ಕಾರವಾರ: ಪೊಲೀಸ್ ಹಾಗೂ ಮಿಲಿಟರಿ ಕ್ಯಾಂಟೀನ್ ಮಾದರಿಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗೂ ಸಹ ಕ್ಯಾಂಟೀನ್ ಸೌಲಭ್ಯ ಒದಗಿಸಬೇಕೆಂದು ವನ್ಯಜೀವಿ ಸಂರಕ್ಷಣಾವಾದಿ ಗಿರಿಧರ ಕುಲಕರ್ಣಿ ಹಾಗೂ ಬೆಳಗಾವಿ ಅರಣ್ಯ ವೃತ್ತದ ಇಲಾಖೆ ನೌಕರರ ನಿಯೋಗ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ.
ಬೆಳಗಾವಿಯಲ್ಲಿ ಸಚಿವರನ್ನು ಭೇಟಿ ಮಾಡಿದ ಗಿರಿಧರ ಕುಲಕರ್ಣಿ, ಬೆಳಗಾವಿ ಅರಣ್ಯ ವೃತ್ತದ ವಲಯ ಅರಣ್ಯ ಅಧಿಕಾರಿಗಳ ಸಂಘ, ಉಪ ವಲಯ ಅರಣ್ಯ ಅಧಿಕಾರಿಗಳ ಸಂಘ ಹಾಗೂ ಗಸ್ತು ಅರಣ್ಯ ಪಾಲಕರ ಮತ್ತು ಅರಣ್ಯ ವೀಕ್ಷಕರ ಸಂಘದ ನಿಯೋಗ ಪೊಲೀಸ್ ಕ್ಯಾಂಟೀನ್ ಸೌಲಭ್ಯಗಳನ್ನು ಅರಣ್ಯ ಸಿಬ್ಬಂದಿಗೆ ವಿಸ್ತರಿಸಲು ಆದಷ್ಟು ಬೇಗ ಕ್ರಮಕೈಗೊಳ್ಳಲು ವಿನಂತಿಸಿತು. ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸಚಿವರು ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.ಅರಣ್ಯ ಇಲಾಖೆಯ ಸಿಬ್ಬಂದಿಗೆ ಪೊಲೀಸ್ ಹಾಗೂ ಮಿಲಿಟರಿ ಕ್ಯಾಂಟೀನ್ ಮಾದರಿಯಲ್ಲಿ ಕ್ಯಾಂಟೀನ್ ಸೌಲಭ್ಯ ಒದಗಿಸಬೇಕೆಂದು ಅರಣ್ಯ ಸಚಿವರು, ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವಾಲಯ ಹಾಗೂ ಅರಣ್ಯ ಇಲಾಖೆಗೆ ವನ್ಯಜೀವಿ ಸಂರಕ್ಷಣಾವಾದಿ ಗಿರಿಧರ ಕುಲಕರ್ಣಿ ಕಳೆದ ವರ್ಷ ಹಾಗೂ ಈ ವರ್ಷ ಹಲವಾರು ಬಾರಿ ಪ್ರಸ್ತಾವನೆ ಸಲ್ಲಿಸಿದ್ದರು. ಈ ಪ್ರಸ್ತಾವನೆ ಮೇರೆಗೆ ಮುಖ್ಯ ವನ್ಯಜೀವಿ ಪರಿಪಾಲಕರ ಕಚೇರಿಯಿಂದ ಹೆಚ್ಚಿನ ದಾಖಲಾತಿ ಕೂಡ ಕೇಳಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಗಿರಿಧರ್ ತಮಿಳುನಾಡಿನಲ್ಲಿ ಈಗಾಗಲೇ ಜಾರಿಯಲ್ಲಿರುವ ಕ್ಯಾಂಟೀನ್ ಯೋಜನೆ ಕುರಿತು ಅವಶ್ಯ ದಾಖಲೆ ಸಲ್ಲಿಸಿದ್ದರು.
ಸಚಿವರನ್ನು ಭೇಟಿ ಮಾಡಿದ ನಿಯೋಗದಲ್ಲಿ ವನ್ಯಜೀವಿ ಸಂರಕ್ಷಣಾವಾದಿ ಗಿರಿಧರ ಕುಲಕರ್ಣಿ, ಬೆಳಗಾವಿ ವೃತ್ತದ ವಲಯ ಅರಣ್ಯ ಅಧಿಕಾರಿಗಳ ಸಂಘದ ಪರವಾಗಿ ಪ್ರಶಾಂತ್ ಜೈನ್, ಸಚಿನ್ ಹೊನ್ಮನಿ, ರತ್ನಾಕರ್ ಓಬಣ್ಣವರ, ರಾಕೇಶ ಅರ್ಜುನವಾಡ, ಬಿ.ಎಲ್. ಸನದಿ ಹಾಗೂ ಉಪ ವಲಯ ಅರಣ್ಯ ಅಧಿಕಾರಿಗಳ ಸಂಘದ ಪರವಾಗಿ ರಮೇಶ ಗಿರಿಯಪ್ಪನವರ, ವಿನಯ್ ಗೌಡರ ಮತ್ತು ಗಸ್ತು ಅರಣ್ಯ ಪಾಲಕರ ಮತ್ತು ಅರಣ್ಯ ವೀಕ್ಷಕರ ಸಂಘದ ಪರವಾಗಿ ಗಿರೀಶ ಬಣ್ಣದ, ಮಹಾತೇಶ ಹಿಪ್ಪರಗಿ ಇದ್ದರು.