ರೈತರಿಗೆ ನಿರಂತರ 7 ಗಂಟೆ ವಿದ್ಯುತ್ ನೀಡಿ: ಶಾಮನೂರು ಬಸವರಾಜಪ್ಪ

KannadaprabhaNewsNetwork |  
Published : May 13, 2026, 01:00 AM IST
ಕ್ಯಾಪ್ಷನ12ಕೆಡಿವಿಜಿ37 ದಾವಣಗೆರೆಯ ಜಿಪಂ ಸಭಾಂಗಣದಲ್ಲಿ ಶಾಮನೂರು ಬಸವರಾಜಪ್ಪ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ 'ಪಂಚ ಗ್ಯಾರಂಟಿ' ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು. | Kannada Prabha

ಸಾರಾಂಶ

ಜಿಲ್ಲೆಯಲ್ಲಿ ರೈತರಿಗೆ ಸಮರ್ಪಕ ವಿದ್ಯುತ್ ಸರಬರಾಜು ಆಗುತ್ತಿಲ್ಲ. ಪ್ರಸ್ತುತ ಕೇವಲ 4 ರಿಂದ 5 ಗಂಟೆ ಮಾತ್ರ ವಿದ್ಯುತ್ ನೀಡಲಾಗುತ್ತಿದೆ. ಇದನ್ನು ಕೂಡಲೇ ಸರಿಪಡಿಸಿ ರೈತರಿಗೆ ನಿರಂತರ 7 ತಾಸು ವಿದ್ಯುತ್ ಸರಬರಾಜು ಮಾಡಲು ಕ್ರಮ ವಹಿಸುವಂತೆ ಜಿಲ್ಲಾ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಮನೂರು ಬಸವರಾಜಪ್ಪ ಬೆಸ್ಕಾಂ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

- ಜಿಪಂನಲ್ಲಿ ಜಿಲ್ಲಾಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ । 156 ಮನೆಗಳಿಗೆ ವಿದ್ಯುತ್‌: ಬೆಸ್ಕಾಂ ಭರವಸೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಜಿಲ್ಲೆಯಲ್ಲಿ ರೈತರಿಗೆ ಸಮರ್ಪಕ ವಿದ್ಯುತ್ ಸರಬರಾಜು ಆಗುತ್ತಿಲ್ಲ. ಪ್ರಸ್ತುತ ಕೇವಲ 4 ರಿಂದ 5 ಗಂಟೆ ಮಾತ್ರ ವಿದ್ಯುತ್ ನೀಡಲಾಗುತ್ತಿದೆ. ಇದನ್ನು ಕೂಡಲೇ ಸರಿಪಡಿಸಿ ರೈತರಿಗೆ ನಿರಂತರ 7 ತಾಸು ವಿದ್ಯುತ್ ಸರಬರಾಜು ಮಾಡಲು ಕ್ರಮ ವಹಿಸುವಂತೆ ಜಿಲ್ಲಾ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಮನೂರು ಬಸವರಾಜಪ್ಪ ಬೆಸ್ಕಾಂ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿಯ ಎಸ್.ಎಸ್. ಮಲ್ಲಿಕಾರ್ಜುನ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರೈತರಿಗೆ ಸರದಿ ಸಾಲು ಪದ್ಧತಿಯಡಿ ವಿದ್ಯುತ್ ಸರಬರಾಜು ಮಾಡಲಾಗುತ್ತಿದ್ದು, ಕೃಷಿ ಚಟುವಟಿಕೆಗಳಿಗೆ ತೊಂದರೆ ಆಗದಂತೆ ನಿಗದಿತ ಅವಧಿಯವರೆಗೆ ಗುಣಮಟ್ಟದ ವಿದ್ಯುತ್ ನೀಡಲು ಆದ್ಯತೆ ನೀಡಬೇಕು. ರೈತರು ಹಗಲು-ರಾತ್ರಿ ದುಡಿಯುವುದರಿಂದ, ಅವರಿಗೆ ನಿಗದಿತ ಅವಧಿಯಲ್ಲಿ ಅಡಚಣೆಯಿಲ್ಲದ ವಿದ್ಯುತ್ ಸಿಕ್ಕರೆ ಮಾತ್ರ ಕೃಷಿ ಲಾಭದಾಯಕವಾಗಲು ಸಾಧ್ಯ ಎಂದರು.

ಜಗಳೂರು ತಾಲೂಕಿನಲ್ಲಿ 30*40 ಮತ್ತು ಅದಕ್ಕಿಂತ ಕಡಿಮೆ ಅಳತೆ ನಿವೇಶನಗಳಲ್ಲಿ ನಿರ್ಮಿಸಲಾದ ಸುಮಾರು 156 ಮನೆಗಳಿಗೆ ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಲ್ಪಿಸಲು ಅನುಮತಿ ನೀಡುತ್ತಿಲ್ಲ ಎಂಬ ವಿಷಯ ಸಮಿತಿ ಸದಸ್ಯರು ಸಭೆ ಗಮನಕ್ಕೆ ತಂದರು. ಈ ಬಗ್ಗೆ ಕೂಡಲೇ ಪರಿಶೀಲನೆ ನಡೆಸಿ, ನಿಯಮಾನುಸಾರ ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಮ ವಹಿಸುವುದಾಗಿ ಬೆಸ್ಕಾಂ ಅಧಿಕಾರಿಗಳು ಸಭೆಗೆ ಭರವಸೆ ನೀಡಿದರು.

ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಮಧುಸೂಧನ್ ಮಾತನಾಡಿ, ಜಿಲ್ಲೆಯಲ್ಲಿ ಫೆಬ್ರವರಿ 2025ರಿಂದ ಏಪ್ರಿಲ್ 2026 ರವರೆಗೆ 357191 ಅಂತ್ಯೋದಯ ಪಡಿತರ ಚೀಟಿಗಳಿಗೆ, 1738979 ಎಎವೈ ಸದಸ್ಯರ ಸಂಖ್ಯೆಗೆ 776737.53 ಕ್ವಿಂಟಲ್ ಆಹಾರ ಧಾನ್ಯ ಹಂಚಿಕೆ ಮಾಡಲಾಗಿದೆ. ಬೇಸಿಗೆಯ ತೀವ್ರತೆ ಹಿನ್ನೆಲೆ ಸಾರ್ವಜನಿಕರಿಗೆ ಅನುಕೂಲ ಆಗುವಂತೆ ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳ ಕೆಲಸದ ಅವಧಿಯಲ್ಲಿ ಬದಲಾವಣೆ ಮಾಡಲಾಗಿದೆ. ಮೇ 1ರಿಂದ ಜಾರಿಗೆ ಬರುವಂತೆ ಜಿಲ್ಲೆಯ ಎಲ್ಲ ನ್ಯಾಯಬೆಲೆ ಅಂಗಡಿಗಳು ಬೆಳಗ್ಗೆ 6ರಿಂದ 10 ಗಂಟೆಯವರೆಗೆ ಕಾರ್ಯನಿರ್ವಹಿಸಲಿವೆ ಎಂದು ಸಭೆಗೆ ಮಾಹಿತಿ ನೀಡಿದರು.

ಗೃಹಲಕ್ಷ್ಮಿ ಯೋಜನೆ:

ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯು ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದ್ದು, ಆಗಸ್ಟ್ 2023 ರಿಂದ ಫೆಬ್ರವರಿ 2026 ರವರೆಗೆ ಜಿಲ್ಲೆಯ ಒಟ್ಟು 3,74,581 ನೋಂದಾಯಿತ ಫಲಾನುಭವಿಗಳಿಗೆ 29 ಕಂತುಗಳಲ್ಲಿ ಒಟ್ಟು ₹2053.08 ಕೋಟಿ ನೇರ ನಗದು ವರ್ಗಾವಣೆ ಮೂಲಕ ಪಾವತಿಸಲಾಗಿದೆ. ಗೃಹಜ್ಯೋತಿ ಯೋಜನೆಯಡಿ ಮಾರ್ಚ್ 2026 ರ ಮಾಹೆಯಲ್ಲಿ 515747 ಫಲಾನುಭಿಗಳ ಸಂಖ್ಯೆ ಇದ್ದು, ₹24.26 ಕೋಟಿ ವ್ಯಯಿಸಲಾಗಿದೆ ಎಂದು ಬೆಸ್ಕಾಂ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಶಕ್ತಿ ಯೋಜನೆ:

ಜೂನ್ 2023 ರಿಂದ ಏಪ್ರಿಲ್ 2026 ರವರೆಗೆ ಒಟ್ಟು 14,31,64,455 ಜನ ಪ್ರಯಾಣಿಸಿದ್ದು, ₹424 ಕೋಟಿಗಳ ಪ್ರಯಾಣ ದರ ತಗಲಿದೆ. ಈ ಯೋಜನೆಯಡಿ ಜಿಲ್ಲೆಯಲ್ಲಿ ಪ್ರತಿದಿನ 1,35,850 ಜನ ಪ್ರಯಾಣಿಸುತ್ತಿದ್ದಾರೆ ಎಂದು ಸಭೆಗೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮಾಹಿತಿ ನೀಡಿದರು.

ಯುವನಿಧಿ ಯೋಜನೆ:

ಜಿಲ್ಲೆಯ ನಿರುದ್ಯೋಗಿ ಪದವೀಧರರು ಹಾಗೂ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ''''ಯುವನಿಧಿ'''' ಯೋಜನೆಯಡಿ ಆರ್ಥಿಕ ನೆರವು ನೀಡಲಾಗುತ್ತಿದೆ. ಈವರೆಗೆ ಜಿಲ್ಲೆಯಲ್ಲಿ ಒಟ್ಟು ₹36.79 ಕೋಟಿಗೂ ಅಧಿಕ ಮೊತ್ತವನ್ನು ನೇರ ನಗದು ವರ್ಗಾವಣೆ ಮೂಲಕ ಫಲಾನುಭವಿಗಳ ಖಾತೆಗೆ ಪಾವತಿಸಲಾಗಿದೆ ಎಂದರು.

ಸಭೆಯಲ್ಲಿ ಸಮಿತಿ ಉಪಾಧ್ಯಕ್ಷರಾದ ಕುಕ್ಕವಾಡ ಮಂಜಣ್ಣ, ನಂಜಾ ನಾಯ್ಕ್, ರಾಜೇಶ್ವರಿ, ಅನಿಸ್ ಪಾಷಾ, ಚಂದ್ರಶೇಖರ, ಸಮಿತಿ ಸದಸ್ಯರಾದ ಡೋಲಿ ಚಂದ್ರು, ನಾಗರಾಜ್, ಶ್ರೀನಿವಾಸ್ ಚನ್ನಗಿರಿ, ಬಾತಿ ಉಮೇಶ್, ಶಿವಶಂಕರ್ ಕೈದಾಳ್, ಜಗಳೂರು ಷಂಷಿರ್ ಅಹಮದ್, ರಾಘವ ಗೌಡ, ಲಿಯಾಕತ್ ಅಲಿ, ಅಲಿ ರೆಹಮತ್, ಶಿವರಾಂ ನಾಯ್ಕ್, ನೀಲಗಿರಿಯಪ್ಪ ಹಾಗೂ ಜಿಲ್ಲಾ ಮತ್ತು ತಾಲೂಕುಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

- - -

(ಬಾಕ್ಸ್‌)

* 600 ಹಳ್ಳಿಗಳಿಗೆ ಅಧಿಕಾರಿಗಳೊಂದಿಗೆ ಭೇಟಿ: ಸಿಇಒ ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲ ರಾವ್ ಮಾತನಾಡಿ, ಪ್ರಸ್ತುತ ಸಾಲಿನ ಪದವಿ ಮತ್ತು ಡಿಪ್ಲೊಮಾ ಫಲಿತಾಂಶಗಳು ಹೊರಬಂದಿದ್ದು, ಹೆಚ್ಚಿನ ನಿರುದ್ಯೋಗಿಗಳು ಯೋಜನೆಯಡಿ ನೋಂದಾಯಿಸಿಕೊಳ್ಳಲು ಅರ್ಹರಿದ್ದಾರೆ. ಆದ್ದರಿಂದ ಜಿಲ್ಲೆಯ ಎಲ್ಲ ಕಾಲೇಜುಗಳಲ್ಲಿ ಬ್ಯಾನರ್ ಮತ್ತು ಪೋಸ್ಟರ್‌ಗಳ ಮೂಲಕ ಜಾಗೃತಿ ಮೂಡಿಸಿ, ವಿಶೇಷ ಅಭಿಯಾನ ಹಮ್ಮಿಕೊಳ್ಳಬೇಕು. ಅಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮದಡಿ ಜಿಲ್ಲೆಯ 600 ಹಳ್ಳಿಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ್ದು, ಕುಡಿಯುವ ನೀರು, ಸ್ವಚ್ಛತೆ, ಇ-ಸ್ವತ್ತು ಮುಂತಾದ ಸಮಸ್ಯೆಗಳಿಗೆ ರೈತರೊಂದಿಗೆ ಸಂವಾದ ಮಾಡಿದ್ದು, ಅನೇಕ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಲಾಗಿದೆ ಎಂದರು.

- - -

-12ಕೆಡಿವಿಜಿ37:

ದಾವಣಗೆರೆಯ ಜಿಪಂ ಸಭಾಂಗಣದಲ್ಲಿ ಶಾಮನೂರು ಬಸವರಾಜಪ್ಪ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಆಗ್ರಹಿಸಿ ಕರವೇ ಪ್ರತಿಭಟನೆ
ಮಂಗಳಕ್ಕೆ ಹೋಗಿ ಬಂದರೆ ದೇಶದ ಅಭಿವೃದ್ಧಿ ಅಸಾಧ್ಯ: ಚೇತನ್ ಅಹಿಂಸಾ