ಕನ್ನಡಪ್ರಭ ವಾರ್ತೆ ಸಿರಿಗೆರೆ
ರೈತ ಸಂಘ ಹಾಗೂ ಗಣಿಬಾಧಿತ ಪರಿಸರ ಮತ್ತು ಜನ ಬದುಕಿನ ಪುನಶ್ಚೇತನ ಹೋರಾಟ ಸಮಿತಿ ಜಂಟಿಯಾಗಿ ನಡೆಸುತ್ತಿರುವ ಧರಣಿ ಭಾನುವಾರ ೪ನೇ ದಿನಕ್ಕೆ ಕಾಲಿಟ್ಟಿದೆ. ಧರಣಿ ತೀವ್ರ ಸ್ವರೂಪಕ್ಕೆ ತಿರುಗಿದ್ದರೂ ಜಿಲ್ಲಾಡಳಿತ ಇತ್ತ ಕಡೆಗೆ ಯಾವುದೇ ಭರವಸೆ ನೀಡದೇ ಇರುವುದರಿಂದ ಧರಣಿ ನಿರತರು ಆಕ್ರೋಶಗೊಂಡಿದ್ದಾರೆ.
ಪ್ರತಿಭಟನಕಾರರ ಮನವಿಗೆ ಸ್ಪಂದಿಸದೇ ಇದ್ದುದರಿಂದ ಶನಿವಾರ ರಾತ್ರಿ ಭೀಮಸಮುದ್ರ ಪ್ರವೇಶಿಸುವ ಅದಿರು ಲಾರಿಗಳನ್ನು ರೈತ ಸಂಘದ ಕಾರ್ಯಕರ್ತರು ತಡೆದು ನಿಲ್ಲಿಸಿದ್ದರು. ರಾತ್ರೋರಾತ್ರಿ ೧೬ ಜನರನ್ನು ಕರೆದುಕೊಂಡು ಹೋಗಿದ್ದ ಪೊಲೀಸರು ರಾತ್ರಿ ೧ ಗಂಟೆಯ ನಂತರ ಬಿಡುಗಡೆಗೊಳಿಸಿದ್ದರು. ಇದು ರೈತರ ಸಿಟ್ಟನ್ನು ಮತ್ತಷ್ಟು ಜಟಿಲಗೊಳಿಸಿದೆ.ಭೀಮಸಮುದ್ರ, ಮೇಗಳಹಳ್ಳಿ, ಬೊಮ್ಮೇನಹಳ್ಳಿ, ಕಡ್ಲೇಗುದ್ದು, ವಡ್ಡರಪಾಳ್ಯ, ಬೊಮ್ಮೇನಹಳ್ಳಿ, ಹಿರೇಗುಂಟನೂರು, ಹಳಿಯೂರು, ಮಾನಂಗಿ, ಸಿದ್ದಾಪುರ ಭಾಗದಲ್ಲಿ ಸಂಚರಿಸುವ ಲಾರಿಗಳಿಂದ ಬರುವ ಧೂಳಿನಿಂದ ಸುತ್ತಲ ಹಳ್ಳಿಗರ ಬದುಕು ವಿನಾಶದ ಕಡೆಗೆ ಸಾಗಿದೆ. ಬೆಳೆಗಳ ಮೇಲೆ ಅದಿರಿನ ಧೂಳು ಕುಳಿತು ಬೆಳೆಗಳಿಗೆ ತೀರ್ವ ಹಾನಿ ಉಂಟಾಗುತ್ತಿದೆ. ಗಾಳಿ, ಕುಡಿಯುವ ನೀರು ಕಲುಷಿತಗೊಂಡಿದೆ. ರಸ್ತೆಗಳಲ್ಲಿ ಸಾಮಾನ್ಯ ಜನರು ಓಡಾಡದ ರೀತಿ ಹಾಳಾಗಿದೆ. ಶಾಲಾ ಮಕ್ಕಳು ರಸ್ತೆಗಳಲ್ಲಿ ಓಡಾಡಲು ಸಾಧ್ಯವೇ ಇಲ್ಲ. ಮೈನಿಂಗ್ ಧೂಳು ಹಾಗೂ ಮಳೆ ಬಂದರೆ ಕೆಂಪು ಬಣ್ಣಕ್ಕೆ ತಿರುಗುವ ಕೆಸರಿನಿಂದ ಬದುಕು ಹೈರಾಣಾಗಿದೆ.
ಸುತ್ತಲ ಗ್ರಾಮಗಳ ರಸ್ತೆಗಳನ್ನು ಎತ್ತಿನಗಾಡಿ, ಬಸ್ ಸಂಚಾರಕ್ಕೆ ಮಿತಿಗೊಳಿಸಿ ನಿರ್ಮಾಣ ಮಾಡಲಾಗಿದೆ. ಆದರೆ ಈ ರಸ್ತೆಗಳ ಮೇಲೆ ಓಡಾಡುವ ಅದಿರು ಲಾರಿಗಳು ೫೦ ರಿಂದ ೬೦ ಟನ್ ಭಾರವಾದ ಅದಿರು ಸಾಗಿಸುತ್ತಿವೆ. ಸಾಲುಗಟ್ಟಿ ಲಾರಿಗಳು ಸಂಚರಿಸುವಾಗ ಪಾದಚಾರಿಗಳು ಉಸಿರು ಬಿಗಿಹಿಡಿದು ರಸ್ತೆಗಳ ಬದಿಯಲ್ಲಿಯೇ ನಿಲ್ಲಬೇಕು. ಶಾಲಾ ಮಕ್ಕಳಿಗೆ ಇವು ಶಾಪವಾಗಿ ಪರಿಣಮಿಸಿವೆ. ಆದ್ದರಿಂದ ಗ್ರಾಮದೊಳಗೆ ಈ ಲಾರಿಗಳ ಸಂಚಾರ ನಿರ್ಬಂಧಿಸಬೇಕೆಂಬುದು ಧರಣಿ ನಿರತರ ಬೇಡಿಕೆಯಾಗಿದೆ.
ರಸ್ತೆ ನಿರ್ಮಾಣ ಆಗುವವರೆಗೆ ಹೋರಾಟ ನಿಲ್ಲದು. ಜಿಲ್ಲಾಡಳಿತದ ಹಠಮಾರಿ ಧೋರಣೆ ಹೀಗೆಯೇ ಮುಂದುವರೆದರೆ ರಸ್ತೆಯಲ್ಲಿಯೇ ಉರುಳು ಸೇವೆ ಮಾಡುತ್ತೇವೆ ಎಂದು ಶಂಕರಮೂರ್ತಿ ಎಚ್ಚರಿಸಿದರು.
ಈ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳವರೆಗೂ ಒಯ್ದು ಚರ್ಚಿಸಲಾಗಿದೆ. ಪಾದಯಾತ್ರೆಯನ್ನೂ ನಡೆಸಲಾಗಿದೆ. ಆದರೂ ನಮ್ಮ ಸಮಸ್ಯೆ ಬಗೆಹರಿದಿಲ್ಲ. ಜಿಲ್ಲಾಡಳಿತ ಕಣ್ಣುಮುಚ್ಚಿ ಕುಳಿತಿದೆ. ಅದನ್ನು ಎಚ್ಚರಿಸಲು ಗುರುವಾರದಿಂದ ಧರಣಿ ಸತ್ಯಾಗ್ರಹ ಆರಂಭಿಸಿದ್ದೇವೆ ಎಂದರು.
ಅದಿರು ಸಾಗಾಣಿಕೆ ಲಾರಿಗಳಿಂದ ಆಗುತ್ತಿರುವ ಅನಾಹುತಗಳನ್ನು ಜಿಲ್ಲಾ ಸಚಿವರು, ಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಗಮನಿಸಬೇಕು ಎಂದರು.