ಭೂಮಿ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ಒದಗಿಸಿ: ರೈತರ ಆಕ್ರೋಶ

KannadaprabhaNewsNetwork | Published : May 22, 2024 12:50 AM

ಸಾರಾಂಶ

ರೈತರೆಲ್ಲಾ ತೀರ್ಮಾನ ಮಾಡಿ ಮತ್ತೊಮ್ಮೆ ಸಭೆ ನಿಗದಿ ಮಾಡುತ್ತೇವೆ. ಈ ಸಭೆಗೆ ವಿದ್ಯುತ್ ಇಲಾಖೆಗೆ ಸಂಬಂಧಪಟ್ಟ ಮುಖ್ಯ ಇಂಜಿನಿಯರ್‌ಗಳು ತಪ್ಪದೇ ಭಾಗವಹಿಸಿ ರೈತರ ಸಮಸ್ಯೆಗಳನ್ನು ಆಲಿಸಿ ಸಮರ್ಪಕವಾಗಿ ಪರಿಹಾರ ನೀಡಬೇಕು. ಇಲ್ಲವಾದರೆ ಯಾವುದೇ ಕಾರಣಕ್ಕೂ ಕಾಮಗಾರಿಯನ್ನು ಮಾಡಲು ಬಿಡುವುದಿಲ್ಲ.

ಕನ್ನಡಪ್ರಭ ವಾರ್ತೆ ಬೇಲೂರು

ತಾಲೂಕಿನ ಅರೇಹಳ್ಳಿ ಹೋಬಳಿ ಅನುಘಟ್ಟ ಗ್ರಾಪಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ೬೬ ಕೆವಿ ವಿದ್ಯುತ್ ಸರಬರಾಜಿಗಾಗಿ ಭೂಮಿ ಕಳೆದುಕೊಂಡಿರುವ ರೈತರಿಗೆ ಸೂಕ್ತ ಪರಿಹಾರ ಒದಗಿಸದಿರುವ ಬಗ್ಗೆ ರೈತ ಮುಖಂಡರು ಕೆಪಿಟಿಸಿಎಲ್ ಜಿಲ್ಲಾ ಸಹಾಯಕ ಅಭಿಯಂತರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಅನುಘಟ್ಟ ಗ್ರಾಪಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಹಾಸನ ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸ್ವಾಮೀಗೌಡ ಮಾತನಾಡಿ, ಸರ್ಕಾರವು ಗ್ರಾಮೀಣ ಭಾಗದಲ್ಲಿ ಕೈಗೊಳ್ಳುತ್ತಿರುವ ಅಭಿವೃದ್ಧಿ ಕಾರ್ಯಕ್ಕೆ ನಮ್ಮ ವಿರೋಧವಿಲ್ಲ. ಆದರೆ ರೈತರ ಭೂಮಿಗೆ ವೈಜ್ಞಾನಿಕ ದರ ನಿಗದಿ ಮಾಡದೇ ಹೋದರೆ ಖಂಡಿತವಾಗಿ ನಾವು ಭೂಮಿಯನ್ನು ಕೊಡಲು ಒಪ್ಪುವುದಿಲ್ಲವೆಂದು ಹೇಳಿದರು.

ಸೂಕ್ತವಾಗಿ ಸ್ಥಳ ಪರಿಶೀಲನೆ ಮಾಡದೇ ದರ ನಿಗದಿ ಮಾಡಿರುವುದರಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಬೆಲೆಬಾಳುವ ಗಿಡಮರಗಳನ್ನು ಹಲವಾರು ವರ್ಷಗಳಿಂದ ರೈತರು ಬೆಳೆಸಿದ್ದಾರೆ. ಕಣ್ಣೊರೆಸುವ ತಂತ್ರಕ್ಕೆ ಬಿಡಿಗಾಸನ್ನು ನೀಡಿ ಕಾಮಗಾರಿ ಆರಂಭಿಸಲು ಪ್ರಯತ್ನಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು.

ರೈತ ಸಂಘದ ತಾಲೂಕಾಧ್ಯಕ್ಷ ಭೋಗಮಲ್ಲೇಶ್ ಮಾತನಾಡಿ, ರೈತರೆಲ್ಲಾ ತೀರ್ಮಾನ ಮಾಡಿ ಮತ್ತೊಮ್ಮೆ ಸಭೆ ನಿಗದಿ ಮಾಡುತ್ತೇವೆ. ಈ ಸಭೆಗೆ ವಿದ್ಯುತ್ ಇಲಾಖೆಗೆ ಸಂಬಂಧಪಟ್ಟ ಮುಖ್ಯ ಇಂಜಿನಿಯರ್‌ಗಳು ತಪ್ಪದೇ ಭಾಗವಹಿಸಿ ರೈತರ ಸಮಸ್ಯೆಗಳನ್ನು ಆಲಿಸಿ ಸಮರ್ಪಕವಾಗಿ ಪರಿಹಾರ ನೀಡಬೇಕು. ಇಲ್ಲವಾದರೆ ಯಾವುದೇ ಕಾರಣಕ್ಕೂ ಕಾಮಗಾರಿಯನ್ನು ಮಾಡಲು ಬಿಡುವುದಿಲ್ಲ ಎಂದು ಖಾರವಾಗಿ ನುಡಿದರು.

ಕೆಪಿಟಿಸಿಎಲ್‌ನ ಜಿಲ್ಲಾ ಸಹಾಯಕ ಅಭಿಯಂತರ ಜಗದೀಶ್ ಮಾತನಾಡಿ, ಇಲಾಖೆಯು ಸಬ್‌ ರಿಜಿಸ್ಟ್ರಾರ್ ಕಚೇರಿಯಲ್ಲಿ ಮಾಹಿತಿ ತೆಗೆದುಕೊಂಡು ಅದಕ್ಕಿರುವ ಮೌಲ್ಯವನ್ನು ಲೆಕ್ಕಹಾಕಿ ಇಂತಿಷ್ಟು ದರ ಎಂದು ಮಾನ್ಯ ಜಿಲ್ಲಾಧಿಕಾರಿಯವರು ಬೆಲೆ ನಿಗದಿ ಮಾಡಿದ್ದಾರೆ. ಗುಂಟೆಗೆ ೫ ಸಾವಿರದಂತೆ ಎಕರೆಗೆ ೨ ಲಕ್ಷದ ಪರಿಹಾರದಂತೆ ಮೊದಲ ಕಂತಿನ ಹಣವಾಗಿ ೨೫,೦೦೦ರು.ಗಳನ್ನು ಫಲಾನುಭವಿಗಳಿಗೆ ನೀಡಲಾಗಿದೆ. ರೈತರ ಬೇಡಿಕೆಯಂತೆ ಮೇಲ್ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಿ ಸಭೆಗೆ ಭಾಗವಹಿಸುವಂತೆ ಮನವಿ ಮಾಡಿಕೊಳ್ಳುತ್ತೇವೆ ಎಂದರು.

ರೈತ ಸಂಘದ ರಾಜೇಗೌಡ, ಕೆಸಿಬಿಎಸ್ ಅಧ್ಯಕ್ಷ ಬಿ.ಪಿ ಬಸವರಾಜು, ಅರೇಹಳ್ಳಿಯ ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಬಿ ಪುಟ್ಟರಾಜು, ರೈತ ಮುಖಂಡರಾದ ಸುರೇಶ್, ಕುಮಾರ್, ಅನುಘಟ್ಟ ಪಿಎಸಿಸಿ ಕಾರ್ಯನಿರ್ವಾಹಕ ಅಧಿಕಾರಿ ಸತೀಶ್, ಹಾಗೂ ಫಲಾನುಭವಿ ರೈತರು ಭಾಗವಹಿಸಿದ್ದರು.

Share this article