ಕನ್ನಡಪ್ರಭ ವಾರ್ತೆ ಬಾದಾಮಿ
ದಕ್ಷಿಣ ಭಾರತದಲ್ಲಿಯೇ ಸುಪ್ರಸಿದ್ಧ ಶ್ರೀ ಬನಶಂಕರಿ ದೇವಿ ಜಾತ್ರೆಯು ಜ.೨೫ ರಿಂದ ನಿರಂತರ ಒಂದು ತಿಂಗಳು ಕಾಲ ನಡೆಯಲಿದ್ದು, ಇದರ ಪೂರ್ವಭಾವಿಯಾಗಿ ಕೈಗೊಂಡಿರುವ ಪೂರ್ವಸಿದ್ಧತೆಗಳನ್ನು ಗುರುವಾರ ಅವರು ಬನಶಂಕರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಯಾವುದೇ ಲೋಪದೋಷಗಳಾಗದಂತೆ ಎಲ್ಲ ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕು. ಲಕ್ಷಾಂತರ ಜನ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕು. ಕಳ್ಳತನ ಪ್ರಕರಣ ನಡೆಯದಂತೆ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು ಎಂದು ಹೇಳಿದರು.ಬಾದಾಮಿಯಿಂದ ಬನಶಂಕರಿಯವರೆಗೆ ರಸ್ತೆ ಡಾಂಬರೀಕರಣ ಕಾಮಗಾರಿ ಪ್ರಗತಿಯಲ್ಲಿದ್ದು, ಕೂಡಲೇ ಮುಗಿಸಬೇಕು ಎಂದು ಸೂಚಿಸಲಾಗಿದೆ. ಪುರಸಭೆಯವರು ರಸ್ತೆಯಲ್ಲಿ ಧೂಳಾಗದಂತೆ ಪ್ರತಿ ದಿನ ಸಂಜೆ ನೀರು ಸಿಂಪಡಿಸಬೇಕು. ಆರೋಗ್ಯ ಇಲಾಖೆಯವರು ಜಾತ್ರೆಯಲ್ಲಿ ಸ್ವಚ್ಛತೆ ಬಗ್ಗೆ ಗಮನಹರಿಸಬೇಕು. ತುರ್ತು ಚಿಕಿತ್ಸೆ ನೀಡಲು ಅಗತ್ಯ ವೈದ್ಯರು ಮತ್ತು ಸಿಬ್ಬಂದಿಯನ್ನು ನೇಮಿಸಬೇಕು ಎಂದರು.
ನಂತರ ಬನಶಂಕರಿಯಲ್ಲಿರುವ ಗಾಯತ್ರಿ ಪೀಠದ ಸಮುದಾಯ ಭವನದಲ್ಲಿ ತಾಲೂಕುಮಟ್ಟದ ಅಧಿಕಾರಿಗಳ ಸಭೆ ನಡೆಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ ಜೆ.ಬಿ.ಮಜ್ಜಗಿ, ತಾಪಂ ಇಒ ಮಲ್ಲಿಕಾರ್ಜುನ ಕಲಾದಗಿ, ಬಿಇಒ ಎನ್.ವೈ.ಕುಂದರಗಿ, ಎಪಿಎಂಸಿ ಕಾರ್ಯದರ್ಶಿ ರವಿ ರಾಠೋಡ, ಪಿಡಿಒ ರವಿ ದೊಡಮನಿ, ಕಾರ್ಯದರ್ಶಿ ಸ್ವಾತಪ್ಪನ್ನವರ, ಪುರಸಭೆ ಸದಸ್ಯ ಮಂಜುನಾಥ ಹೊಸಮನಿ, ಮುಖಂಡರಾದ ಹನಮಂತ ಅಪ್ಪನ್ನವರ, ಶಿವುಕುಮಾರ ಹಿರೇಮಠ, ಬಸವರಾಜ ತಳವಾರ, ಬಸಯ್ಯ ಹಂಪಿಹೊಳಿ ಸೇರಿದಂತೆ ತಾಲೂಕುಮಟ್ಟದ ಅಧಿಕಾರಿಗಳು, ಬನಶಂಕರಿ ಟ್ರಸ್ಟ್ ಕಮಿಟಿ ಪದಾಧಿಕಾರಿಗಳು, ಗ್ರಾಪಂ ಸದಸ್ಯರು, ಚೊಳಚಗುಡ್ಡ ಗ್ರಾಮದ ಹಿರಿಯರು ಇದ್ದರು.