-ಸಚಿವ ದರ್ಶನಾಪೂರ ಭರವಸೆ । ಕೇಂದ್ರ ಪುರಸ್ಕೃತ ಅಮೃತ 2.0 ಯೋಜನೆಯಡಿ ಕುಡಿವ ನೀರು ಸರಬರಾಜು ಯೋಜನೆಗೆ ಶಂಕುಸ್ಥಾಪನೆ
ಕನ್ನಡಪ್ರಭ ವಾರ್ತೆ ಯಾದಗಿರಿ
ಯಾದಗಿರಿ, ಶಹಾಪುರ ಮತ್ತು ಸುರಪುರಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಅವಶ್ಯಕ ಕ್ರಮ ಕೈಗೊಳ್ಳಲಾಗಿದೆ ಎಂದು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವ ಶರಣಬಸಪ್ಪ ದರ್ಶನಾಪೂರ ಅವರು ಹೇಳಿದರು.ಯಾದಗಿರಿ ನಗರಕ್ಕೆ ಭೀಮಾ ನದಿ ಮೂಲದಿಂದ ಕೇಂದ್ರ ಪುರಸ್ಕೃತ ಅಮೃತ 2.0 ಯೋಜನೆ ಅಡಿಯಲ್ಲಿ ಕುಡಿಯುವ ನೀರು ಸರಬರಾಜು ಯೋಜನೆಗೆ ನಗರದ ಕಮಲಾ ನೆಹರು ಉದ್ಯಾನವನದಲ್ಲಿ ಸೋಮವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಯಾದಗಿರಿ ನಗರಕ್ಕೆ ಕುಡಿಯುವ ನೀರು ಪೂರೈಕೆಗಾಗಿ ಆರು ವಲಯಗಳನ್ನಾಗಿ ಗುರ್ತಿಸಲಾಗಿದೆ. ನೀರಿನ ಒತ್ತಡಕ್ಕೆ ಅನುಗುಣವಾಗಿ ನೂತನ ಪೈಪ್ ಲೈನ್ ಗಳನ್ನು ಅಳವಡಿಸುವ ಮೂಲಕ ನೀರು ಸರಬರಾಜು ಮಾಡಲು ಉದ್ದೇಶಿಸಲಾಗಿದ್ದು, ಈಗಾಗಲೇ ಭೀಮಾನದಿ ಹತ್ತಿರ ನೀರು ಶುದ್ಧೀಕರಣ ಘಟಕ ಕಾಮಗಾರಿಗಳು ಅಂತಿಮ ಹಂತದಲ್ಲಿವೆ. ಅದರಂತೆ ಇಂದು ಕಮಲಾ ನೆಹರು ಉದ್ಯಾನವನದಲ್ಲಿ 7.50 ಲಕ್ಷ ಲೀಟರ್ ಸಾಮರ್ಥ್ಯದ 15 ಮೀಟರ್ ಎತ್ತರದ ಮೇಲ್ಮಟ್ಟದ ಜಲಸಂಗ್ರಹಗಾರ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಮಾತನಾಡಿ, ಯಾದಗಿರಿ ನಗರದ ಹಲವಾರು ವರ್ಷಗಳ ಬೇಡಿಕೆಯಾದ ಶುದ್ಧ ನೀರು ಪೂರೈಸುವ ಯೋಜನೆಯ ಕನಸು ನನಸಾಗಲಿದೆ. ಮುಂದಿನ ದಿನಗಳಲ್ಲಿ ಈ ಯೋಜನೆ ಪೂರ್ಣಗೊಂಡ ನಂತರ ವಾರದ ಐದು ದಿನಗಳ ಕಾಲ ನಾಗರಿಕರಿಗೆ ನೀರು ದೊರೆಯಲು ಸಹಕಾರಿಯಾಗಲಿದೆ ಎಂದರು.
ನಗರ ನೀರು ಸರಬರಾಜು ಇಲಾಖೆಯ ಅಧಿಕಾರಿ ಇಲಾಖೆ ಅಧಿಕಾರಿ ರಾಜಕುಮಾರ್ ಅವರು ಯೋಜನೆಯ ಬಗ್ಗೆ ವಿವರಿಸಿದರು. ನಗರಸಭೆ ಪೌರಾಯುಕ್ತ ಉಮೇಶ್ ಚವ್ಹಾಣ್ ಸ್ವಾಗತಿಸಿದರು. ರಾಮ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
ಯಾದಗಿರಿ ನಗರಕ್ಕೆ ಭೀಮಾ ನದಿ ಮೂಲದಿಂದ ಕೇಂದ್ರ ಪುರಸ್ಕೃತ ಅಮೃತ 2.0 ಯೋಜನೆ ಅಡಿ ಕುಡಿಯುವ ನೀರು ಸರಬರಾಜು ಯೋಜನೆಗೆ ನಗರದ ಕಮಲಾ ನೆಹರು ಉದ್ಯಾನವನದಲ್ಲಿ ಸೋಮವಾರ ಶಂಕುಸ್ಥಾಪನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ನೆರವೇರಿಸಿದರು.