ಕುರುಗೋಡು:
ಸಮಾಜದಲ್ಲಿ ತೀರಾ ಹಿಂದುಳಿದ ೪೯ ಸೂಕ್ಷ ಮತ್ತು ಅತಿಸೂಕ್ಷ ಅಲೆಮಾರಿ ಸಮುದಾಯಗಳಿಗೆ ಪರಿಶಿಷ್ಠ ಜಾತಿ ಮೀಸಲಾತಿಯಲ್ಲಿ ಶೇ. ೩ರಷ್ಟು ಒಳಮೀಸಲಾತಿ ನೀಡಬೇಕು ಎಂದು ಕುಡುತಿನಿ ಪಟ್ಟಣದ ಅಲೆಮಾರಿ ಸಮುದಾಯದ ಯುವ ಮುಖಂಡ ಬುಡ್ಗ ಜಂಗಮ, ಸ೦ಪತ್ ಕುಮಾರ್ ಅವರು ಸರ್ಕಾರವನ್ನು ಒತ್ತಾಯಿಸಿದರು.ಸಮೀಪದ ಕುಡುತಿನಿ ಪಟ್ಟಣದ ೩ನೇ ವಾರ್ಡಿನಲ್ಲಿ ಅಲೆಮಾರಿ ಸಮುದಾಯಗಳಿಂದ ಚಳಿಗಾಲ ಅಧಿವೇಶನ ಬೆಳಗಾವಿ ಸುವರ್ಣಸೌಧದ ಮುಂದೆ ಡಿ. ೧೮ರಂದು ಹಮ್ಮಿಕೊಳ್ಳಲಾಗುವ ‘ಚಲೋ ಬೆಳಗಾವಿ’ಕಾರ್ಯಕ್ರಮದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದರು.
ಉದ್ಯೋಗ, ಶಿಕ್ಷಣ ಮೂಲಭೂತ ಸೌಕರ್ಯಗಳು ಅಲೆಮಾರಿ ಸಮುದಾಯಗಳಿಗೆ ಮುಖ್ಯವಾಗಿ ಮೀಸಲಾತಿಯಲ್ಲಿ ಶೇ. ೩ರಷ್ಟು ಒಳಮೀಸಲಾತಿ ಅವಶ್ಯಕತೆ ಇದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಬೆಳಗಾವಿಯ ಚಳಿಗಾಲದ ಅಧಿವೇಶದಲ್ಲಿ ಚರ್ಚೆ ಕೂಡಲೆ ಶೇ. ೩ರಷ್ಟು ಒಳಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಹಿಸಿದರು.ಪ್ರತ್ಯೇಕ ಆಯೋಗ ರಚನೆ, ಅಲೆಮಾರಿಗಳ ಮನೆ ನಿರ್ಮಾಣಕ್ಕೆ ಹೆಚ್ಚುವರಿ ಅನುದಾನ ನೀಡಿ ನಂತರ ವಾಪಾಸ್ ಪಡೆದ ₹೩೦೦ ಕೋಟಿ ಅನುದಾನವನ್ನು ಪುನಃ ಬಿಡುಗಡೆಗೊಳಿಸಬೇಕು. ರಾಜ್ಯದ ಹಂಪಿ ವಿಶ್ವವಿದ್ಯಾಲಯದಲ್ಲಿ ಅಲೆಮಾರಿ ಬುಡಕಟ್ಟು ಅಧ್ಯಯನ ಕೇಂದ್ರವನ್ನು ಕೂಡಲೇ ತೆರೆದು ಅನುಕೂಲ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರ ಅಲೆಮಾರಿ ಸಮುದಾಯಗಳಿಗೆ ವಸತಿ, ಶಿಕ್ಷಣ, ಉದ್ಯೋಗ, ನೇರ ಸಾಲ ಸೌಲಭ್ಯಗಳು ಸೇರಿದಂತೆ ಇತರೆ ಸೌಕರ್ಯಗಳನ್ನು ಕಲ್ಪಿಸಿ ಅಲೆಮಾರಿ ಸಮುದಾಯಗಳಿಗೆ ಆಸರೆಯಾಗಬೇಕು ಎಂದರು.ಡಿ. ೧೮ರಂದು ‘ಚಲೋ ಬೆಳಗಾವಿ’ ಹೋರಾಟದಲ್ಲಿ ಅಲೆಮಾರಿ ಸಮುದಾಯದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ರಾಜ್ಯ ಎಸ್ಸಿ, ಎಸ್ಟಿ ಅಲೆಮಾರಿ ಬುಡಕಟ್ಟು ಮಹಾಸಭಾದ ಬಳ್ಳಾರಿ, ಜಿಲ್ಲಾಧ್ಯಕ್ಷ, ಶಿವಕುಮಾರ್ ಮಾತನಾಡಿ, ಅಲೆಮಾರಿ ಸಮುದಾಯಗಳಿಗೆ ಸರ್ಕಾರ ಯಾವುದೇ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಮೀನಮೇಷ ಎಣಿಸುತ್ತಿದೆ. ಅಲೆಮಾರಿ ಸಮುದಾಯಗಳಿಗೆ ಶೇ. ೩ರಷ್ಟು ಒಳಮೀಸಲಾತಿ ಸೌಲಭ್ಯ ಸಿಗುವ ವರೆಗೂ ಹಂತ ಹಂತವಾಗಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.ಸಭೆಯಲ್ಲಿ ಕುಡುತಿನಿ ಪಟ್ಟಣದ ೩ನೇ ವಾರ್ಡಿನ ಅಲೆಮಾರಿ ಸಮುದಾಯಗಳ ಮುಖಂಡ ತಿಪ್ಪೇಸ್ವಾಮಿ, ಉಮೇಶ, ಎಂ. ಲಾಲಪ್ಪ, ವೈ. ರೆಡ್ಡೆಪ್ಪ, ವೈ. ಮಾರೇಶ, ಮೋತಿ ವೀರೇಶ, ವೈ. ಶಂಕರಪ್ಪ, ಚೆನ್ನದಾಸರ ದುಗ್ಗಪ್ಪ, ಮುಗ್ಗು ಜಂಭಣ್ಣ, ಗಿರಿಯಪ್ಪ ಹುಸೇನಿ, ಲಿಂಗರಾಜ, ಶ್ರೀನಿವಾಸ್, ಸೂರಿ, ಸೇರಿದಂತೆ ಇತರರು ಇದ್ದರು.