ಸಮರ್ಪಕ ವಿದ್ಯುತ್ ಪೂರೈಸಿ: ಶಾಸಕ ಮಾನೆ ಸೂಚನೆ

KannadaprabhaNewsNetwork |  
Published : Mar 29, 2025, 12:32 AM IST
ಫೋಟೊ: 28ಎಚ್‌ಎನ್‌ಎಲ್3 | Kannada Prabha

ಸಾರಾಂಶ

ಗೊಂದಿ 110 ಕೆವಿ ವಿದ್ಯುತ್ ಕೇಂದ್ರದ ಟೆಂಡರ್ ಪ್ರಕ್ರಿಯೆ ಚುರುಕುಗೊಳಿಸಿ, ಆದಷ್ಟು ಬೇಗ ಕಾಮಗಾರಿ ಆರಂಭಿಸಲು ನಿಗಾ ವಹಿಸಬೇಕು ಎಂದು ಶಾಸಕ ಶ್ರೀನಿವಾಸ ಮಾನೆ ಅವರು ಅಧಿಕಾರಿಗಳಿಗೆ ತಿಳಿಸಿದರು.

ಹಾನಗಲ್ಲ: ರೈತರು ಬೆಳೆಗಳಿಗೆ ನೀರುಣಿಸಲು ಅನುಕೂಲವಾಗುವಂತೆ ಸಮರ್ಪಕ ವಿದ್ಯುತ್ ಪೂರೈಕೆಗೆ ಗಮನ ಹರಿಸಬೇಕು. ಬಾಳಂಬೀಡ 110 ಕೆವಿ ವಿದ್ಯುತ್ ಕೇಂದ್ರದ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಕಾರ್ಯಾರಂಭಗೊಳಿಸುವಂತೆ ಶಾಸಕ ಶ್ರೀನಿವಾಸ ಮಾನೆ ಅವರು ಕೆಪಿಟಿಸಿಎಲ್ ಹಾಗೂ ಹೆಸ್ಕಾಂ ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು.ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ಕೆಪಿಟಿಸಿಎಲ್ ಹಾಗೂ ಹೆಸ್ಕಾಂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಗೊಂದಿ 110 ಕೆವಿ ವಿದ್ಯುತ್ ಕೇಂದ್ರದ ಟೆಂಡರ್ ಪ್ರಕ್ರಿಯೆ ಚುರುಕುಗೊಳಿಸಿ, ಆದಷ್ಟು ಬೇಗ ಕಾಮಗಾರಿ ಆರಂಭಿಸಲು ನಿಗಾ ವಹಿಸಬೇಕು. ಬಮ್ಮನಹಳ್ಳಿ ಹಾಗೂ ಬೆಳಗಾಲಪೇಟೆ 33 ಕೆವಿ ವಿದ್ಯುತ್ ಉಪಕೇಂದ್ರಗಳನ್ನು 110 ಕೆವಿ ವಿದ್ಯುತ್ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸುವುದರಿಂದ ಆ ಭಾಗದಲ್ಲಿ ವಿದ್ಯುತ್ ಪೂರೈಕೆಯಲ್ಲಿನ ಒತ್ತಡ ಕಡಿಮೆಯಾಗಲಿದೆ. ಹಾಗಾಗಿ ವಿಶೇಷ ಕಾಳಜಿ ವಹಿಸಿ ಎಂದರು.ತಾಲೂಕಿನಲ್ಲಿ ಮುಂದೆ ವಿದ್ಯುತ್ ಪೂರೈಕೆಯಲ್ಲಿ ಅನಾನುಕೂಲ ಉಂಟಾಗದ ರೀತಿಯಲ್ಲಿ 220 ಕೆವಿ ಹೊಸ ವಿದ್ಯುತ್ ಕೇಂದ್ರ ನಿರ್ಮಾಣಕ್ಕೆ ಪ್ರಸ್ತಾವನೆ ತಯಾರಿಸಿ ಕಳುಹಿಸಿದರೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡುವುದಾಗಿ ತಿಳಿಸಿದರು. ಜತೆಗೆ ಹಾನಗಲ್ಲ ನಗರದಲ್ಲಿ ಭವಿಷ್ಯದಲ್ಲಿನ ಉಂಟಾಗಬಹುದಾದ ವಿದ್ಯುತ್ ಪೂರೈಕೆಯಲ್ಲಿ ಒತ್ತಡ ಕಡಿಮೆ ಮಾಡಿಕೊಳ್ಳಲು ಪರ್ಯಾಯವಾಗಿ ಇನ್ನೊಂದು 110 ಕೆವಿ ವಿದ್ಯುತ್ ಕೇಂದ್ರ ನಿರ್ಮಾಣಕ್ಕೂ ಪ್ರಸ್ತಾವನೆ ಸಲ್ಲಿಸಿ ಎಂದರು.ತಹಸೀಲ್ದಾರ್ ರೇಣುಕಾ ಎಸ್., ಕೆಪಿಟಿಸಿಎಲ್ ಬೃಹತ್ ಕಾಮಗಾರಿ ವಿಭಾಗದ ಕಾರ್ಯ ನಿರ್ವಾಹಕ ಅಭಿಯಂತರ ಹರೀಶ್, ಟಿ.ಎಲ್. ಮತ್ತು ಎಸ್‌ಎಸ್ ವಿಭಾಗದ ಕಾರ್ಯ ನಿರ್ವಾಹಕ ಅಭಿಯಂತರ ವಿಜಯ ಜೋಶಿ, ಹೆಸ್ಕಾಂ ಎಇಇ ವಿ.ಎಸ್. ಮರಿಗೌಡ್ರ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.ನಾಳೆ ಮೈಲಾರಲಿಂಗೇಶ್ವರ ಭಾವಚಿತ್ರದ ಮೆರವಣಿಗೆ

ಶಿಗ್ಗಾಂವಿ: ತಾಲೂಕಿನ ಬಿಶೆಟ್ಟಿಕೊಪ್ಪ ಗ್ರಾಮದಲ್ಲಿ ಶ್ರೀ ಮೈಲಾರಲಿಂಗೇಶ್ವರ ಶಿಬಾರದ ಜಾತ್ರಾ ಮಹೋತ್ಸವ ಅಂಗವಾಗಿ ಮಾ. ೨೯ರಂದು ಸಾಯಂಕಾಲ ಡೊಳ್ಳಿನ ಪದ, ಆನಂತರ ರಾತ್ರಿ ಮುಗಳಿಯ ಶ್ರೀ ಕಛೇಶ್ವರ ಜಾನಪದ ಕಲಾ ತಂಡದಿಂದ ಜಾನಪದ ರಸಮಂಜರಿ ಕಾರ್ಯಕ್ರಮ ಜರುಗುವುದು.ಮಾ. ೩೦ರಂದು ಬೆಳಗ್ಗೆ ಮಹಾಭಿಷೇಕ, ಮಹಾಪೂಜೆ ಹಾಗೂ ಹೋಮ ಜರುಗುವುದು. ಆನಂತರ ಕುಂಭ ಮೆರವಣಿಗೆ, ಕಾಕಡ ಪವಾಡ ಹಾಗೂ ಸಕಲ ವಾದ್ಯಮೇಳಗಳೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಶ್ರೀ ಮೈಲಾರಲಿಂಗೇಶ್ವರ ಭಾವಚಿತ್ರದ ಮೆರವಣಿಗೆ ನಡೆಯಲಿದೆ.ಆನಂತರ ಶ್ಯಾಬಳದ ನಿಂಗಪ್ಪ ಶಾಂತಪ್ಪ ಬೆಂಚಳ್ಳಿ ಮಲ್ಲೇಶಪ್ಪ ರಾಮಪ್ಪ ಶಾಬಣ್ಣವರ, ಮಡ್ಲಿಯ ನಿಂಗರಾಜ ಎಚ್. ಚಿಮ್ಮಕನವರ ಅವರ ನೇತೃತ್ವದಲ್ಲಿ ಡೋಣಿ ತುಂಬಿಸುವುದು. ಆನಂತರ ಸರಪಳಿ-ಪವಾಡ, ಶಸ್ತ್ರ-ಪವಾಡ, ಶಿವದಾರ-ಪವಾಡ, ಆರತಿ-ಪಾವಡಗಳು ಜರುಗುತ್ತವೆ.

ಆನಂತರ ದೇವರಿಗೆ ಹೂವು- ಹಣ್ಣು, ಕಾಯಿ- ಕರ್ಪೂರ ಮಾಡಿಸುವುದು ಇತ್ಯಾದಿ ಕಾರ್ಯಕ್ರಮಗಳು ಜರುಗುವುವು. ಮಧ್ಯಾಹ್ನ ೧.೩೦ಕ್ಕೆ ಅನ್ನಪ್ರಸಾದ ನಡೆಯಲಿದೆ. ಕಾರ್ಯಕ್ರಮದ ಸಾನ್ನಿಧ್ಯವನ್ನು ಗಂಜಿಗಟ್ಟಿಯ ಡಾ. ವೈಜನಾಥ ಶಿವಲಿಂಗ ಶಿವಾಚಾರ್ಯ ಸ್ವಾಮಿಗಳು, ಹಿರೇಮಣಕಟ್ಟಿಯ ವಿಶ್ವರಾಧ್ಯ ಶಿವಾಚಾರ್ಯ ಸ್ವಾಮಿಗಳು, ದೇವರಗುಡ್ಡದ ಗುರು ಮಲ್ಲಪ್ಪಯ್ಯ ಒಡೆಯರ್ ಸ್ವಾಮಿಗಳು, ಗೊಟಗೋಡಿಯ ಮಡಿವಾಳಯ್ಯ ಶಿವಯ್ಯ ಗೊಟಗೋಡಿಮಠ ವಹಿಸುವರು. ಸಂಸದ ಬಸವರಾಜ ಎಸ್. ಬೊಮ್ಮಾಯಿ, ಶಾಸಕ ಯಾಸೀರಖಾನ ಪಠಾಣ, ಬಿಜೆಪಿ ಮುಖಂಡ ಭರತ ಬೊಮ್ಮಾಯಿ, ಹೆಸ್ಕಾಂ ಅಧ್ಯಕ್ಷ ಸಯ್ಯದ ಅಜೀಮ್‌ಪೀರ ಎಸ್. ಖಾದ್ರಿ, ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ, ಇತರರು ಭಾಗವಹಿಸುವರು ಎಂದು ಶ್ರೀ ಮೈಲಾರಲಿಂಗೇಶ್ವರ ಭಕ್ತಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ