ರೈತರಿಗೆ ಕೃಷಿ ಪೂರಕ ಸೌಲಭ್ಯ ಕಲ್ಪಿಸಿ: ರೈತ ಸಂಘ

KannadaprabhaNewsNetwork |  
Published : May 30, 2026, 03:00 AM IST
29ಕೆಡಿವಿಜಿ1-ದಾವಣಗೆರೆಯಲ್ಲಿ ಶುಕ್ರವಾರ ಜಿಲ್ಲಾಡಳಿತಕ್ಕೆ ರಾಷ್ಟ್ರೀಯ ಕಿಸಾನ್ ಸಂಘದ ರಾಜ್ಯ ಸಮಿತಿಯಿಂದ ಮನವಿ ಅರ್ಪಿಸಲಾಯಿತು. | Kannada Prabha

ಸಾರಾಂಶ

ಮುಂಬಾರು ಹಂಗಾಮು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ರೈತರು ಸಮರ್ಪಕವಾಗಿ ಕೃಷಿ ಚಟುವಟಿಕೆ ಕೈಗೊಳ್ಳಲು ಪೂರಕವಾದ ಬೀಜ, ಗೊಬ್ಬರ ಇತರೆ ಸೌಲಭ್ಯ ಕಲ್ಪಿಸುವ ಜೊತೆಗೆ ಬೀಜ, ಗೊಬ್ಬರ ವಿತರಿಸುವ ದಿನಾಂಕ ಘೋಷಿಸುವಂತೆ ಒತ್ತಾಯಿಸಿ ರಾಷ್ಟ್ರೀಯ ರೈತ ಸಂಘದ ರಾಜ್ಯ ಸಮಿತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಅರ್ಪಿಸಲಾಯಿತು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಮುಂಬಾರು ಹಂಗಾಮು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ರೈತರು ಸಮರ್ಪಕವಾಗಿ ಕೃಷಿ ಚಟುವಟಿಕೆ ಕೈಗೊಳ್ಳಲು ಪೂರಕವಾದ ಬೀಜ, ಗೊಬ್ಬರ ಇತರೆ ಸೌಲಭ್ಯ ಕಲ್ಪಿಸುವ ಜೊತೆಗೆ ಬೀಜ, ಗೊಬ್ಬರ ವಿತರಿಸುವ ದಿನಾಂಕ ಘೋಷಿಸುವಂತೆ ಒತ್ತಾಯಿಸಿ ರಾಷ್ಟ್ರೀಯ ರೈತ ಸಂಘದ ರಾಜ್ಯ ಸಮಿತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಅರ್ಪಿಸಲಾಯಿತು.

ನಗರದ ಜಿಲ್ಲಾಡಳಿತ ಭವನದಲ್ಲಿ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಕೊಂಚೆ ಶಿವರುದ್ರಪ್ಪ ಇತರರ ನೇತೃತ್ವದಲ್ಲಿ ರೈತ ಮುಖಂಡರು, ರೈತರು, ಮುಂಗಾರು ಆರಂಭಕ್ಕೆ ಮುನ್ನವೇ ರೈತರ ಸಭೆಯನ್ನು ನಡೆಸಿ, ಬಿತ್ತನೆ ಬೀಜ, ಗೊಬ್ಬರ ವಿತರಣೆಯ ದಿನಾಂಕವನ್ನು ನಿಗದಿಪಡಿಸುವಂತೆ ಒತ್ತಾಯಿಸಿ ಮನವಿ ಪತ್ರವನ್ನು ಅರ್ಪಿಸಿದರು.

ಇದೇ ವೇಳೆ ಮಾತನಾಡಿದ ಸಂಘಟನೆ ಮುಖಂಡರು, ಮುಂಗಾರು ಹಂಗಾಮು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ರೈತರು ಎದುರಿಸುತ್ತಿರುವ ಜ್ವಲಂತ ಸಮಸ್ಯೆ ಬಗೆಹರಿಸಲು ಮತ್ತು ಕೃಷಿ ಚಟುವಟಿಕೆಗಳಿಗೆ ಪೂರಕ ಸೌಲಭ್ಯ ತಕ್ಷಣ ಒದಗಿಸಬೇಕು. ​ಪ್ರತಿ ಮುಂಗಾರು ಪ್ರಾರಂಭವಾಗುವ ಮುನ್ನ ಕಡ್ಡಾಯವಾಗಿ ರೈತರ ಸಭೆ ಮಾಡಿ, ರೈತರ ಬೇಡಿಕೆ ಹಾಗೂ ಮುಂಗಾರು ಕೃಷಿ ಯೋಜನೆಯನ್ನು ಸರ್ಕಾರದ ಮುಖಾಂತರ ಬಜೆಟ್‌ನಲ್ಲಿ ಸೂಕ್ತವಾಗಿ ಚರ್ಚಿಸಿ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.

ರೈತರಿಗೆ ​ಕಾಲಮಿತಿಯೊಳಗೆ ಸೌಲಭ್ಯ ವಿತರಿಸಬೇಕು. ರೈತರಿಗೆ ಅತ್ಯಾವಶ್ಯಕವಾದ ಗುಣಮಟ್ಟದ ಬಿತ್ತನೆ ಬೀಜಗಳು, ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ವಿತರಿಸುವ ದಿನಾಂಕಗಳನ್ನು ಮುಂಚೆಯೇ ನಿಗದಿಪಡಿಸಿ, ಕಾಲಮಿತಿಯಲ್ಲೇ ಅದನ್ನು ಅನುಷ್ಠಾನಗೊಳಿಸಬೇಕು. ಜಿಲ್ಲಾಧಿಕಾರಿಗಳು, ಜಂಟಿ ಕೃಷಿ ನಿರ್ದೇಶಕರು ಹಾಗೂ ತೋಟಗಾರಿಕೆ ನಿರ್ದೇಶಕರು ರೈತ ಮುಖಂಡರೊಂದಿಗೆ ಸಭೆ ನಡೆಸಿ ಚರ್ಚಿಸಬೇಕು ಎಂದರು.

ರೈತರ ನೆರವಿಗೆ ಶಾಶ್ವತ ಯೋಜನೆ ಜಾರಿಗೊಳಿಸುವ ಮೂಲಕ ರೈತರ ಆತ್ಮಹತ್ಯೆ ತಡೆಗೆ ಸರ್ಕಾರಗಳು ಮುಂದಾಗಬೇಕು. ರೈತರ ಆತ್ಮಹತ್ಯೆ ಅಂಕಿ ಅಂಶಕ್ಕೆ ಸಂಬಂಧಿಸಿದ ‘ರಾಷ್ಟ್ರೀಯ ಅಪರಾಧಗಳ ದಾಖಲೆಗಳ ಬ್ಯೂರೊ’ದ 2024ರ ವರದಿ ಆತಂಕ ಹುಟ್ಟಿಸುವಂತಿದೆ ಎಂದು ತಿಳಿಸಿದರು.

ಏನೆಲ್ಲ ತೊಂದರೆಗಳನ್ನು ಎದುರಿಸಿ, ಬೆಳೆ ಕೈಗೆ ಬರುವ ಹೊತ್ತಿಗೆ ರೈತರ ಸ್ಥಿತಿ ಚಿಂತಾಜನಕವಾಗಿರುತ್ತದೆ. ಬೆಳೆಯನ್ನು ಹೊಲದಿಂದಲೇ ನೇರವಾಗಿ ಮಾರುಕಟ್ಟೆಗೆ ಸಾಗಿಸುವ ಅನಿವಾರ್ಯತೆ ರೈತರದ್ದಾಗಿದೆ. ಗಗನಕ್ಕೇರಿದ್ದ ಬೆಲೆ, ರೈತನ ಕೈಗೆ ಬೆಳೆ ಬರುವ ವೇಳೆಗೆ ಪಾತಾಳಕ್ಕಿಳಿದಿರುತ್ತದೆ. ಕೃಷಿ ಉತ್ಪನ್ನಗಳನ್ನು ರೈತರಿಂದಲೇ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ವ್ಯವಸ್ಥೆ ನಮ್ಮಲ್ಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಬಿಸಿಲು, ಮಳೆ, ಚಳಿಗೆ ಮೈಯೊಡ್ಡಿ ದುಡಿದು ಹೈರಾಣಾಗುವ ರೈತರಿಗೆ ತಮ್ಮ ಕೃಷಿ ಉತ್ಪಾದನೆಯಿಂದ ಲಾಭವಾಗುತ್ತಿಲ್ಲ. ನಗರ ಪ್ರದೇಶಗಳ ಹವಾನಿಯಂತ್ರಿತ ಕೋಣೆಗಳಲ್ಲಿ ಕುಳಿತು ರೈತರ ಕೃಷಿ ಉತ್ಪನ್ನಗಳ ವಹಿವಾಟು ನಡೆಸುವ ಮಧ್ಯವರ್ತಿಗಳಿಗೆ ರೈತರ ದುಡಿಮೆ ಫಲ ಪ್ರಾಪ್ತವಾಗುತ್ತಿದೆ. ಅಭಿವೃದ್ಧಿ ಹೆಸರಿನಲ್ಲಿ ರೈತರ ಭೂಮಿ ಕಬಳಿಕೆಯಾಗುತ್ತಿದೆ. ಕಾರ್ಖಾನೆ, ವಿಶ್ವವಿದ್ಯಾಲಯಗಳು, ಸರ್ಕಾರದ ಆಡಳಿತ ಕಚೇರಿಗಳು, ಇವೆಲ್ಲವುಗಳ ಸ್ಥಾಪನೆಗೆ ಸಾವಿರಾರು ಎಕರೆ ಕೃಷಿಭೂಮಿ ಬಳಕೆಯಾಗುತ್ತಿದೆ ಎಂದು ದೂರಿದರು.

ಸಂಘಟನೆ ರಾಜ್ಯ ಕಾರ್ಯಾಧ್ಯಕ್ಷ ಡಾ.ಮಲ್ಲಿಕಾರ್ಜುನ, ಜಿಲ್ಲಾಧ್ಯಕ್ಷ ಜಿ.ಎಸ್.ತಿಪ್ಪೇಸ್ವಾಮಿ, ಬಿ.ಎನ್.ವಿಜಯಕುಮಾರ, ಜಿ.ಎಚ್.ವಿಜಯಪ್ರಕಾಶ, ಕೆ.ಎಸ್.ಶಿವಕುಮಾರ, ಎಸ್.ಆರ್.ಬಸವರಾಜಪ್ಪ, ಬಿ.ಕೆ.ಪರಮೇಶ, ಎಂ.ಎಸ್.ರಮೇಶ, ಬಿ.ಎಸ್.ಶಿವಶಂಕರಮೂರ್ತಿ, ರುದ್ರೇಶ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಕಸಿತ ಭಾರತಕ್ಕೆ ಅಮೂಲ್ಯ ಕೊಡುಗೆ ನೀಡಿ: ಉಪರಾಷ್ಟ್ರಪತಿ ರಾಧಾಕೃಷ್ಣನ್
ದುಗ್ಗಹಳ್ಳಿಯಲ್ಲಿ ಅದ್ಧೂರಿ ಬಸವ ಜಯಂತಿ ಆಚರಣೆ