ಸೀಬಡ್‌, ಕೈಗಾ ಯೋಜನೆಯಲ್ಲಿ ಸ್ಥಳೀಯರಿಗೆ ಶೇ.70 ಉದ್ಯೋಗ ನೀಡಿ: ಶಾಸಕ ಸತೀಶ ಸೈಲ್‌ ಸೂಚನೆ

KannadaprabhaNewsNetwork |  
Published : Feb 12, 2025, 12:35 AM IST
ಶಾಸಕ ಸತೀಶ ಸೈಲ್ ಅಧಿಕಾರಿಗಳ ಸಭೆ ನಡೆಸಿದರು. | Kannada Prabha

ಸಾರಾಂಶ

ಸೀಬರ್ಡ್ ಹಾಗೂ ಕೈಗಾ ನಿರ್ಬಂಧಿತ ಜಾಗವಾದ ಕಾರಣ ಸ್ಥಳೀಯರ ಬಗ್ಗೆ ಪೊಲೀಸ್ ಪರಿಶೀಲನೆ ನಂತರ ಉದ್ಯೋಗಕ್ಕೆ ತೆಗೆದುಕೊಳ್ಳುವುದರಿಂದ ಯಾವುದೇ ಸಮಸ್ಯೆಯೂ ಆಗುವುದಿಲ್ಲ.

ಕಾರವಾರ: ಇಲ್ಲಿನ ಕೈಗಾ ಮತ್ತು ಸೀಬರ್ಡ್ ಯೋಜನೆಗಳಲ್ಲಿರುವ ವಿವಿಧ ಗುತ್ತಿಗೆ ಕಂಪನಿಗಳಲ್ಲಿ ಸ್ಥಳೀಯರಿಗೆ ಶೇ. 70ರಷ್ಟು ಉದ್ಯೋಗ ನೀಡಬೇಕು ಎಂದು ಶಾಸಕ ಸತೀಶ ಸೈಲ್ ತಿಳಿಸಿದರು.

ಇಲ್ಲಿನ ತಾಪಂ ಸಭಾಂಗಣದಲ್ಲಿ ಖಾಸಗಿ ಕಂಪನಿಗಳ ಅಧಿಕಾರಿಗಳೊಂದಿಗೆ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿ, ಕಾರವಾರ ವಿಧಾನಸಭಾ ಕ್ಷೇತ್ರದ ಕೈಗಾ ಹಾಗೂ ಸೀಬರ್ಡ್‌ನಲ್ಲಿ ವಿವಿಧ ಕಾಮಗಾರಿಗಳನ್ನು ನಿರ್ವಹಿಸುವ ಹಲವು ಗುತ್ತಿಗೆ ಕಂಪನಿಗಳಿವೆ. ಆ ಕಂಪನಿಗಳಲ್ಲಿ ಹೊರರಾಜ್ಯದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಸ್ಥಳೀಯರಿಗೆ ಕಡಿಮೆ ಉದ್ಯೋಗವಕಾಶ ನೀಡುತ್ತಿರುವುದರಿಂದ ಸ್ಥಳೀಯರು ಗೋವಾ, ಮುಂಬೈ, ಮಂಗಳೂರು ಮೊದಲಾದ ಊರುಗಳಿಗೆ ಉದ್ಯೋಗ ಅರಸಿಕೊಂಡು ಹೋಗುತ್ತಿದ್ದಾರೆ. ಈ ಯೋಜನೆಗಳಿಗೆ ಸ್ಥಳೀಯರು ತಮ್ಮ ಜಮೀನು, ಮನೆಗಳನ್ನು ತ್ಯಾಗ ಮಾಡಿದ್ದಾರೆ. ಆದ್ದರಿಂದ ಇಲ್ಲಿನ ಕಂಪನಿಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಲ್ಲಿ ಶೇ. 70ರಷ್ಟು ಸ್ಥಳೀಯರನ್ನು ಹಾಗೂ ಶೇ. 30ರಷ್ಟು ಹೊರಗಿನವರನ್ನು ತೆಗೆದುಕೊಳ್ಳಬೇಕು. ಕಂಪನಿ ಇರುವ ಸ್ಥಳದ 5 ಕಿಮೀ ವ್ಯಾಪ್ತಿಯೊಳಗೆ ವಾಸಿಸುವ ಶೇ. 50ರಷ್ಟು ಕಾರ್ಮಿಕರಿರಬೇಕು. ಎಲ್ಲ ಕಾರ್ಮಿಕರಿಗೆ ಗುರುತಿನ ಚೀಟಿ ನೀಡಬೇಕು ಎಂದು ಗುತ್ತಿಗೆ ಕಂಪನಿಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.ಕೈಗಾ ಹಾಗೂ ಸೀಬರ್ಡ್‌ನಲ್ಲಿ ಕಾರ್ಮಿಕರ ಅಗತ್ಯತೆ ಪೂರೈಸಲು ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿರುವ ನಿರುದ್ಯೋಗಿಗಳ ಪಟ್ಟಿಯನ್ನು, ಎಂಜಿನಿಯರಿಂಗ್, ಪದವಿ, ಐಟಿಐ/ಡಿಪ್ಲೊಮಾ, ಎಸ್‌ಎಸ್ಎಲ್‌ಸಿ ಉತ್ತೀರ್ಣ ಮತ್ತು ಅನುತ್ತೀರ್ಣ ವಿದ್ಯಾರ್ಹತೆಯ ವಿವರಗಳೊಂದಿಗೆ ತಯಾರಿಸಬೇಕು. ಈ ಪಟ್ಟಿಯನ್ನು ತಹಸೀಲ್ದಾರರು ಹಾಗೂ ಕಾರ್ಮಿಕ ಅಧಿಕಾರಿಗಳು ಪ್ರತಿ ಕಂಪನಿಗೆ ಕಳಿಸಬೇಕು. ಕಂಪನಿಯು ಅಗತ್ಯಕ್ಕೆ ತಕ್ಕಂತೆ ಹಾಗೂ ಅಹರ್ತೆಗೆ ಅನುಗುಣವಾಗಿ ಈ ಪಟ್ಟಿಯಲ್ಲಿರುವವರನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕು. ಕಾರ್ಮಿಕ ಇಲಾಖೆಯ ನಿಯಮದಂತೆ ಕೇಂದ್ರ ಸರ್ಕಾರದ ಕನಿಷ್ಠ ವೇತನವನ್ನು ಕಾರ್ಮಿಕರಿಗೆ ಕಡ್ಡಾಯವಾಗಿ ನೀಡಬೇಕು ಎಂದರು.ಸೀಬರ್ಡ್ ಹಾಗೂ ಕೈಗಾ ನಿರ್ಬಂಧಿತ ಜಾಗವಾದ ಕಾರಣ ಸ್ಥಳೀಯರ ಬಗ್ಗೆ ಪೊಲೀಸ್ ಪರಿಶೀಲನೆ ನಂತರ ಉದ್ಯೋಗಕ್ಕೆ ತೆಗೆದುಕೊಳ್ಳುವುದರಿಂದ ಯಾವುದೇ ಸಮಸ್ಯೆಯೂ ಆಗುವುದಿಲ್ಲ. ಕಂಪನಿಗಳಲ್ಲಿ ಸ್ಥಳೀಯರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎನ್ನುವ ದೂರು ಬಂದಲ್ಲಿ, ಅವರಿಗೆ 3 ನೋಟಿಸ್ ನೀಡಿ ಕೆಲಸದಿಂದ ತೆಗೆಯಬಹುದು ಎಂದರು.

ಸ್ಥಳೀಯರಿಗೆ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ, ಪೊಲೀಸ್ ಇಲಾಖೆ, ತಹಸೀಲ್ದಾರರು, ತಾಪಂ ಕಾರ್ಯನಿರ್ವಹಣಾಧಿಕಾರಿ, ಕಾರ್ಮಿಕ ಅಧಿಕಾರಿಗಳು ಮತ್ತು ಉದ್ಯೋಗ ವಿನಿಮಯ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ತಾಲೂಕು ಮಟ್ಟದ ಸಮಿತಿಯನ್ನು ರಚಿಸುವಂತೆ ಹೇಳಿದರು.ಜಿಲ್ಲಾ ಕಾರ್ಮಿಕ ಅಧಿಕಾರಿ ಲಲಿತಾ ಸಾತೇನಹಳ್ಳಿ, ತಹಸೀಲ್ದಾರ್ ನಿಶ್ಚಲ ನರೋನ್ಹಾ, ತಾಪಂ ಕಾರ್ಯನಿರ್ವಹಣಾಧಿಕಾರಿ ವೀರನಗೌಡ ಏಗನಗೌಡರ್, ಜಿಲ್ಲಾ ಉದ್ಯೋಗಾಧಿಕಾರಿ ವಿನೋದ ನಾಯ್ಕ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!