ಧಾರವಾಡ: ಸದ್ಯದ ಮಟ್ಟಿಗೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಂಪನ್ಮೂಲ ಸಾಕಷ್ಟಿದ್ದು, ಬೇಸಿಗೆ ಸಮಯದಲ್ಲಿ ಜನತೆಗೆ ಶುದ್ಧ ಕುಡಿಯುವ ನೀರನ್ನು ಪೂರೈಕೆ ಮಾಡುವಲ್ಲಿ ಎಚ್ಚರ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಹುಬ್ಬಳ್ಳಿ ನಗರಕ್ಕೆ ನೀರಸಾಗರ ಜಲಾಶಯದಿಂದ ಕುಡಿಯುವ ನೀರು ಒದಗಿಸಲಾಗುತ್ತಿದೆ. ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಗಳ ಅನುಷ್ಠಾನಕ್ಕೆ ಪಾಲಿಕೆ ಮುಂದಾಗಬೇಕು. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ 82 ವಾರ್ಡ್‌ಗಳಲ್ಲಿ ಸುಮಾರು 23 ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆಯಾಗುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗುವ ವಾರ್ಡ್‌ಗಳಿಗೆ ಸಮಿತಿ ರಚಿಸಿ, ಮಾಹಿತಿ ಸಂಗ್ರಹಿಸಬೇಕಾಗಿದೆ. ಮುಂದಿನ ಮೂರು ದಿನಗಳಲ್ಲಿ ವರದಿ ಸಲ್ಲಿಸಬೇಕು ಎಂದು ಪಾಲಿಕೆ ಆಯುಕ್ತರಿಗೆ ಸಚಿವರು ನಿರ್ದೇಶನ ನೀಡಿದರು.
ಮಳೆಗಾಲದ ಸಂದರ್ಭದಲ್ಲಿ ಅರಣ್ಯ ಇಲಾಖೆ, ಹೆಸ್ಕಾಂ ಹಾಗೂ ತಹಸೀಲ್ದಾರರು ಹೆಚ್ಚಾಗಿ ತಮ್ಮ ಕಾರ್ಯಸ್ಥಾನಗಳಲ್ಲಿ ಇರಬೇಕು. ಜನರಿಂದ ದೂರುಗಳು ಬಂದ ತಕ್ಷಣ ಸ್ಪಂದಿಸಬೇಕಾಗುತ್ತದೆ. ಕಲಘಟಗಿ ತಾಲೂಕಿನಾದ್ಯಂತ ಕಳೆದ ಮೂರು ತಿಂಗಳಲ್ಲಿ 623 ಟ್ರಾನ್ಸ್‌ಫಾರ್ಮರ್‌ಗಳು ಹಾಳಾಗಿವೆ. ಹೀಗಾಗಿ ಹೆಚ್ಚಿನ ಗಮನ ಹರಿಸಬೇಕಾಗಿದೆ ಎಂದು ಸಚಿವರು ಹೇಳಿದರು.ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ನವಲಗುಂದದಲ್ಲಿ ಯಾವುದೇ ರೀತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದು ವರದಿ ಮಾಡಲಾಗಿದೆ. ಆದರೆ ಯಮನೂರು, ಕೊಂಗವಾಡ ಹಳ್ಳಿಗಳಿಗೆ ಸ್ವತಃ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬರೀ ಕುಡಿಯುವ ನೀರಲ್ಲ, ಶುದ್ಧ ಕುಡಿಯುವ ನೀರು ಕೊಡುವ ಬಗ್ಗೆ ಅಧಿಕಾರಿಗಳು ಗಮನ ವಹಿಸಬೇಕು. ಜಲಜೀವನ ಮಿಷನ್ ಕಾಮಗಾರಿಗಳಲ್ಲಿ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ ಎಂಬ ದೂರುಗಳಿವೆ. ಅವುಗಳನ್ನು ದುರಸ್ತಿ ಪಡಿಸಿ, ಕುಡಿಯುವ ನೀರು ಒದಗಿಸಬೇಕು. ವಿದ್ಯುತ್ ತಂತಿಗಳು ಕೆಳಮಟ್ಟದಲ್ಲಿ ಇರುವುದನ್ನು ಸರಿಪಡಿಸಬೇಕು. ಹಳ್ಳಿಗಳಲ್ಲಿ ಕೊರೆಸಿದ ಬೋರ್‌ವೆಲ್‌ಗಳಿಗೆ ಚೌಕಟ್ಟು ನಿರ್ಮಾಣ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.