆ ಎಂದರು. ಕರವೇ ತಾಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, 27 ವರ್ಷಗಳಿಂದ ಕರವೇ ಸಂಘಟನೆ ನಿಂತ ನೀರಾಗದೆ ಹರಿಯುವ ನೀರಾಗಿ ನಾರಾಯಣಗೌಡರ ಸಾರಥ್ಯದಲ್ಲಿ ರಾಜ್ಯದ 224 ಕ್ಷೇತ್ರದಲ್ಲಿ ಬೃಹತ್ ಮಟ್ಟದ ಸಂಘಟನೆಯಾಗಿ ಬೆಳೆದು ನಿಂತಿದೆ. ಅದರಂತೆ ಹಾಸನ ಜಿಲ್ಲೆಯಲ್ಲೂ 7 ತಾಲೂಕುಗಳಲ್ಲಿ ನಮ್ಮ ಸಂಘಟನೆ ಗಟ್ಟಿಯಾಗಿ ನಿಂತಿದೆ. ನಮ್ಮ ತಾಲೂಕಿನಲ್ಲಿ ಆಡಳಿತ ವ್ಯವಸ್ಥೆ ಹದಗೆಟ್ಟಿದ್ದು ಇದಕ್ಕೆ ಶಾಸಕರ ವೈಫಲ್ಯವೇ ಕಾರಣ ತಾಲೂಕು ಕಚೇರಿಗಳಲ್ಲಿ ರೈತರು ಅಲೆದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಶಾಸಕರು ಮೌನ ವಹಿಸಿದ್ದಾರೆ ಎಂದು ಕಿಡಿಕಾರಿದರು. ಜಿಲ್ಲೆಯಲ್ಲಿ ಹೊಯ್ಸಳ ಮಹೋತ್ಸವ ನಡೆಯದಿರಲು ನಮ್ಮ ಜಿಲ್ಲೆಯ 7 ಶಾಸಕರ ನಿರ್ಲಕ್ಷ್ಯವೇ ಕಾರಣವಾಗಿದೆ. ಆದರೆ ನಮ್ಮ ಸಂಘಟನೆ ಕೈಕಟ್ಟಿ ಕೂರುವುದಿಲ್ಲ. ವಿರೋಧ ಪಕ್ಷದ ರೀತಿಯಲ್ಲಿ ನಮ್ಮ ಸಂಘಟನೆ ಕೆಲಸ ಮಾಡುತ್ತಿದೆ. ಜಿಲ್ಲೆಯಲ್ಲಿ ಹೊಯ್ಸಳ ಮಹೋತ್ಸವ ಹಾಗೂ ಹಲ್ಮಿಡಿ ಉತ್ಸವ ನಡೆಸದಿದ್ದರೆ ನಮ್ಮ ಸಂಘಟನೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಿದೆ ಎಂದರು. ಕರವೇ ತಾಲೂಕು ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಮಾತನಾಡಿದರು.ಇದೇ ಸಂದರ್ಭ ನೂರಾರು ಕಾರ್ಯಕರ್ತರು ಸಂಘಟನೆಯ ತತ್ವ ಸಿದ್ಧಾಂತಗಳನ್ನು ಒಪ್ಪಿ ಕರವೇ ಸೇರ್ಪಡೆಗೊಂಡರು. ಕಾರ್ಯಕ್ರಮದಲ್ಲಿ ಕರವೇ ಜಿಲ್ಲಾ ಘಟಕದ ಉಪಾಧ್ಯಕ್ಷ ಸೀತಾರಾಮ್, ಜಿಲ್ಲಾ ಘಟಕದ ಸಂಘಟನಾ ಕಾರ್ಯದರ್ಶಿ ಹಾಲ್ಸಿನ್, ಅರಕಲಗೂಡು ಶ್ರೀನಿವಾಸ್, ಯುವ ಘಟಕದ ಅಧ್ಯಕ್ಷ ಮೋಹನ್ ಕುಮಾರ್, ಗೌರವಾಧ್ಯಕ್ಷ ಕೋಗಿಲೆಮನೆ ಕುಮಾರ್, ಮಾಳೆಗೆರೆ ತಾರಾನಾಥ್, ಉಪಾಧ್ಯಕ್ಷ ಚಂದ್ರು, ನಗರಾಧ್ಯಕ್ಷ ಪ್ರಸನ್ನ, ಆನಂದ್ ಸೇರಿದಂತೆ ಇತರರು ಹಾಜರಿದ್ದರು.