ಕನ್ನಡಪ್ರಭ ವಾರ್ತೆ ಪಾವಗಡ
ಜಮೀನಿಗೆ ರಾತ್ರಿ ಸಮಯದಲ್ಲಿ 20 ಹ್ಯಾಂಪ್ಸ್ ಕೊಡುವ ಬದಲು 8 ರಿಂದ10 ಹ್ಯಾಂಪ್ಸ್ ವಿದ್ಯುತ್ ಸರಬರಾಜ್ ಮಾಡುವ ಕಾರಣ ವೋಲ್ಟೇಜ್ ಕಡಿಮೆಯಾಗಿ ಪಂಪ್ ಸೆಟ್‌ಗಳು ಸುಟ್ಟುಹೋಗುತ್ತಿವೆ. ಆದ್ದರಿಂದ ಸಮರ್ಪಕ ವಿದ್ಯುತ್ ಪೂರೈಸುವಂತೆ ಬೆಸ್ಕಾಂ ಇಲಾಖೆಗೆ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ಘಟಕದಿಂದ ತಹಸೀಲ್ದಾರ್ ಸಂತೋಷ್ ಕುಮಾರ್‌ಗೆ ಸೋಮವಾರ ಮನವಿ ಸಲ್ಲಿಸಲಾಯಿತು.ತಾಲೂಕು ರೈತ ಸಂಘದ ಅಧ್ಯಕ್ಷ ದೊಡ್ಡಹಟ್ಟಿಯ ಪೂಜಾರಪ್ಪ ಮಾತನಾಡಿ, ಏಷ್ಯಾ ಖಂಡದಲ್ಲಿಯೇ ಅತಿ ದೊಡ್ಡ ಸೋಲಾರ್ ಪಾರ್ಕ್ ತಾಲೂಕಿನಲ್ಲಿ ಕಾರ್ಯಾರಂಭದಲ್ಲಿದೆ. ಇಲ್ಲಿ ಸುಮಾರು 13ಸಾವಿರ ಎಕರೆಯ ರೈತರ ಜಮೀನಿನಲ್ಲಿ ಸುಮಾರು 2400 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಿ ಹೊರ ರಾಜ್ಯಗಳಿಗೆ ಪೂರೈಕೆ ಮಾಡಲಾಗುತ್ತಿದೆ. ತಾಲೂಕಿನ ರೈತರ ಸ್ಥಿತಿ ದುರಂತಮಯವಾಗಿದೆ ಎಂದು ಆರೋಪಿಸಿದರು.
ಕರ್ನಾಟಕ ರಾಜ್ಯ ವಿದ್ಯುತ್ ಪ್ರಸರಣಾ ನಿಗಮದ ಆದೇಶನ್ವಯ ಪ್ರತಿದಿನ 20 ಹ್ಯಾಂಪ್ಸ್ ವಿದ್ಯುತ್ ಪಂಪ್‌ಸೆಟ್‌ಗಳಿಗೆ ಸರಬರಾಜು ಮಾಡಬೇಕಿದೆ. ಆದರೆ 8-10 ರವರೆಗೆ ಹ್ಯಾಂಪ್ಸ್ ಕೊಡುವ ಕಾರಣ ಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ವಿದ್ಯುತ್ ಪೂರೈಕೆ ಬಗ್ಗೆ ಬೆಸ್ಕಾಂ ಹಾಗೂ ಕೆಪಿಟಿಸಿಎಲ್ ಅಧಿಕಾರಿಗಳು ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂದರು.ಮಳೆ ಕೊರತೆಯಿಂದ ತಾಲೂಕು ಸಂರ್ಪೂಣ ಬರಪೀಡಿತ ಪ್ರದೇಶ ವ್ಯಾಪ್ತಿಗೆ ಒಳಪಟ್ಟಿದೆ. ತಾಲೂಕಿನಲ್ಲಿ 34 ದೊಡ್ಡ ಕೆರೆಗಳಿದ್ದು, ಈ ಕೆರೆಗಳ ದುರಸ್ತಿ ಕಾರ್ಯ/ ಭದ್ರಾ ನೀರು ಹರಿಸಲು ಪೈಪು ಲೈನ್ ಆಳವಡಿಕೆಯಲ್ಲಿ ಕೆಲ ಕೆರೆಗಳಲ್ಲಿ ಕೈಬಿಟ್ಟಿದ್ದಾರೆ. ಪ್ರಶ್ನಿಸಿದರೆ ಭದ್ರಾ ಮೇಲ್ದಂಡೆ ಯೋಜನೆ ವಿಭಾಗದ ಎಂಜಿನಿಯರ್‌ಗಳು ಉದಾಸೀನತೆ ತೋರುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಿ ತಾಲೂಕಿನ ಎಲ್ಲ ಕೆರೆಗಳಿಗೆ ಭದ್ರಾ ಮೇಲ್ದಂಡೆ ನೀರು ಪೂರೈಕೆಯ ಪೈಪ್‌ಲೈನ್ ಆಳವಡಿಸಬೇಕು ಎಂದು ಹೇಳಿದರು.
ಮೆಣಸಿನಕಾಯಿ, ಟೊಮೆಟೋ, ಶೇಂಗಾ, ಹೂವು ಮತ್ತು ಇತರೆ ತೋಟಗಾರಿಕೆ ಬೆಳೆಗಳ ಸಂರಕ್ಷಣೆಯಾಗಬೇಕು. ಅಸರ್ಮಪಕ ವಿದ್ಯುತ್ ಪೂರೈಕೆಯಿಂದ ಈಗಾಗಲೇ ತಾಲೂಕಿನ ಕಸಬಾ, ನಿಡಗಲ್, ವೈ ಎನ್ ಹೊಸಕೋಟೆ ಹಾಗೂ ನಾಗಲಮಡಿಕೆ ಸೇರಿ ಈ ನಾಲ್ಕು ಹೋಬಳಿಗಳಲ್ಲಿ ವಿವಿಧ ರೀತಿಯ ಬೆಳೆಗಳು ಸಂಪೂರ್ಣ ಒಣಗಿ ಹೋಗಿವೆ. ಈ ಹಿನ್ನಲೆಯಲ್ಲಿ ರೈತರ ಪಂಪ್‌ಸೆಟ್‌ಗಳಿಗೆ ತಕ್ಷಣವೇ 20 ಹ್ಯಾಂಪ್ಸ್ ವಿದ್ಯುತ್ ಪೂರೈಕೆ ಮಾಡಬೇಕು ಎಂದರು.ನೀರಿನ ಅಭಾವದ ಹಿನ್ನಲೆಯಲ್ಲಿ ಬೆಳೆ ರಕ್ಷಿಸಲು ಸಾಲ ಮಾಡಿ ಕೊಳವೆ ಬಾವಿ ಕೊರೆಸುತ್ತಾರೆ. ಸಾಲ ತೀರಿಸಲಾಗದೇ ರೈತರು ಹೈರಾಣಾಗುತ್ತಿದ್ದಾರೆ. ಈ ಮದ್ಯೆ ಅಕ್ರಮ ಸಕ್ರಮದಲ್ಲಿ ವಿದ್ಯುತ್ ಕಂಬ ಮತ್ತು ವೈರ್ ಒದಗಿಸಲು ಸಾವಿರಾರು ರು. ಗುತ್ತಿಗೆದಾರರಿಗೆ ಕೊಡಬೇಕು. ಕೊಡದಿದ್ದರೆ ಸತಾಯಿಸುತ್ತಾರೆ. ಇದರಿಂದ ರೈತರು ಹತಾಶೆಯರಾಗಿದ್ದಾರೆ ಎಂದು ಆರೋಪಿಸಿದರು.
ಪದೇ ಪದೇ ಬೆಸ್ಕಾಂ ಇಲಾಖೆಯ ಅಧಿಕಾರಿಗಳು ಸಮರ್ಪಕ ವಿದ್ಯುತ್ ಪೂರೈಕೆಯಲ್ಲಿ ನಿರ್ಲಕ್ಷ್ಯವಹಿಸಿ, ರೈತರ ಜತೆ ಚಲ್ಲಾಟವಾಡಿದರೆ ಇಲ್ಲಿನ ತಾಲೂಕು ರೈತ ಸಂಘ ಮತ್ತು ಎಲ್ಲ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಬೆಸ್ಕಾಂ ಹಾಗೂ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಅನಿರ್ಧಿಷ್ಟಾವಧಿ ಮುಷ್ಕರ ಹೊಡುವುದಾಗಿ ಎಚ್ಚರಿಸಿದರು.ತಾಲೂಕು ರೈತ ಸಂಘದ ಪ್ರಧಾನ ಕಾರ್ಯದರ್ಶಿ ನರಸಣ್ಣ,ಎಎಪಿಯ ರಾಮಾಂಜಿನಪ್ಪ,ಸದಾಶಿವಪ್ಪ,ರೈತ ಸಂಘದ ಕಾರ್ಯದರ್ಶಿ ಪೂಜಾರಿ ಚಿತ್ತಯ್ಯ,ನಾಗಭೂಷಣರೆಡ್ಡಿ,ರೈತ ಸಂಘ ಯುವ ಘಟಕದ ಶಿವು,ದಂಡುಪಾಳ್ಯ ರಾಮಾಂಜನೇಯ. ನರಸಪ್ಪ,ಚಿತ್ತಯ್ಯ,ರಾಮಾಂಜಿ,ಈರಣ್ಣ,ಚಂದ್ರು,ಕೆಂಚಗಾನಹಳ್ಳಿ ಗೋವಿಂದ,ಸಿದ್ದಪ್ಪ,ಗುಡುಪಲ್ಲಪ್ಪ ಹಾಗೂ ಇತರೆ ಆನೇಕ ಮಂದಿ ರೈತ ಸಂಘದ ಪ್ರಮುಖರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.