ಪಂಪ್‌ಸೆಟ್‌ಗಳಿಗೆ 10 ಗಂಟೆ ನಿರಂತರ ವಿದ್ಯುತ್ ನೀಡಲು ರೈತರ ಆಗ್ರಹ

KannadaprabhaNewsNetwork |  
Published : Sep 20, 2026, 03:15 AM IST
ಕಾರಟಗಿ ಜೆಸ್ಕಾಂ ಕಚೇರಿ ಎದುರು ತಾಲೂಕಿನ ಮೈಲಾಪುರ ಗ್ರಾಮದ ರೈತರು ಶನಿವಾರ ಪ್ರತಿಭಟನೆ ನಡೆಸಿ, ಪಂಪ್‌ಸೆಟ್‌ಗಳಿಗೆ ನಿರಂತರ ವಿದ್ಯುತ್ ಪೂರೈಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಭತ್ತ ಬೆಳೆಯುವ ರೈತರ ಪಂಪ್‌ಸೆಟ್‌ಗಳಿಗೆ ನಿರಂತರ 10 ಗಂಟೆಗಳ ಕಾಲ ತ್ರಿಫೇಸ್ ವಿದ್ಯುತ್ ಪೂರೈಸುವಂತೆ ಒತ್ತಾಯಿಸಿ ತಾಲೂಕಿನ ಮೈಲಾಪುರ ಗ್ರಾಮದ ನೂರಾರು ರೈತರು ಶನಿವಾರ ಜೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಕಾರಟಗಿ: ಭತ್ತ ಬೆಳೆಯುವ ರೈತರ ಪಂಪ್‌ಸೆಟ್‌ಗಳಿಗೆ ನಿರಂತರ 10 ಗಂಟೆಗಳ ಕಾಲ ತ್ರಿಫೇಸ್ ವಿದ್ಯುತ್ ಪೂರೈಸುವಂತೆ ಒತ್ತಾಯಿಸಿ ತಾಲೂಕಿನ ಮೈಲಾಪುರ ಗ್ರಾಮದ ನೂರಾರು ರೈತರು ಶನಿವಾರ ಜೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಜೆಸ್ಕಾಂ ಕಚೇರಿಗೆ ಆಗಮಿಸಿದ ರೈತರು, ಪಂಪ್‌ಸೆಟ್‌ಗಳಿಗೆ ನಿರಂತರ 3 ಫೇಸ್ ವಿದ್ಯುತ್ ಪೂರೈಸಬೇಕು ಎಂದು ಘೋಷಣೆ ಕೂಗಿ, ರೈತರನ್ನು ಸಂಕಷ್ಟದಿಂದ ಪಾರು ಮಾಡುವಂತೆ ಒತ್ತಾಯಿಸಿದರು.

ಹೋರಾಟದ ನೇತೃತ್ವ ವಹಿಸಿದ್ದ ಅಮರೇಗೌಡ ಮಾಲಿಪಾಟೀಲ್ ಹಾಗೂ ಮಹೇಶ್ ಮೇಲ್ಮಾಳಗಿ ಮಾತನಾಡಿ, ತಾಲೂಕು ಗ್ರಾಮೀಣ ಪ್ರದೇಶದಲ್ಲಿ ಕಳೆದ 20 ದಿನಗಳಿಂದ ಜೆಸ್ಕಾಂ ವಿದ್ಯುತ್ ಪೂರೈಕೆಯನ್ನು ಕಡಿತಗೊಳಿಸಿರುವುದರಿಂದ ಪಂಪ್‌ಸೆಟ್‌ ಆಧಾರಿತ ರೈತರು ಬೆಳೆಗಳಿಗೆ ನೀರುಣಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಾಟಿ ಮಾಡಿರುವ ಭತ್ತ ಒಣಗುವ ಹಂತ ತಲುಪಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಹಿಂದೆ ನಿತ್ಯ ಏಳು ಗಂಟೆಗಳ ಕಾಲ ವಿದ್ಯುತ್ ಪೂರೈಸುತ್ತಿದ್ದ ಜೆಸ್ಕಾಂ, ಕಳೆದ ಎರಡು ದಿನಗಳಿಂದ ಕಡಿಮೆ ವೋಲ್ಟೇಜ್‌ನಲ್ಲಿ ಕೇವಲ ಆರು ಗಂಟೆಗಳ ಕಾಲ ವಿದ್ಯುತ್ ನೀಡುತ್ತಿದೆ. ಇದರಿಂದ ಪಂಪ್‌ಸೆಟ್‌ಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದೆ ಸುಟ್ಟುಹೋಗುವ ಆತಂಕ ಎದುರಾಗಿದೆ ಎಂದು ದೂರಿದರು.

ರೈತರ ಪಂಪ್‌ಸೆಟ್‌ಗಳಿಗೆ ನಿತ್ಯ 10 ಗಂಟೆಗಳ ಕಾಲ 3 ಫೇಸ್, 400 ವೋಲ್ಟ್ ವಿದ್ಯುತ್ ಪೂರೈಸಿದರೆ ಮಾತ್ರ ಬೆಳೆಗಳಿಗೆ ಸಮರ್ಪಕವಾಗಿ ನೀರುಣಿಸಲು ಸಾಧ್ಯ. ರೈತರ ಬದುಕು ಉಳಿಯಬೇಕಾದರೆ ವಿದ್ಯುತ್ ಪೂರೈಕೆ ಸಮರ್ಪಕವಾಗಬೇಕು. ರೈತರು ಬೆಳೆದ ಬೆಳೆ ಕೈಗೆ ಸೇರುವಂತಾಗಬೇಕು ಎಂದು ಒತ್ತಾಯಿಸಿದರು.

ಈ ಕುರಿತು ನೂರಾರು ರೈತರು ಜೆಸ್ಕಾಂ ಅಧಿಕಾರಿಗಳನ್ನು ಭೇಟಿ ಮಾಡಿ, ಕನಿಷ್ಠ ಒಂಬತ್ತು ಗಂಟೆಗಳ ಕಾಲ ನಿರಂತರ ವಿದ್ಯುತ್ ಪೂರೈಸುವಂತೆ ಮನವಿ ಸಲ್ಲಿಸಿದರು. ರೈತರ ಮನವಿಗೆ ಸ್ಪಂದಿಸದಿದ್ದರೆ ಸೆ. 21ರಂದು ಕಾರಟಗಿ ಕನಕದಾಸ ವೃತ್ತದಲ್ಲಿ ರೈತರೊಂದಿಗೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ನಂತರ ಜೆಸ್ಕಾಂ ಜೆಇ ಅಮರಪ್ಪ ಅವರಿಗೆ ರೈತರು ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಅಮರೇಗೌಡ ಮಾಲಿಪಾಟೀಲ್, ತಿರುಪತಪ್ಪ ಗುಡಿತಾಳ, ದೊಡ್ಡಪ್ಪ ಮಲ್ಲೇಶಪ್ಪ ಪನ್ನಾಪುರ, ಚನ್ನಬಸವನಗೌಡ, ಯಮನೂರ, ಕೆ. ಶರಣಪ್ಪ, ನೀಲಕಂಠಪ್ಪ, ನಾಗಭೂಷಣ ಬಡಿಗೇರ್, ಮುತ್ತುರೆಡ್ಡಿ, ಮೇಘರಾಜ್, ಜೆ. ವೆಂಕಟರಮಣ, ಶರಣಪ್ಪ ದಾಸನಾಳ, ಮಾರೆಪ್ಪ, ರಾಮನಗೌಡ ಮಾಲಿಪಾಟೀಲ್, ನಾಗರಾಜ, ದೇವರಾಜಗೌಡ ಪೊಲೀಸ್‌ಪಾಟೀಲ್, ರಾಮಣ್ಣ, ಫಾಮಣ್ಣ, ತಿಮ್ಮಪ್ಪ, ನೀಲಕಂಠಗೌಡ, ಎ. ದುರ್ಗಾರಾವ್, ಕೆ. ಶ್ರೀನಿವಾಸು, ಶಾಮಣ್ಣ, ವೀರೇಶ ಹಾಗೂ ನೂರಾರು ರೈತರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬುಡಕಟ್ಟು ಸಿದ್ದಿ ಸಮುದಾಯಕ್ಕೆ ಪೌಷ್ಟಿಕಾಹಾರ ವಿತರಿಸಿ
ರೋಗ ಬರುವ ಮುಂಚೆ ಜಾಗೃತಿ ವಹಿಸಿ: ಡಾ. ಯೋಗೇಶ್ ಮಡಗಾಂವಕರ